ಗುರ್ಗಾಂವ್: ಸಿಬಿಎಸ್ ಇ ( ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್) ಪರೀಕ್ಷೆಯಲ್ಲಿ ಟಾಪರ್ ಆಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಗೌರವ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆ ಹರ್ಯಾಣದಲ್ಲಿ ನಡೆದಿರುವುದು ವರದಿಯಾಗಿದೆ.
ಆಕೆ ಪ್ರಜ್ಞಾಹೀನಳಾಗುವ ತನಕ ಕಾಮುಕರ ಗುಂಪು ಅತ್ಯಾಚಾರ ಎಸಗಿ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿರುವುದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ.
ಹರ್ಯಾಣದ ತನ್ನ ಗ್ರಾಮವಾದ ರೇವಾರಿಯಿಂದ ಸಮೀಪದ ಕೋಚಿಂಗ್ ಸೆಂಟರ್ ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೋಗುತ್ತಿದ್ದಾಗ ಮೂರು ಮಂದಿ ಕಾಮುಕ ಯುವಕರು ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿದ್ದು, ಬಳಿಕ ಮತ್ತಷ್ಟು ಜನ ಸೇರಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದಾಗಿ ವರದಿ ವಿವರಿಸಿದೆ. ಇವರೆಲ್ಲರೂ ಆಕೆಯ ಗ್ರಾಮದವರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರಂಭದಲ್ಲಿ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದರು, ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಹೋಗುವಂತೆ ಪೊಲೀಸರು ತೊಂದರೆ ಕೊಟ್ಟಿರುವುದಾಗಿ ಹೇಳಿದ್ದಾರೆ. ಬಳಿಕ ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ದೂರು ಸ್ವೀಕರಿಸಿ, ತದನಂತರ ಘಟನೆ ನಡೆದ ವ್ಯಾಪ್ತಿಯ ಠಾಣೆಗೆ ದೂರನ್ನು ವರ್ಗಾಯಿಸಿರುವುದಾಗಿ ವರದಿ ತಿಳಿಸಿದೆ.