Advertisement

ಮೌಲ್ಯನಿಷ್ಠ ಸಮಾಜ ನಿರ್ಮಾಣಕ್ಕೆ ಶ್ರಮಿಸಿ

05:59 PM Aug 07, 2018 | |

ದಾವಣಗೆರೆ: ಸಾಮಾಜಿಕ ಸೇವಾ ಬದ್ಧತೆ, ಪ್ರಾಮಾಣಿಕತೆ, ನಿಷ್ಪಕ್ಷಪಾತ, ವಾಸ್ತವ ವರದಿಗಳ ಮೂಲಕ ಮಾಧ್ಯಮ ಮೌಲ್ಯನಿಷ್ಠ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ
ವಿಶ್ವವಿದ್ಯಾಲಯದ ಭೂಪಾಲ್‌ ಕೇಂದ್ರದ ಮೌಲ್ಯನಿಷ್ಠ ಸಮಾಜದ ಸ್ಥಾಪನೆಗಾಗಿ ಮಾಧ್ಯಮ ಸಂಚಾಲಕ ಪ್ರೊ| ಕಮಲ್‌ ದೀಕ್ಷಿತ್‌ ಆಶಿಸಿದ್ದಾರೆ.

Advertisement

ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗ ಆಯೋಜಿಸಿದ್ದ ಏರ್ಪಡಿಸಿದ್ದ ಮೌಲ್ಯನಿಷ್ಠ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ… ಕುರಿತ ಮೀಡಿಯಾ ಸೆಮಿನಾರ್‌ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲಂತೆ ಮಾಧ್ಯಮದಲ್ಲೂ ಅಗಾಧ ಬದಲಾವಣೆ, ಗೊಂದಲ ಇದೆ. ಅಂತಹ ವಾತಾವರಣದ ನಡುವೆಯೂ ಮಾಧ್ಯಮದಿಂದ
ಸಾಮಾಜಿಕ ಪರಿವರ್ತನೆ ಎಂಬ ಆಶಾಭಾವನೆ ಇದೆ. ಮಾಧ್ಯಮ ಕ್ಷೇತ್ರದಲ್ಲಿರುವರು ಅತೀ ಜವಾಬ್ದಾರಿ ಮತ್ತು ಬದ್ಧತೆಯಿಂದ ಸಾಮಾಜಿಕ ಸೇವೆ ಮಾಡುವ ಮೂಲಕ ಮೌಲ್ಯನಿಷ್ಠ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸಬೇಕು. ಕೆಟ್ಟದ್ದರಿಂದ ಒಳ್ಳೆಯ ಸಮಾಜ ನಿರ್ಮಾಣ ಮಾಡುವಂತಾಗಬೇಕು ಎಂದರು. 

1950 ರಿಂದ 60 ದಶಕದಲ್ಲಿ ಸಮಾಜ ಸೇವೆ ಸಲ್ಲಿಸುವ ಮಹತ್ವದ ಗುರಿಯೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ತಿಲಕರು ಒಳಗೊಂಡಂತೆ ಅನೇಕರು ಮಾಧ್ಯಮ ಕ್ಷೇತ್ರಕ್ಕೆ ಬರುತ್ತಿದ್ದರು. ಆಗ ಸಮಾಜ ಸೇವೆ, ಜಾಗೃತಿಯೇ ಮಾಧ್ಯಮದ ಪ್ರಮುಖ ಗುರಿಯಾಗಿತ್ತು. 60ರ ದಶಕದ ನಂತರ ಮಾಧ್ಯಮದಲ್ಲಿ ಲಾಭಗಳಿಸುವ ಗಾಳಿ ಪ್ರಾರಂಭವಾಯಿತು. 

ಈಗಂತೂ ಸಾಮಾಜಿಕ ಸೇವಾ ಗುರಿಯ ಮಾಧ್ಯಮ ಪಕ್ಕಾ ಉದ್ಯಮವಾಗಿದೆ. ಈಗ ಆಕರ್ಷಕ ವೇತನ, ಸೌಲಭ ಮತ್ತು ಗ್ಲಾಮರ್‌ ಉದ್ದೇಶದಿಂದ ಮಾಧ್ಯಮಕ್ಕೆ ಬರುವಂತಾಗಿದೆ. ಸಮಾಜ ಸೇವೆ ಕಾಣೆಯಾಗುತ್ತಿದೆ. ಇದಕ್ಕೆಲ್ಲ ಮಾಧ್ಯಮ ಮತ್ತು ಸಮಾಜ ಮುಖ್ಯ ಕಾರಣ ಎಂದು ತಿಳಿಸಿದರು.
 
ಮಾಧ್ಯಮದಲ್ಲಿ ಅನೇಕರು ಸಾಮಾಜಿಕ ಕಳಕಳಿ, ಬದಲಾವಣೆಯ ಬದ್ಧತೆಯೊಂದಿಗೆ ಕೆಲಸ ಮಾಡುವರು ಇದ್ದಾರೆ. ಡಾ| ಪಿ. ಸಾಯಿನಾಥ್‌ ಮುಂತಾದವರು ತಮ್ಮ ಲೇಖನಗಳ ಮೂಲಕವೇ ಪರಿವರ್ತನೆಯ ಅಲೆ ಉಂಟು ಮಾಡುತ್ತಿದ್ದಾರೆ. ಇಡೀ ಮಾಧ್ಯಮ ತನ್ನ ಸಾಮಾಜಿಕ ಸೇವಾ ಕಳಕಳಿ, ಬದ್ಧತೆಯೊಂದಿಗೆ ಕೆಲಸ ಮಾಡಿದಲ್ಲಿ ಗಾಂಧೀಜಿ ಕಂಡಂತಹ ರಾಮರಾಜ್ಯದ ನಿರ್ಮಾಣ ಸಾಧ್ಯವಾಗುತ್ತದೆ. ಮಾಧ್ಯಮದ ಅಂತಹ ಕಾರ್ಯಕ್ಕೆ ಸಮಾಜವೂ ಪೂರಕವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ಯಾವುದೇ ವಿಚಾರವನ್ನೇ ಆಗಲಿ ತಿಳಿದು, ಪರಿಶೀಲಿಸಿ, ಪರಾಮರ್ಶಿಸಿ ವರದಿ ಮಾಡಬೇಕು. ಮಾಧ್ಯಮ ಸಮಾಜ ಬದಲಾವಣೆಯ ಧನಾತ್ಮಕ ಚಿಂತನೆಯ
ಮೂಲಕ ಇಡೀ ಸಮಾಜವನ್ನು ಸುಧಾರಣೆ ಮಾಡಬೇಕು ಎಂದರು. 

Advertisement

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತೆ ಪ್ರೀತಿ ನಾಗರಾಜ್‌, ಮಾಧ್ಯಮ ಸದಾ ನಿಷ್ಪಕ್ಷಪಾತ, ವಾಸ್ತವ ವರದಿಯ ಬದ್ಧತೆ ಹೊಂದಿದೆ. ಇಂದಿನ ಬದಲಾವಣೆಗೆ ಅನುಗುಣವಾಗಿ ಜನರು ಬಯಸುವಂತಹ ಸುದ್ದಿ ನೀಡುವ ಅನಿವಾರ್ಯತೆಯಲ್ಲಿ ಇದೆ. ಓದುಗರು ಮತ್ತು ನೋಡುಗರು ತಮಗೆ ಇಂತದ್ದೇ ಸುದ್ದಿ ಬೇಕು ಎಂದು ಕೇಳಿ ಪಡೆಯಬೇಕು. ಆಗ ಎಲ್ಲವೂ ಬದಲಾವಣೆ ಆಗುತ್ತದೆ. ಸಮಾಜದ ಬದಲಾವಣಾ ಕಾರ್ಯ ಬರೀ ಮಾಧ್ಯಮದಿಂದ ಮಾತ್ರವೇ ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕರು ಸಹ ಸಮಾಜದ ಬದಲಾವಣೆಯ ಜವಾಬ್ದಾರಿ ಹೊರಬೇಕು. ಆಗ ಮಾತ್ರ ಮೌಲ್ಯನಿಷ್ಠ ಸಮಾಜದ ನಿರ್ಮಾಣ ಸಾಧ್ಯವಾದೀತು ಎಂದು ಪ್ರತಿಪಾದಿಸಿದರು.

 ಅಧ್ಯಕ್ಷತೆ ವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯ ಸಂಚಾಲಕ ಡಾ| ಬಸವರಾಜ್‌ ರಾಜಋಷಿ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಮೂರು ಅಂಗಗಳಲ್ಲಿನ ಲೋಪದೋಷಗಳನ್ನ ಜನರಿಗೆ ಮುಟ್ಟಿಸುವ ಮಹತ್ತರ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ, ಸಮಾಜದ ಬದಲಾವಣೆಗೂ ಗಮನ ನೀಡಬೇಕು. ಕೆಲ ಸಂದರ್ಭದಲ್ಲಿ ರೋಚಕ ಸುದ್ದಿಗಳನ್ನು ನೀಡುವ ಭರದಲ್ಲಿನ ವರದಿಗಾರಿಕೆ ಅನೇಕರಿಗೆ ಅರಗಿಸಿಕೊಳ್ಳಲಿಕ್ಕಾಗದ ಆಘಾತ ತಂದೊಡ್ಡುತ್ತದೆ. ಹಾಗಾಗಿ ವಾಸ್ತವತೆಯ ಪರಿಶೀಲಿಸಿ ವರದಿ ಮಾಡುವಂತಾಗಬೇಕು. ಸಮಾಜಕ್ಕೆ ಉಪಯೋಗವಾಗುವ ಅಂಶಗಳತ್ತ ಗಮನ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಬಿ.ಕೆ. ಶಾಂತನು, ಬಿ.ಕೆ. ಸುಶಾಂತ್‌, ಸುನೀತಾ, ಸುನೀತಾ ಕುಮಾರಿ, ದಾವಣಗೆರೆ ಕೇಂದ್ರದ ಸಂಚಾಲಕಿ ಬಿ.ಕೆ. ಲೀಲಾಜೀ ಇತರರು ಇದ್ದರು. ಬಿ.ಎಸ್‌. ಬಸವರಾಜ್‌ ಪ್ರಾರ್ಥಿಸಿದರು. ಇ.ಎಂ. ಮಂಜುನಾಥ್‌ ಏಕಬೋಟೆ ಸ್ವಾಗತಿಸಿದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಚ್‌.ಬಿ. ಮಂಜುನಾಥ್‌, ಬಿ.ಎನ್‌. ಮಲ್ಲೇಶ್‌, ಕೆ. ಏಕಾಂತಪ್ಪ, ಬಸವರಾಜ್‌ ದೊಡ್ಮನಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ವೀರಪ್ಪ ಬಾವಿ, ಜಿಲ್ಲಾ ವರದಿಗಾರರ ಕೂಟದ ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ ಎನ್‌.ಆರ್‌. ನಟರಾಜ್‌, ಐ. ಗುರುಶಾಂತಪ್ಪ, ಮಂಜುನಾಥ್‌
ಕಾಡಜ್ಜಿ, ಎಚ್‌.ಎಂ. ರಾಜಶೇಖರ್‌, ಎಚ್‌.ಟಿ. ಪರಶುರಾಮ್‌ ಅವರಿಗೆ ಮಾಧ್ಯಮ ಸಿರಿ…. ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next