ಹುಣಸೂರು: ಶಾಲೆಗೆ ಚಕ್ಕರ್ ಹೊಡೆದು ಈಜಲು ಕೆರೆಗೆ ಇಳಿದಿದ್ದ ಬಾಲಕನೊರ್ವ ಸಾವನ್ನಪ್ಪಿದ್ದು, ಜೊತೆಗಿದ್ದ ನಾಲ್ವರು ಹೆದರಿ ಪರಾರಿಯಾಗಿರುವ ಘಟನೆ ತಿಪ್ಪಲಾಪುರ ಬಳಿಯ ಬೆಳ್ತೂರು ಕೆರೆಯಲ್ಲಿ ನಡೆದಿದೆ.
ಚಿಲ್ಕುಂದ ಗ್ರಾಮದ ನಿವಾಸಿ ಮಂಜುನಾಥ್- ಶೈಲಜ ದಂಪತಿ ಪುತ್ರ ಹರ್ಷ (14) ಮೃತಪಟ್ಟ ಬಾಲಕ.
ಈತ ಸಂತಜೋಸೆಫರ ಪ್ರೌಢ ಶಾಲೆಯ 9 ನೇತರಗತಿ ವಿದ್ಯಾರ್ಥಿಯಾಗಿರುವ ಹರ್ಷ ಶನಿವಾರ ಶಾಲೆಗೆ ಚಕ್ಕರ್ ಹೊಡೆದು ನಾಲ್ವರು ಸ್ನೇಹಿತರೊಂದಿಗೆ ಕೆ.ಆರ್ ನಗರ ರಸ್ತೆಯ ಕರ್ನಾಟಕ ಉಲ್ಲನ್ ಫ್ಯಾಕ್ಟರಿ ಹಿಂಭಾಗದಲ್ಲಿರುವ ಬೆಳ್ತೂರು ಕೆರೆಗೆ ತೆರಳಿ ದಡದಲ್ಲಿ ಬಟ್ಟೆ ಬಿಚ್ಚಿ ನೀರಿಗಿಳಿಯುತ್ತಿದ್ದಂತೆ ಹರ್ಷ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಇದನ್ನು ಕಂಡ ದಡದಲ್ಲಿದ್ದ ಸ್ನೇಹಿತರು ಹೆದರಿಕೆಯಿಂದ ದಡದಲ್ಲೇ ಶಾಲೆಯ ಸಮವಸ್ತ್ರವನ್ನು ಬಿಟ್ಟು ಓಡಿ ಹೋಗಿದ್ದಾರೆ. ಕೆರೆ ಕಡೆಯಿಂದ ಚಡ್ಡಿಯಲ್ಲಿ ಯುವಕರು ಓಡುತ್ತಿರುವುದನ್ನು ಕಂಡ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಿಪ್ಪಲಾಪುರದ ರೈತರು ಕೆರೆ ದಡಕ್ಕೆ ಬಂದು ನೋಡಿದ ವೇಳೆ ಶಾಲಾ ಸಮವಸ್ತ್ರವನ್ನು ಕಂಡು ತಕ್ಷಣವೇ ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಪೋನಾಯಿಸಿ ಮಾಹಿತಿ ನೀಡಿದ್ದಾರೆ.
ಶಾಲಾ ಸಮವಸ್ತ್ರದ ಜೊತೆಗೆ ಗುರುತಿನ ಕಾರ್ಡ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಕೆರೆಯಲ್ಲಿ ಹುಡುಕಾಟ ನಡೆಸಿ ಯುವಕನ ಶವವನ್ನು ಮೇಲೆತ್ತಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್.ಐ. ಜಮೀರ್ ಅಹಮದ್ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ. ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.