Advertisement

ಸವಿತಾ ಸಮಾಜಕ್ಕೆ ಮೀಸಲಾತಿ ಹಕ್ಕಿಗಾಗಿ ಹೋರಾಟ: ಶ್ರೀಸವಿತಾನಂದನಾಥ ಸ್ವಾಮೀಜಿ

07:59 PM Dec 30, 2022 | Team Udayavani |

ವಾಡಿ: ಜಾತಿ ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ರಾಜ್ಯ ಸವಿತಾ ಸಮುದಾಯವನ್ನು ಸರ್ಕಾರಗಳು ನಿರ್ಲಲಕ್ಷದಿಂದ ಕಾಣುತ್ತಿವೆ. ಸವಿತಾ ಜನಾಂಗದ ಜಾತಿ ಅಸ್ಪೃಶ್ಯತೆಯ ನೋವು ಸರ್ಕಾರಗಳಿಗೆ ತಲುಪಿಸಲು ಪ್ರಬಲವಾದ ಹೋರಾಟ ಅಗತ್ಯವಿದೆ. ಅಂತಹ ಹೋರಾಟ ಸಂಘಟಿಸುವ ಕಾಲ ಕೂಡಿ ಬಂದಿದ್ದು, ಜ.3 ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಜಯನಗರದಲ್ಲಿರುವ ಸವಿತಾ ಮಹರ್ಷಿ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸವಿತಾ ಸಮುದಾಯದ ಮುಖಂಡರ ಮತ್ತು ಸವಿತಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ ಎಂದು ಕೊಂಚೂರಿನ ಮಹರ್ಷಿ ಸವಿತಾ ಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀಸವಿತಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ವಾಮೀಜಿ, ಸವಿತಾ ಸಮುದಾಯವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಅರ್ಥಿಕವಾಗಿ ಬಲಪಡಿಸಲು ಈಗಿರುವ ಮೀಸಲಾತಿಯಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ವಿಚಾರವಾಗಿ ಈಗಾಗಲೆ ಹಿಂದುಳಿದ ವರ್ಗಗಳ ಆಯೋಗದ ಮತ್ತು ಕುಲಶಾಸ್ತ್ರ ಅಧ್ಯಯನದ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಂವಿಧಾನ ಬದ್ಧವಾಗಿ ವರದಿಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸವಿತಾ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತು ಸರ್ಕಾರ ಚಿಂತನೆ ನಡೆಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಸಚಿವರು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅವರಿಂದ ಕೇವಲ ಬೇಡಿಕೆ ಈಡೇರಿಸುವ ಭರವಸೆ ಮಾತ್ರ ದೊರೆತಿದ್ದು, ಬೇಡಿಕೆ ಈಡೇರಿಲ್ಲ. ಹೋರಾಟದ ಮೂಲಕ ಬಲಪ್ರದರ್ಶನ ನೀಡಿದ ಸಮುದಾಯಗಳಿಗೆ ಮಾತ್ರ ಸರ್ಕಾರ ಮಣಿದಿದೆ ಎಂದು ಸ್ವಾಮೀಜಿ ಆಪಾದಿಸಿದ್ದಾರೆ.

ಸವಿತಾ ಸಮುದಾಯವನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ಲಾಭ ನಿರೀಕ್ಷಿಸುವ ರಾಜಕೀಯ ಪಕ್ಷಗಳಿಗೆ ಸವಿತಾ ಸಮುದಾಯದ ಶಕ್ತಿ ತೋರಿಸಬೇಕಿದೆ. ಕ್ಷೌರಿಕ ವೃತ್ತಿಯ ಕಾಯಕ ಜೀವಿಗಳನ್ನು ಈ ಸಮಾಜ ಅತ್ಯಂತ ಕೀಳಾಗಿ ಕಾಣುತ್ತಿದೆ. ಔದ್ಯೋಗಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಈ ಜನಾಂಗವನ್ನು ಅರ್ಥಿಕವಾಗಿ ಸದೃಢವಾಗಿಸಲು ಮೀಸಲಾತಿ ಪ್ರಮಾಣವನ್ನು ಮರು ಪರಿಶೀಲಿಸುವ ಜರೂರಿದೆ. ಮೀಸಲಾತಿ ಹಕ್ಕು ದಕ್ಕಿಸಿಕೊಳ್ಳಲು ಸವಿತಾ ಸಮುದಾಯ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಈ ಮೀಸಲಾತಿ ಹೋರಾಟಕ್ಕೆ ನೇತೃತ್ವ ನೀಡಲು ಸವಿತಾ ಪೀಠ ಸಿದ್ಧವಾಗಿದೆ. ಪರಿಣಾಮ ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಸವಿತಾ ಸಮಾಜದ ಮುಖಂಡರ ತುರ್ತು ಸಭೆ ಕರೆಯಲಾಗಿದ್ದು, ಸವಿತಾ ಸಮುದಾಯದ ಸಂಘ ಸಂಸ್ಥೆಗಳ ಮುಖಂಡರೂ ಕೂಡ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಸವಿತಾ ಮಠದ ಶ್ರೀ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next