ಯಾದಗಿರಿ: ಗುರುವಾರವಷ್ಟೇ ರಾಜ್ಯದಲ್ಲಿ ಎಸ್ಎಸ್ಎಲ್ ಸಿಯ ಮೊದಲ ಪರೀಕ್ಷೆ ನಡೆದಿದ್ದುಈ ಮಧ್ಯೆ ಯಾದಗಿರಿಯಲ್ಲಿ ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ವಿದ್ಯಾರ್ಥಿ ಸಮೂಹಕ್ಕೆ ಸೋಂಕು ಹರಡುವ ಭಾರಿ ಆತಂಕವೊಂದು ತಪ್ಪಿದೆ.
ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ 16 ವರ್ಷದ ವಿದ್ಯಾರ್ಥಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆ ಆರು ಗಂಟೆಗೆ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪುತ ಮತ್ತು ಪರೀಕ್ಷೆಯ ನೋಡಲ್ ಅಧಿಕಾರಿ ಮಲ್ಲಪ್ಪ ಯರಗೋಳ ಆ ವಿದ್ಯಾರ್ಥಿಯನ್ನು ಸಂಪರ್ಕಿಸಿ, ವಿದ್ಯಾರ್ಥಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಬಳಿಕ ವಿದ್ಯಾರ್ಥಿಗೂ ಆಘಾತವಾಗದಂತೆ ಈಗ ಕ್ವಾರಂಟೈನ್ ನಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಧೈರ್ಯ ಹೇಳಿ, ವಿದ್ಯಾರ್ಥಿಯನ್ನು ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪರೀಕ್ಷೆ ಬರೆಯಲು ಸಿದ್ಧವಾಗಿದ್ದ ಆ ವಿದ್ಯಾರ್ಥಿ ಒಂದು ವೇಳೆ ಪರೀಕ್ಷೆಗೆ ಹಾಜರಾಗಿದ್ದರೆ ಇಡೀ ವಿದ್ಯಾರ್ಥಿ ಸಮೂಹದಲ್ಲಿಯೇ ಆತಂಕ ಶುರುವಾಗಿಯೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷೆಗಳ ಮೇಲೆ ಪ್ರಭಾವ ಬೀರುವುದನ್ನು ಅಧಿಕಾರಿಗಳು ಯಶಸ್ವಿಯಾಗಿ ತಡೆಗಟ್ಟಿದ್ದಾರೆ.
ಈ ವಿದ್ಯಾರ್ಥಿ ಲಾಕ್ ಡೌನ್ ಆರಂಭದ ದಿನಗಳಲ್ಲಿ ಮಹಾರಾಷ್ಟ್ರದ ಪುಣೆಗೆ ಸಂಬಂಧಿಕರ ಮನೆಗೆ ತೆರಳಿದ್ದ, ಪರೀಕ್ಷೆ ಹಿನ್ನೆಲೆ ಆರೇಳು ದಿನದ ಹಿಂದೆ ಆಗಮಿಸಿದ್ದ, ಈ ವೇಳೆ ವಡಗೇರಾದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.