Advertisement

ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು; ಅಂಗಾಂಗ ದಾನ

08:15 AM Feb 17, 2018 | Team Udayavani |

ಕುಂದಾಪುರ/ ತೆಕ್ಕಟ್ಟೆ: ಕೋಣಿ ರಾಜ್ಯ ಹೆದ್ದಾರಿಯಲ್ಲಿ ಫೆ. 14ರ ತಡರಾತ್ರಿ ಬೈಕ್‌ಗೆ ಖಾಸಗಿ ಬಸ್‌ ಢಿಕ್ಕಿ ಹೊಡೆದ ದುರ್ಘ‌ಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ) ಪ್ರಥಮ ವರ್ಷದ ವಿದ್ಯಾರ್ಥಿ ಮೆದುಳು ನಿಷ್ಕ್ರಿಯಗೊಂಡು ಫೆ. 15ರಂದು ಮೃತಪಟ್ಟಿದ್ದಾರೆ. 

Advertisement

ತೆಕ್ಕಟ್ಟೆ ಸಮೀಪದ ಕೆದೂರಿನ ಧರ್ಮರಾಜ್‌ ಮುದ ಲಿಯಾರ್‌ ಅವರ ಪುತ್ರ ಭರತ್‌ರಾಜ್‌ ಮುದಲಿಯಾರ್‌ (20) ಮೃತ ಯುವಕ. ಉಳೂ¤ರಿನಲ್ಲಿ ನಡೆದ ಯಕ್ಷಗಾನವನ್ನು ಮುಗಿಸಿ, ಜತೆಗಿದ್ದ ತನ್ನ ಸ್ನೇಹಿತನನ್ನು ಅಂಪಾರಿನ ಮನೆಗೆ ಬಿಟ್ಟು ವಾಪಸಾಗುತ್ತಿದ್ದ ವೇಳೆ ಫೆ. 14ರ ರಾತ್ರಿ 12.15 ಸುಮಾರಿಗೆ ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯ ಕೋಣಿಯಲ್ಲಿ ಖಾಸಗಿ ಬಸ್‌ ಢಿಕ್ಕಿಯಾಗಿ ಈ ಅವಘಡ ಸಂಭವಿಸಿತ್ತು. ಗಂಭೀರ ಗಾಯಗೊಂಡ ಭರತ್‌ರಾಜ್‌ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಫೆ. 15ರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಪಘಾತದ ರಭಸಕ್ಕೆ ಭರತ್‌ರಾಜ್‌ ಧರಿಸಿದ್ದ ಹೆಲ್ಮೆಟ್‌ ಛಿದ್ರವಾಗಿದ್ದು, ತಲೆಗೆ ಗಂಭೀರ ಏಟು ಬಿದ್ದಿದೆ. ತಂದೆ ಧರ್ಮ ರಾಜ್‌ ಮುದಲಿಯಾರ್‌ ಪೋಸ್ಟ್‌ ಮಾಸ್ಟರ್‌ ಆಗಿದ್ದು, ಸ್ವಯಂ ನಿವೃತ್ತಿ ಪಡೆದು, ಕೃಷಿ ನಿರತರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದು, ಮೃತ ಭರತ್‌ರಾಜ್‌ ಕಿರಿಯವನಾಗಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೌರವಾರ್ಥ ಕಾಲೇಜಿಗೆ ರಜೆ: ಭರತ್‌ರಾಜ್‌ ಗೌರವಾರ್ಥ ಆತ ವ್ಯಾಸಂಗ ಮಾಡುತ್ತಿದ್ದ ಮೂಡ್ಲಕಟ್ಟೆಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶುಕ್ರವಾರ ರಜೆ ಸಾರಲಾಗಿತ್ತು. ಸಂಸ್ಥೆಯ ಮುಖ್ಯಸ್ಥರು, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ. 

ಸಾವಿನಲ್ಲೂ  ಸಾರ್ಥಕ್ಯ
ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಭರತ್‌ರಾಜ್‌ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ. ಈತನ ಮನೆಯವರು ಅವನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಮೂತ್ರಪಿಂಡ, ಪಿತ್ತಜನಕಾಂಗ, ಹಾಗೂ ದೇಹದ ಇನ್ನಿತರ ಉಪಯುಕ್ತ ಅಂಗಗಳನ್ನು ದಾನ ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next