Advertisement

“Strong’ಕಾಫಿ!

03:38 AM Jan 22, 2019 | Team Udayavani |

ಬಾಳದಾರಿಯಲ್ಲಿ ಕೆಲವೊಮ್ಮೆ ದಿಢೀರನೆ ಸೋಲುಗಳು ಜೊತೆಯಾಗುತ್ತವೆ. ಸಂಕಟ ಗಂಟು ಬೀಳುತ್ತದೆ. ಹೆಜ್ಜೆಗೊಮ್ಮೆ ಆತಂಕ, ಕೈ ಜಗ್ಗುತ್ತದೆ. ಅಂಥ ಸಂದರ್ಭದಲ್ಲಿ ಏನಾಗಿದೆ ಎಂದು ಹೇಳಲೂ ಶಕ್ತಿ ಇರುವುದಿಲ್ಲ! ಸವಾಲುಗಳನ್ನು, ಸೋಲನ್ನು ಹೇಗೆ ಎದುರಿಸಬೇಕೆಂದೂ ತಿಳಿಯುವುದಿಲ್ಲ. ಅಂಥ ತಳಮಳದ ಮಧ್ಯೆ ನಲುಗಿಹೋಗಿದ್ದ ಮಗಳಿಗೆ ತಂದೆಯೊಬ್ಬ ಹೇಳಿದ ಬಾಳಿನ ಪಾಠ ಇಲ್ಲಿದೆ. ಈ ಕಥನದ ತಂದೆ ಅಥವಾ ಮಗಳ ಪಾತ್ರವಾಗಿ ನಮ್ಮ ನೆರಳೂ ಸುಳಿದಾಡಬಹುದು…

Advertisement

ಜಗುಲಿಯ ಮೇಲೆ ಸುಮ್ಮನೆ ಕುಳಿತಿದ್ದ ಹದಿಹರೆಯದ ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ, “ಏನಾಯ್ತು ಮಗಳೇ’ ಎಂದು ಕೇಳಿದ್ದ. ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖನ್ನತೆ. ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು, ಏನೂ ಆಗಿಲ್ಲವೆನ್ನುವಂತೆ. “ಅಪ್ಪನ ಬಳಿ ಹೇಳಲಾಗದಂಥದ್ದು ಏನಿದೆ ಮಗಳೇ’ ಎಂದು ಮತ್ತೂಮ್ಮೆ ಪ್ರಶ್ನಿಸಿದ್ದ ಅಪ್ಪನೆದುರು ತುಟಿಯೊಡೆದಿದ್ದಳು ಮಗಳು. “ಅದೇನೋ ಗೊತ್ತಿಲ್ಲ ಅಪ್ಪ, ಸಾಲು ಸಾಲು ಕಷ್ಟಗಳು ನನಗೆ. ಒಂದು ಸಮಸ್ಯೆ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಮಸ್ಯೆ ಧುತ್ತೆಂದು ಎದುರಿಗೆ ನಿಂತಿರುತ್ತದೆ. ಹೇಗೆ ಸಾಗುತ್ತದೋ ಬದುಕು ಗೊತ್ತಿಲ್ಲ. ದಿನವಿಡೀ ಕಷ್ಟಗಳೊಂದಿಗೆ ಹೆಣಗುತ್ತ, ಅವುಗಳಿಂದ ಬಿಡಿಸಿಕೊಳ್ಳುತ್ತ ಬದುಕು ನಡೆಸುವುದು ಕಷ್ಟವೆನ್ನಿಸುತ್ತಿದೆ ನನಗೆ’ ಎಂದವಳ ಕಣ್ಣಂಚಲ್ಲಿ ಸಣ್ಣ ಪೊರೆ.

ಕ್ಷಣಕಾಲ ಮಗಳನ್ನು ದಿಟ್ಟಿಸಿದ್ದ ಅಪ್ಪ ಸಣ್ಣಗೆ ಮುಗುಳ್ನಕ್ಕಿದ್ದ. ವೃತ್ತಿಯಿಂದ ಬಾಣಸಿಗನಾಗಿದ್ದವನು ಅವನು. ಅಸಲಿಗೆ ಮಗಳಿಗಿದ್ದ ಕಷ್ಟವೇನು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೇ ಅವನು ಹೋಗಲಿಲ್ಲ. ಸುಮ್ಮನೇ ಮಗಳ ಕೈಹಿಡಿದವನು ಅವಳನ್ನು ಅಡುಗೆ ಮನೆಯತ್ತ ಕರೆದೊಯ್ದ. ಬೇಸರದಲ್ಲಿದ್ದ ಮಗಳು, ಮರುಮಾತನಾಡದೇ ಅಡುಗೆಮನೆಯತ್ತ ನಡೆದಿದ್ದಳು. ಅಡುಗೆ ಮನೆಗೆ ತೆರಳಿದ್ದ ಅಪ್ಪ ಮೂರು ಬೋಗುಣಿಗಳಲ್ಲಿ ನೀರು ತುಂಬಿಸಿ ಅವುಗಳನ್ನು ಒಲೆಯ ಮೇಲಿಟ್ಟ. ಸಣ್ಣ ಉರಿಯಲ್ಲಿ ನಿಧಾನಕ್ಕೆ ನೀರು ಕುದಿಯಲು ಆರಂಭಿಸುತ್ತಿದ್ದಂತೆಯೇ ಒಂದು ಬೋಗುಣಿಗೆ ದೊಡ್ಡದೊಂದು ಆಲೂಗಡ್ಡೆ ಹಾಕಿದ. ಅದರ ಪಕ್ಕದಲ್ಲಿದ್ದ ಬೋಗುಣಿಗೆ ಮೊಟ್ಟೆಯೊಂದನ್ನು ಹಾಕಿದ. ಕೊನೆಯ ಬೋಗುಣಿಯಲ್ಲಿ ಒಂದು ಚಮಚದಷ್ಟು ಕಾಫಿಪುಡಿಯನ್ನು ಬೆರೆಸಿದ. ಹಾಗೆ, ಮೂರು ಪಾತ್ರೆಗಳಲ್ಲಿ ಮೂರು ವಿಭಿನ್ನ ವಸ್ತುಗಳನ್ನು ಹಾಕಿದವನು ಸುಮ್ಮನೇ ಅವುಗಳನ್ನೇ ದಿಟ್ಟಿಸುತ್ತ ನಿಂತುಬಿಟ್ಟ. 

ಅಪ್ಪನ ಚರ್ಯೆಯನ್ನು ಕಂಡ ಮಗಳಲ್ಲೊಂದು ಸಣ್ಣ ಸಿಡಿಮಿಡಿ. ಅಪ್ಪ ತನ್ನನ್ನು ಅಡುಗೆ ಮನೆಗೆ ಕರೆತಂದದ್ದೇಕೆ? ಹಾಗೆ ಕರೆತಂದವನು ಏನನ್ನೂ ಹೇಳದೆ ಅವನ ಪಾಡಿಗೆ ಅವನೆನ್ನುವಂತೆ ಏನೇನೋ ಮಾಡುತ್ತಿರುವುದೇಕೆ? ಈಗ ಸುಮ್ಮನೇ ಮೌನವಾಗಿ ನಿಂತಿರುವುದೇಕೆ? ಎಂದು ಯೋಚಿಸುತ್ತಿದ್ದ ಮಗಳು ಅಸಹನೆಯಿಂದ ನಿಂತಲ್ಲಿಯೇ ನಿಧಾನಕ್ಕೆ ಸರಿದಾಡಿದಳು. 

ಕಾಲ ಸರಿಯುತ್ತಿತ್ತು. ಬರೋಬ್ಬರಿ ಇಪ್ಪತ್ತು ನಿಮಿಷಗಳ ನಂತರ, ಆತ ಮೂರೂ ಒಲೆಗಳನ್ನು ಆರಿಸಿದ್ದ. ಮೊದಲ ಬೋಗುಣಿಯಲ್ಲಿದ್ದ ಆಲೂಗಡ್ಡೆಯನ್ನೆತ್ತಿ ತಟ್ಟೆಯೊಂದರ ಮೇಲಿಟ್ಟ. ಎರಡನೇ ಬೋಗುಣಿಯಲ್ಲಿದ್ದ ಮೊಟ್ಟೆಯನ್ನು ಮತ್ತೂಂದು ತಟ್ಟೆಗೆ ಹಾಕಿದ. ಕೊನೆಯ ಬೋಗುಣಿಯಲ್ಲಿದ್ದ ದ್ರಾವಣವನ್ನು ಸಣ್ಣದೊಂದು ಲೋಟಕ್ಕೆ ಬಗ್ಗಿಸಿಕೊಂಡು ಲೋಟವನ್ನು ಮೇಜಿನ ಮೇಲಿಟ್ಟ. ಎಲ್ಲವನ್ನೂ ಸುಮ್ಮನೇ ನೋಡುತ್ತಿದ್ದ ಮಗಳಿಗೆ ಅಪ್ಪನ ವರ್ತನೆ ಒಗಟಿನಂತಾಗಿತ್ತು. ಎಲ್ಲವನ್ನೂ ಮೇಜಿನ ಮೇಲೆ ಜೋಡಿಸಿಟ್ಟುಕೊಂಡ ಅಪ್ಪ ಮಗಳತ್ತ ತಿರುಗಿ, “ನಿನಗಿಲ್ಲಿ ಏನು ಕಾಣುತ್ತಿದೆ ಮಗಳೇ?’ ಎಂದು ಪ್ರಶ್ನಿಸಿದ್ದ

Advertisement

“ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ’ ಎಂದು ತಟ್ಟನೇ ಉತ್ತರಿಸಿದ್ದಳು ಮಗಳು. ಅಪ್ಪನ ಮುಖದಲ್ಲೊಂದು ಮಂದಹಾಸ. ಆಲೂಗಡ್ಡೆಯಿದ್ದ ತಟ್ಟೆಯನ್ನೆತ್ತಿ ಅವಳತ್ತ ಹಿಡಿದಿದ್ದ ಅಪ್ಪ. “ಇದನ್ನು ಮುಟ್ಟಿ ನೋಡು ಮಗಳೇ..’ಎಂದಾಗ ನಿಧಾನಕ್ಕೆ ಆಲೂಗಡ್ಡೆಯನ್ನು ಸ್ಪರ್ಶಿಸಿದಳು ಮಗಳು. ಗಟ್ಟಿಯಾಗಿದ್ದ ಆಲೂಗಡ್ಡೆ ಬೆಂದು ಮೃದುವಾಗಿತ್ತು. ಮಗಳ ಕೈಗಳು ಅಲೂಗಡ್ಡೆಯಿಂದ ಹಿಂದಕ್ಕೆ ಸರಿಯುತ್ತಲೇ ಅವಳತ್ತ ಮೊಟ್ಟೆಯಿದ್ದ ತಟ್ಟೆಯನ್ನು ಎತ್ತಿ ಹಿಡಿದಿದ್ದ ಅಪ್ಪ, ಮೊಟ್ಟೆಯನ್ನು ಸುಲಿದು ನೋಡುವಂತೆ ತಿಳಿಸಿದ್ದ. ಅಪ್ಪನ ಮಾತಿನಂತೆಯೇ ಮೊಟ್ಟೆಯನ್ನು ಸುಲಿದಳು ಮಗಳು. ಅದು ಬೆಂದು ಗಟ್ಟಿಯಾಗಿ, ಬೆಳ್ಳಗೆ ಕಾಣುತ್ತಿತ್ತು. 

ಕೊನೆಯದಾಗಿ, ಕಾಫಿಯಿದ್ದ ಲೋಟವನ್ನು ಮಗಳ ಕೈಗಿಟ್ಟ ಅಪ್ಪ “ಇದರ ರುಚಿ ನೋಡು’ ಎಂದು ಕಣÕನ್ನೆ ಮಾಡಿದ. ಅಪ್ಪನ ಆಣತಿಯಂತೆ ಸಣ್ಣ ಗುಟುಕೇರಿಸಿದ್ದಳು ಮಗಳು. ಹಬೆಹಬೆ ಕಾಫಿಯ ಕಂಪು ಹದವಾಗಿ ಅವಳನ್ನು ಆವರಿಸಿ ಸಂತೃಪ್ತಿಯ ನಗು ಮೂಡಿಸಿತ್ತು ಅವಳ ಮುಖದಲ್ಲಿ. ಅಷ್ಟಾಗಿಯೂ ಅಪ್ಪನ ವರ್ತನೆಯಿನ್ನೂ ಅವಳಿಗೆ ಅರ್ಥವಾಗಿರಲಿಲ್ಲ. “ಇದನ್ನೆಲ್ಲ ಏಕೆ ಮಾಡಿದಿರಿ ಅಪ್ಪ, ಏನು ಹೇಳಬೇಕೆಂದಿದ್ದೀರಿ?’ ಎಂದು ಕೇಳಿದ ಮಗಳ ಮಾತಿಗೆ ಅಪ್ಪನ ಮುಖದಲ್ಲಿ ಮತ್ತದೇ ಮುಗುಳ್ನಗೆ. 

ಎರಡು ಕ್ಷಣಗಳ ಬಳಿಕ ಮಾತನಾಡಿದ್ದ ಅವನು, “ಈಗ ಮತ್ತೂಮ್ಮೆ ಮೂರು ವಸ್ತುಗಳನ್ನೂ ಸೂಕ್ಷ್ಮವಾಗಿ ಗಮನಿಸಿ ನೋಡು ಮಗಳೇ. ಕುದಿಯುವ ನೀರಿಗೆ ಬೀಳುವ ಮುನ್ನ, ಗಟ್ಟಿಯಾಗಿದ್ದ ಆಲೂಗಡ್ಡೆ, ಕುದ್ದ ಮರುಕ್ಷಣವೇ ಮೆತ್ತಗಾಗಿ ಹೋಯಿತು. ಈಗ ಮೊದಲಿದ್ದ ಗಟ್ಟಿತನ ಅದಕ್ಕಿಲ್ಲ. ಆದರೆ, ಮೊಟ್ಟೆಯ ಕತೆ ಹಾಗಲ್ಲ. ತೀರಾ ದುರ್ಬಲವಾಗಿದ್ದ ಕವಚದಡಿ ರಕ್ಷಿತವಾಗಿದ್ದ ಮೊಟ್ಟೆ, ಕುದಿಗೆ ಬಿದ್ದು ಗಟ್ಟಿಯಾಗಿ ಹೋಯಿತು. ಮೊದಲಿದ್ದ ಮೃದುತ್ವ ಅದಕ್ಕೂ ಇಲ್ಲ. ಇವೆಲ್ಲಕ್ಕಿಂತ ಭಿನ್ನವಾದ ಕತೆ ಕಾಫಿಪುಡಿಯದ್ದು. ಕುದಿಯುವ ನೀರಿಗೆ ಬಿದ್ದ ತಕ್ಷಣ ಅದು ನೀರನ್ನೇ ಆವರಿಸಿಕೊಂಡು ಬಿಟ್ಟಿತು. ಕೆಲಕಾಲ ಕುದ್ದು, ಕಾಫಿಯಾಗಿ ಮಾರ್ಪಟ್ಟು ನೀರಿನ ರುಚಿ ಮತ್ತು ಬಣ್ಣವನ್ನೇ ಬದಲಾಯಿಸಿಬಿಟ್ಟಿತು’ ಎನ್ನುತ್ತ ಮಗಳತ್ತ ನೋಡಿದ. ಆಕೆಯ ಮುಖದಲ್ಲಿ ಏನೊಂದೂ ಅರ್ಥವಾಗದ ಭಾವ. ಆಗ ಮತ್ತೆ ಮಾತನಾಡಿದ್ದ ಅಪ್ಪ.

“ಕುದಿಯುವ ನೀರು ಬದುಕಿನ ಸಮಸ್ಯೆಯಂಥದ್ದು ಮಗಳೇ. ಅದರೊಳಗೆ ಬಿದ್ದ ವಸ್ತುಗಳು ಸಮಸ್ಯೆಯೆಡೆಗಿನ ನಮ್ಮ ಸ್ಪಂದನೆಯಂಥವು. ಸಮಸ್ಯೆಯ ಸುಳಿಗೆ ಸಿಕ್ಕ ಗಟ್ಟಿಗರು ತುಂಬ ಸಲ ಮೆತ್ತಗಾಗಿ ಹೋಗುತ್ತಾರೆ ಆಲೂಗಡ್ಡೆಯಂತೆ. ಮೊಟ್ಟೆಯಂತಹ ಮೃದು ಸ್ವಭಾವದವರು ಕುದಿಗೆ ಬಿದ್ದ ನಂತರ ಕಠೊರ ಹೃದಯಿಗಳಾಗುತ್ತಾರೆ. ಎರಡೂ ಅರ್ಥಹೀನ ಸ್ಪಂದನೆಗಳೇ. ಬದುಕಿನ ಶಾಂತಿಯನ್ನೇ  ಕದಡಿಬಿಡುವ ಭಾವಗಳಿವು. ಆದರೆ ಕೆಲವರಿರುತ್ತಾರೆ ಮಗು, ಸಮಸ್ಯೆಗಳಿಗೆ ಅಂಜದೆ ಮೆಟ್ಟಿ ನಿಂತು ಗೆಲ್ಲುವವರು. ಅವರು ಮಾತ್ರ ಕುದ್ದು ತಯಾರಾದ ರುಚಿಕರ ಕಾಫಿಯಂತಾಗುತ್ತಾರೆ. ಜೀವನದ ರಹಸ್ಯವೇ ಇಷ್ಟು ಮಗಳೇ. ಇದು ಅರ್ಥವಾದರೆ ಬದುಕು ಸರಳ. ಈಗ ನೀನು ಹೇಳು, ಹೋರಾಟದ ಈ ಬದುಕಿನಲ್ಲಿ ನೀನು ಆಲೂಗಡ್ಡೆ ಆಗ್ತಿàಯೋ, ಮೊಟ್ಟೆ ಆಗ್ತಿàಯೋ ಅಥವಾ ಕಾಫಿಯಾಗಲು ಇಷ್ಟಪಡ್ತೀಯೋ? ನೀನು ಏನಾಗಬೇಕೆಂದು ಬಯಸಿರುವೆ’?.. ಎಂದು ಕೇಳುತ್ತ ಮಾತು ಮುಗಿಸಿದ ಅಪ್ಪ.

ಮಗಳಿಗಾಗ ಜ್ಞಾನೋದಯದ ಕಾಲ. ಸುಮ್ಮನೇ ಅಪ್ಪನನ್ನು ಬಾಚಿ ತಬ್ಬಿಕೊಂಡಳು ಅವಳು.

 ಅನುವಾದ: ಗುರುರಾಜ ಕೋಡ್ಕಣಿ

Advertisement

Udayavani is now on Telegram. Click here to join our channel and stay updated with the latest news.

Next