ಬೆಂಗಳೂರು: ಕೆಂಗೇರಿ ಸಮೀಪದ ಕಣಮಿಣಕಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಇದೀಗ ಮೈಸೂರು ರಸ್ತೆಯಿಂದ ಕಣಮಿಣಕಿವರೆಗೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ರಸ್ತೆ ನಿರ್ಮಾಣದ ಸಂಬಂಧ ಬಿಡಿಎಗೆ ಜಮೀನು ನೀಡಲು 8 ರೈತರು ಮುಂದೆ ಬಂದಿದ್ದಾರೆ.
1.5 ಕಿ.ಮೀ ಉದ್ದ, 80 ಅಡಿ ಅಗಲದ ರಸ್ತೆ ನಿರ್ಮಿಸಲಾಗುವುದು. ಈ ಉದ್ದೇಶಕ್ಕಾಗಿ ಸುಮಾರು 3.5 ಎಕರೆ ಪ್ರದೇಶದಷ್ಟು ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲು ಕಣಮಿಣಕಿ ಪ್ರದೇಶ ವ್ಯಾಪ್ತಿಯ ರೈತರು ತೀರ್ಮಾನ ಕೈಗೊಂಡಿದ್ದಾರೆ.
ಮೈಸೂರು ರಸ್ತೆಗೆ ಸಮೀಪದಲ್ಲಿರುವ ಕಣಮಿಣಕಿ ಅಪಾರ್ಟ್‌ಮೆಂಟ್‌ಗೆ ಸೂಕ್ತವಾದ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಹಲವು ಹಳ್ಳಿಗಳನ್ನು ಸುತ್ತಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಫ್ಲ್ಯಾಟ್‌ಗಳನ್ನು ಕೊಳ್ಳಲು ಗ್ರಾಹಕರನ್ನು ಸೆಳೆಯುವುದು, ಫ್ಲ್ಯಾಟ್‌ಗಳಿಗೆ ಮಾರುಕಟ್ಟೆ ಸೃಷ್ಟಿಸುವುದು ಕಷ್ಟಸಾಧ್ಯವಾಗಿದೆ. ಇದನ್ನು ಮನಗಂಡಿರುವ ಬಿಡಿಎ ಈಗ ಹೊಸ ರಸ್ತೆ ನಿರ್ಮಾಣಕ್ಕೆ ಕೈಹಾಕಿದೆ.
ಖಾಸಗಿ ಕಂಪನಿಗೆ ಜವಬ್ದಾರಿ: ಬಿಡಿಎ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಣಮಿಣಕಿ ಬಿಡಿಎ ಗೃಹ ಸಮುಚ್ಚಯಕ್ಕೆ ನೂತನ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಕಣಮಿಣಕಿಯಲ್ಲಿ ಇನ್ನೂ ಹಲವು ಫ್ಲ್ಯಾಟ್‌ಗಳು ಮಾರಾಟವಾಗದೇ ಹಾಗೇ ಉಳಿದಿರುವ
ಹಿನ್ನೆಲೆಯಲ್ಲಿ ನೂತನ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ, ಹೊಸ ರಸ್ತೆ ನಿರ್ಮಾಣದ ಜವಬ್ದಾರಿಯನ್ನು ಖಾಸಗಿ ಕಂಪನಿಗೆ ಟೆಂಡರ್ ಮೂಲಕ ವಹಿಸಿಕೊಡುವ ತೀರ್ಮಾನಕ್ಕೆ ಬರಲಾಯಿತು.
ರೈಲ್ವೆ ಇಲಾಖೆಗೆ 13 ಕೋಟಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಲು ಹೊರಟಿರುವ ಹೊಸ ರಸ್ತೆ ರೈಲ್ವೆ ಹಳಿಯನ್ನು ಹಾದು ಹೋಗಲಿದೆ. ಹೀಗಾಗಿ, ಅಂಡರ್‌ಪಾಸ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಬಿಡಿಎ ರೈಲ್ವೆ ಇಲಾಖೆಗೆ 13 ಕೋಟಿ ರೂ. ಪಾವತಿಸಲಿದೆ. ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ರೈಲ್ವೆ ಇಲಾಖೆಗೆ ವಹಿಸಿಕೊಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಡಿಎಗೆ ಜಮೀನು ನೀಡಲು ಮಂದೆ ಬಂದಿರುವ ರೈತರಿಗೆ ಈಗೀರುವ ಮಾರುಕಟ್ಟೆ ದರದಂತೆ ಹಣ ನೀಡಲಾಗುವುದು. ಹೊಸ ನಿಯಮಗಳ ಪ್ರಕಾರ ಜಮೀನಿಗೆ 1.5 ಕೋಟಿ ರೂ. ಮಾರುಕಟ್ಟೆ ಬೆಲೆ ಇದ್ದರೆ, ಭೂಮಿಯನ್ನು ನೀಡಲು ಮುಂದಾಗುವ ರೈತನಿಗೆ ಮಾರುಕಟ್ಟೆ ಬೆಲೆಗಿಂತ 2 ಪಟ್ಟು ಹಣವನ್ನು ನೀಡಬೇಕಾಗುತ್ತದೆ. ಇದೇ ನಿಯಮವನ್ನು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಾಲಿಸಲಿದೆ ಎಂದು ಹೇಳಿದ್ದಾರೆ.
ಮೈಸೂರು ರಸ್ತೆಯಿಂದ ಕಣಮಿಣಕಿ ಫ್ಲ್ಯಾಟ್‌ವರೆಗೆ ಹೊಸ ರಸ್ತೆ ನಿರ್ಮಾಣ ಮಾಡಲು ಬಿಡಿಎ ನಿರ್ಧರಿಸಿದೆ. ರೈತರು ಕೂಡ ಭೂಮಿ ನೀಡಲು ಮುಂದೆ ಬಂದಿದ್ದು, ಸದ್ಯದಲ್ಲೇ ರಸ್ತೆ ನಿರ್ಮಾಣ ಆರಂಭ ವಾಗಲಿದೆ. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ.
ರಾಕೇಶ್ ಸಿಂಗ್, ಬಿಡಿಎ ಆಯುಕ
ದೇವೇಶ ಸೂರಗುಪ್ಪ