ಶಹಾಬಾದ: ವಿದ್ಯಾರ್ಥಿ ಜೀವನ ಅತ್ಯಂತ ಮುಖ್ಯ ಘಟ್ಟವಾಗಿದೆ. ಅದರಲ್ಲೂ ಕಾಲೇಜು ದಿನಗಳು ಜೀವನದಲ್ಲಿ ಎಲ್ಲ ರೀತಿಯಲ್ಲಿ ನಮಗೆ ಪಾಠ ಕಲಿಸುತ್ತವೆ ಎಂದು ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಕಾರ್ಯದರ್ಶಿ ಭೀಮಾಶಂಕರ ಮುತ್ತಟ್ಟಿ ಹೇಳಿದರು. ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಬಸಮ್ಮ ಗುರುಬಸಪ್ಪ ಗೊಳೇದ ಕಲಾ-ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಮೋಜು ಮಜಾ ಮಾಡದೇ ಜೀವನ ರೂಪಿಸಿಕೊಳ್ಳಬೇಕು. ಕಾಲೇಜು ದಿನಗಳು ಮೋಜಿನ ದಿನಗಳಲ್ಲ. ಅವುಗಳನ್ನು ಚೆನ್ನಾಗಿ ಶ್ರಮಪಟ್ಟು ಸಾರ್ಥಕಪಡಿಸಿಕೊಳ್ಳಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆ ಕಾಲೇಜಿಗೆ ಹೋಗಲೇ ಬೇಕಾಗಿದೆ. ಅಲ್ಲೂ ಹೊಸ ಸ್ನೇಹಿತರು ಸಿಗುತ್ತಾರೆ. ಹಾಗಾಗಿ ವಿದಾಯದ ಸಮಯದಲ್ಲಿ ಯಾವ ವಿದ್ಯಾರ್ಥಿಗಳು ಬೇಸರ ಪಡಬಾರದು ಎಂದು ಹೇಳಿದರು.
ಬಿಜಿಜಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ಶಂಕುತಲಾ ಹೋಳಿ ಮಾತನಾಡಿ, ಎಂದಿಗಿಂತಲೂ ಈಗ ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಕಲಿಯಬೇಕಿದೆ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕಿದೆ. ವಿದ್ಯಾರ್ಥಿ ಜೀವನ ಬದುಕಿನ ಸಾರ್ಥಕತೆಗೆ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅನ್ಯ ಮಾರ್ಗದತ್ತ ಹೆಜ್ಜೆ ಹಾಕದೆ ಓದಿನತ್ತ ಗಮನಹರಿಸಬೇಕು. ಪಾಲಕರು ಮತ್ತು ಶಿಕ್ಷಕರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿ ಪ್ರಗತಿಪಥದತ್ತ ಮುನ್ನಡೆಯಬೇಕಿದೆ ಎಂದು ಹೇಳಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಾಗರತ್ನ ವೇದಿಕೆಯಲ್ಲಿದ್ದರು. ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.