ಹೊಸಕೋಟೆ: ವಿದ್ಯಾರ್ಥಿಗಳು ಪೋಷಕರು ಹೊಂದಿರುವ ಕನಸನ್ನು ನನಸಾಗಿಸಲು ಶ್ರಮಿಸಬೇಕೆಂದು ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠಾಧ್ಯಕ್ಷರು, ಜಗದ್ದುರು ರೇವಣಸಿದ್ದೇಶ್ವರ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಪಾರ್ವತಿಪುರದಲ್ಲಿರುವ ಎಸ್ಜೆಆರ್ಎಸ್ ಬಾಲಕ, ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದರು.
ಪರೀಕ್ಷೆಯಲ್ಲಷ್ಟೇ ಅಲ್ಲದೆ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ಗಳಿಸಲು ಆತ್ಮಬಲ ಬೆಳೆಸಿಕೊಳ್ಳಬೇಕು. ಪೋಷಕರು ಸಹ ಮಕ್ಕಳ ಪಠ್ಯಭ್ಯಾಸಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿ$ಸುವಲ್ಲಿ ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರೊಂದಿಗೆ ಸಹಕರಿಸಬೇಕು.
ಗ್ರಾಮೀಣ ಪ್ರದೇಶದ ಬಾಲಕಿಯರು ಶೈಕ್ಷಣಿಕ ಪ್ರಗತಿ ಹೊಂದಲು ಪಟ್ಟಣದಲ್ಲಿ 1980ರಲ್ಲಿ ಪ್ರಥಮವಾಗಿ ಬಾಲಕಿಯರಿಗಾಗಿ ಪ್ರೌಢಶಾಲೆ ಪ್ರಾರಂಭಿಸಲಾಯಿತು. ದಾನಿಗಳ ಸಹಕಾರದಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಸ್ವಂತ ಕಟ್ಟಡವನ್ನು ಸಹ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದಲ್ಲಿ ಮಾತ್ರ ಕೊಡುಗೆಗಳು ಸಹ ಸಾರ್ಥಕಗೊಳ್ಳಲಿವೆ ಎಂದರು.
ಹಿರಿಯ ವಕೀಲ ಎಚ್.ವಿ.ರಾಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕ್ರಿಯಾತ್ಮಕತೆ ವೃದ್ಧಿಗೊಳ್ಳುವುದೇ ಅಲ್ಲದೆ ಸರ್ವತೋಮುಖ ಬೆಳವಣಿಗೆ ಹೊಂದಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸಲಾಯಿತು.
2017ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಪೋಷಕರನ್ನು ಸಹ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸಿ.ರುದ್ರಾರಾಧ್ಯ, ಸದಸ್ಯೆ ಗುಲಾಬ್ಜಾನ್, ಟೌನ್ ಬ್ಯಾಂಕಿನ ನಿರ್ದೇಶಕ ಸಿ.ನವೀನ್, ಮುಖ್ಯ ಶಿಕ್ಷಕ ಟಿ.ಎಲ್.ಚಂದ್ರಯ್ಯ ಭಾಗವಹಿಸಿದ್ದರು.