ಶಹಾಪುರ: ಎರಡು ವರ್ಷಗಳಿಂದ ನ್ಯಾಕ್‌ನಿಂದ ಉತ್ತಮ ಶ್ರೇಣಿ ಪಡೆಯಲು ಕಾಲೇಜಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದೇವೆ. ಇನ್ನೂ 45 ದಿನ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ವಿವಿಧ ಸಂಚಾಲಕರು ತಮ್ಮ ತಮ್ಮ ವಿಭಾಗದ ಕಾರ್ಯಚಟುವಟಿಕೆಗಳು, ಸಂಶೋಧನೆ, ಬರಹಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳು ಮುಂತಾದವುಗಳನ್ನು ಸುವ್ಯವಸ್ಥಿತವಾಗಿ ದಾಖಲೀಕರಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರೊ| ಚನ್ನಾರಡ್ಡಿ ಎಂ. ತಂಗಡಗಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲೇ ಪ್ರತಿಷ್ಠಿತ ಮಹಾವಿದ್ಯಾಲಯವಾಗಿರುವ ನಮ್ಮ ಕಾಲೇಜು ನ್ಯಾಕ್ ಸಮಿತಿಯಿಂದ ಉತ್ತಮ ಗ್ರೇಡ್ ಪಡೆಯಲು ಪ್ರತಿಯೊಬ್ಬರು ಶ್ರಮಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಮರ್ಪಕವಾಗಿ ಅವರವರ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.
ನಿಕಟಪೂರ್ವ ನ್ಯಾಕ್ ಸಮಿತಿ ಸಂಚಾಲಕ ಡಾ| ವಿಜಯಾನಂದ ವಿಠ್ಠಲ್ ಮಾತನಾಡಿ, ನ್ಯಾಕ್ ಪೀರ್ ಸಮಿತಿ ಕಾಲೇಜಿಗೆ ಭೇಟಿ ನೀಡಿದಾಗ ಸಿದ್ಧತೆ ಮಾಡಿಕೊಳ್ಳಬೇಕಾದ ಕ್ರಮಗಳನ್ನು ಕುರಿತು ತಿಳಿಸಿದರು. ನ್ಯಾಕ್ ಸಮಿತಿಯ ಕಾಲೇಜಿನ ಸಂಚಾಲಕ ಡಾ| ಅರುಣ ಬಣಗಾರ ಅವರು ಕಾಲೇಜಿನ ಪ್ರತಿಯೊಂದು ವಿಭಾಗಗಳು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ನ್ಯಾಕ್ ಸಮಿತಿ ಸಹ ಸಂಚಾಲಕ ಡಾ| ಲಕ್ಷ್ಮೀಪುತ್ರ ದೊಡ್ಡಮನಿ ಅವರು ನ್ಯಾಕ್ ಸಮಿತಿಯ ಕಾರ್ಯ ಸ್ವರೂಪವನ್ನು ವಿವರಿಸಿದರು. ಪ್ರೊ| ಆನಂದಕುಮಾರ ಜೋಶಿ, ಡಾ| ಸಂಗಣ್ಣ ರಾಂಪುರೆ, ಡಾ| ಎಸ್.ಎಸ್. ದೇಸಾಯಿ, ಡಾ| ಹಯ್ನಾಳಪ್ಪ ಸುರುಪುರಕರ್, ಡಾ| ಸಂತೋಷ ಹುಗ್ಗಿ, ಡಾ| ರಾಜು ಶ್ಯಾಮರಾವ್, ಡಾ| ನಾಗಪ್ಪ ಚಾವಲಕರ್, ಮೀನಾಕ್ಷಿ ರಾಠೊಡ್, ಆನಂದಕುಮಾರ ಸಾಸನೂರ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.