ಬೀದರ: ವಿದ್ಯಾರ್ಥಿಗಳೇ ತರಹೇವಾರಿ ತರಕಾರಿ- ಹೂವುಗಳನ್ನು ಬೆಳೆದು, ಮಾರಾಟ ಮಾಡುವ ಮೂಲಕ ಕಲಿಕೆಯೊಂದಿಗೆ ಗಳಿಕೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಆ ಮೂಲಕ ಪ್ರಾಯೋಗಿಕ ಕಲಿಕೆಯಲ್ಲೇ ರೈತರಾಗುವುದರ ಜತೆಗೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಗುಣಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳೇ ವಿಶೇಷ ಪ್ರಾಯೋಗಿಕ ಚಟುವಟಿಕೆಗೆ ಸಾಕ್ಷಿಯಾಗುತ್ತಿದ್ದಾರೆ.
ಪದವಿಯಲ್ಲಿ ವಿದ್ಯಾರ್ಥಿಗಳಿಗೆ 6 ತಿಂಗಳ ಪ್ರಾಯೋಗಿಕ ಕಲಿಕೆ ಕಡ್ಡಾಯ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕೃಷಿ ಮತ್ತು ಮಾರುಕಟ್ಟೆ ಅನುಭವ ಪಡೆಯುವುದು ಓದಿನ ಭಾಗವಾಗಿದೆ. ಅದರಂತೆ ತರಕಾರಿ, ಹೂವು ಬೆಳೆಸುವ ಮಕ್ಕಳಿಗೆ ಮಾರುಕಟ್ಟೆಯ ಜ್ಞಾನ ಒದಗಿಸುವುದರ ಜತೆಗೆ ಅವರಿಗೆ ಹಣ ಗಳಿಸಲು ವಿವಿ ಅವಕಾಶ ಮಾಡಿಕೊಟ್ಟಿದೆ.
ನಗರದ ಹೊರವಲಯದ ಹಳ್ಳದಕೇರಿಯ ಕಾಲೇಜು ಕ್ಯಾಂಪಸ್ ಮತ್ತು ಪಾಲಿ ಹೌಸ್‌ನ ಒಟ್ಟು 5 ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿಗಳೇ ತರಕಾರಿ, ಹೂವು ಬೆಳೆಯುತ್ತಾರೆ. ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಬೆಳೆಗಳಿಗೆ ಕಾಲ-ಕಾಲಕ್ಕೆ ನಿತ್ಯ ನಿರುಣಿಸಿ, ನೈಸರ್ಗಿಕ ತಿಪ್ಪೆ-ಎರೆಹುಳ್ಳು ಗೊಬ್ಬರ, ನೀಮ್ ಆಯಿಲ್ ಸಿಂಪರಣೆ ಮಾಡಿ ಸೂಕ್ತ ನಿರ್ವಹಣೆ ಮಾಡುತ್ತಾರೆ. ಹಾಗಾಗಿ ಫಸಲು ಹುಲುಸಾಗಿ ಬೆಳೆದಿದ್ದು, ನಗರದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. “ತೋಟಗಾರಿಕೆ ಅನುಭವ ಕಲಿಕೆ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ, ಪಾಲಕ್, ಮೆಂತೆ ಸೊಪ್ಪು, ಬಿನಿಸ್, ಫುಂಡಿ ಪಲ್ಯಾ, ಟೊಮ್ಯಾಟೋ, ಹೀರೇಕಾಯಿ, ಬದನೆಕಾಯಿ, ಸೋರೇಕಾಯಿ, ಬೂದು ಕುಂಬಳಕಾಯಿ, ಕೊತ್ತಂಬರಿ ಸೇರಿ ವಿವಿಧ ತರಕಾರಿ ಬೆಳೆಗಳು, ಸೇವಂತಿ ಮತ್ತು ಜಂಡೆ ಹೂ ಬೆಳೆಯುತ್ತಾರೆ. ಅಷ್ಟೇ ಅಲ್ಲ ವಿವಿಧ ತರಕಾರಿ ಬೀಜಗಳನ್ನು ಸಹ ತಯಾರಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗುವಂತೆ ಮಾರಾಟಕ್ಕೆ ಲಭ್ಯವಿಟ್ಟಿದ್ದಾರೆ.
ಪ್ರತಿದಿನ ಬೆಳಗ್ಗೆ 5 ಗಂಟೆಗೆ ತರಕಾರಿ, ಹೂ ಕೊಯ್ದು ಬುಟ್ಟಿಗಳಲ್ಲಿ ಸಂಗ್ರಹಿಸುವ ವಿದ್ಯಾರ್ಥಿಗಳು 6 ಗಂಟೆಗೆ ಮಾರಾಟಕ್ಕೆ ಸಜ್ಜಾಗಿ ನಿಲ್ಲುತ್ತಾರೆ. ನಗರದ ಕಾಲೇಜು ಮಹಾದ್ವಾರ, ಬಿವಿಬಿ ಕಾಲೇಜು, ಬರೀದಶಾಹಿ ಉದ್ಯಾನ, ಏರ್‌ಫೋರ್ಸ್ ರಸ್ತೆ, ಗುಂಪಾ ರಿಂಗ್ ರಸ್ತೆ ಸೇರಿ ವಾಯು ವಿಹಾರದ ಸ್ಥಳಗಳಲ್ಲಿ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳು ಇಲ್ಲದೇ ಕಡಿಮೆ ದದಲ್ಲಿ ಸಾವಯವ ಮತ್ತು ತಾಜಾ ತರಕಾರಿ ಇರುವುದರಿಂದ ಜನತೆ ಸಹ ಮುಗಿ ಬಿದ್ದು ಖರೀದಿಸುತ್ತಿದ್ದಾರೆ.
ಪ್ರಾಯೋಗಿಕ ಕಲಿಕೆ ಪರಿಕಲ್ಪನೆಯಿಂದ ವಿದ್ಯಾರ್ಥಿ ಜೀವನದಲ್ಲೇ ಮಾರುಕಟ್ಟೆಯ ಜ್ಞಾನ ಪಡೆಯುತ್ತಿದ್ದಾರೆ. ಪದವಿ ಮುಗಿದ ಬಳಿಕ ಕೈಗೆ ಉದ್ಯೋಗ ಸಿಗದಿದ್ದರೂ ರೈತನಾಗಿ ಬದುಕು ಕಟ್ಟಿಕೊಳ್ಳಲು ಅನುಭವ ಸಿಕ್ಕಂತಾಗಿದೆ. ಕಾಲೇಜಿನ ಪ್ರಾಧ್ಯಾಪಕರು ಮಕ್ಕಳಿಗೆ ಕಲಿಯುತ್ತಲೇ ಗಳಿಸುತ್ತಾ, ಬದುಕಿನಲ್ಲಿ ಸ್ವಾವಲಂಬಿಗಳಾಗಿ ಜೀವಿಸಲು ತರಬೇತಿ ನೀಡುತ್ತಿರುವುದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಾಸಿಕ 18 ಸಾವಿರ ರೂ. ಸಂಪಾದನೆ
ಓದಿನ ಭಾಗವಾಗಿ ತರಕಾರಿ ಬೆಳೆಯುವ ಮಕ್ಕಳು ರೈತರಾಗಿ ಹಣ ಗಳಿಸುವುದು ವಿಶೇಷ. 6 ತಿಂಗಳ ಪ್ರಾಯೋಗಿಕ ಕಲಿಕೆ ಇದಾಗಿದ್ದು, ಪ್ರತಿ ವಿದ್ಯಾರ್ಥಿ ದಿನಕ್ಕೆ 600 ರೂ.ಗಳಂತೆ ತಿಂಗಳಿಗೆ 15- 18 ಸಾವಿರ ರೂ. ಸಂಪಾದಿಸುತ್ತಾರೆ. ಬಂದ ಆದಾಯದಲ್ಲಿ ಶೇ.75ರಷ್ಟು ಹಣವನ್ನು ವಿದ್ಯಾರ್ಥಿಗಳು ಇಟ್ಟಿಕೊಂಡು, ಇನ್ನುಳಿದ ಶೇ.25ರಷ್ಟು ಹಣವನ್ನು ನಿಯಮದಂತೆ ಕಾಲೇಜಿಗೆ ಒಪ್ಪಿಸುತ್ತಾರೆ.
ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಓದಿನ ಒಂದು ಭಾಗವಾಗಿದೆ. ತರಕಾರಿ-ಹೂ ಬೆಳೆಯುವುದನ್ನು ಹೇಳಿಕೊಡುವುದರ ಜತೆಗೆ ಮಾರುಕಟ್ಟೆ ಜ್ಞಾನವನ್ನು ಸಹ ನೀಡಲಾಗುತ್ತದೆ. ಸಾವಯದ ಪದ್ಧತಿಯಲ್ಲಿ ಬೆಳೆಯುವ ತಾಜಾ ತರಕಾರಿಯನ್ನು ಮಧ್ಯವರ್ತಿ ಗಳಿಲ್ಲದೇ, ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದರಿಂದ ಎಲ್ಲಿಲ್ಲದ ಬೇಡಿಕೆ ಇದೆ. ಪ್ರತಿದಿನ ಒಬ್ಬ ವಿದ್ಯಾರ್ಥಿ 600 ರೂ. ವರೆಗೆ ಗಳಿಸುತ್ತಾನೆ. ಬಂದ ಆದಾಯದಲ್ಲಿ ಶೇ.75ರಷ್ಟು ಹಣವನ್ನು ವಿದ್ಯಾರ್ಥಿಗಳಿಗೆ ನೀಡಿದರೆ, ಉಳಿದ ಶೇ.25ರಷ್ಟು ಹಣವನ್ನು ಕಾಲೇಜಿಗೆ ಬಳಕೆ ಮಾಡಲಾಗುತ್ತದೆ.
-ಡಾ| ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕ, ತೋಟಗಾರಿಕೆ ಕಾಲೇಜು, ಬೀದರ
-ಶಶಿಕಾಂತ ಬಂಬುಳಗೆ