ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಗೋಪಾಲಯ್ಯ ಅವರನ್ನು ಮಣಿಸಲು ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನೇ ಹುಡು ಕಿದ್ದು ಅವರ ಸಂಬಂಧಿಕರೂ ಆಗಿರುವ ಕಾಮಾಕ್ಷಿಪಾಳ್ಯದ ರಾಜಣ್ಣ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಮಾಜಿ ಉಪ ಮೇಯರ್ ಭದ್ರೇಗೌಡ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಿರೀಶ್ ನಾಶಿ ಸಹ ಟಿಕೆಟ್‌ಗಾಗಿ ಪ್ರಯತ್ನ ಪಟ್ಟಿದ್ದರಾದರೂ ಅಂತಿಮವಾಗಿ ರಾಜಣ್ಣ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕಾಮಾಕ್ಷಿಪಾಳ್ಯ ರಾಜಣ್ಣ ಅವರು ಕ್ಷೇತ್ರ ದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿ ರುವುದರಿಂದ ಗೋಪಾಲಯ್ಯ ಅವರನ್ನು ಮಣಿಸಬಹುದು. ಗೋಪಾಲಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಆಕಾಂಕ್ಷಿಗಳಾಗಿದ್ದ ಹರೀಶ್ ಹಾಗೂ ನೆ.ಲ.ನರೇಂದ್ರಬಾಬು ಅವರಲ್ಲಿ ಅಸಮಾ ಧಾನವಾಗಿದೆ ಎಂದು ಹೇಳಲಾಗಿದ್ದು ಇದರ ಲಾಭ ಪಡೆಯಲು ಜೆಡಿಎಸ್ ಲೆಕ್ಕಾಚಾರ ಹಾಕಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ ಗೋಪಾಲಯ್ಯ ಅವರನ್ನು ಸೋಲಿಸಬೇಕು ಎಂದು ಕ್ಷೇತ್ರದ ಮುಖಂಡರು, ಪಾಲಿಕೆ ಸದಸ್ಯರ ಜತೆ ನಿರಂತರ ಸಭೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಹೆಸರು ಪ್ರಕಟ?: ಈ ಮಧ್ಯೆ, ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಉಪ ಮೇಯರ್ ಭದ್ರೇಗೌಡ ಹಾಗೂ ಗಿರೀಶ್ ನಾಶಿ ನಡುವೆ ಸಂಧಾನ ಮಾತುಕತೆ ನಡೆಯಿತು. ಶನಿವಾರ ಬೆಳಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಹೇಳಲಾಗಿದೆ.