ಇಂಡಿ: ಅನೇಕ ವರ್ಷಗಳಿಂದ ಆಚರಿಸಿಕೊಂಡ ಬರುತ್ತಿರುವ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ವಿಶ್ವದಾದ್ಯಂತ ಮಾತೃಭಾಷೆಗಳ ಉಳಿವಿನ ದಿನವನ್ನಾಗಿ ಆಚರಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸಾಲೋಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ (ಎಚ್. ಕೆ.) ಶಾಲೆಯಲ್ಲಿ ಜರುಗಿದ ವಿಶ್ವ ಮಾತೃಭಾಷಾ ದಿನಾಚಾರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದಲ್ಲಿ ಸುಮಾರು 6 ಸಾವಿರ ಭಾಷೆಗಳನ್ನು ಮಾತನಾಡಲಾಗುತ್ತದೆ. ಆದರೆ ಶೇ. 43ಕ್ಕೂ ಹೆಚ್ಚು ಭಾಷೆಗಳು ಅವಸಾನದಂಚಿನಲ್ಲಿದೆ ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ. ಪ್ರತಿ ಎರಡು ವಾರಕ್ಕೊಂದು ಭಾಷೆ ವಿಶ್ವದಿಂದ ಕಣ್ಮರೆಯಾಗುತ್ತಿರುವುದು ಶೋಚನೀಯ ಎಂದರು.
ಭಾಷೆಯು ಮನುಷ್ಯನ ಭಾವಾಭಿವ್ಯಕ್ತಿಯ ಅತಿ ಮುಖ್ಯ ಮಾಧ್ಯಮ. ಮಾನವನ ವಿಕಾಸ ಕಾಲದಿಂದ ವಿಶ್ವದಲ್ಲಿ ಸಾವಿರಾರು ಭಾಷೆಗಳು ಬೆಳೆದು ಬಂದಿವೆ. ಆರಂಭದಲ್ಲಿ ಶೈಶವಾವಸ್ಥೆಯಲ್ಲಿದ್ದ ಭಾಷೆಗಳಳು ತಮ್ಮಲ್ಲಿನ ಶಬ್ದ ಭಂಡಾರವನ್ನು ಹೆಚ್ಚಿಸಿಕೊಳ್ಳುತ್ತ ಪರಿಪೂರ್ಣವಾಗಿ ಬೆಳೆದಿದ್ದು ವಿಶೇಷವಾಗಿದೆ ಎಂದರು.
ಶಾಲಾ ಮುಖ್ಯಗುರು ಡಿ.ಎಸ್. ಹಿರೇಮಠ, ಬಿಆರ್‌ಪಿ ಬಸವರಾಜ ಗೋರನಾಳ ಮಾತನಾಡಿದರು. ಬಿ.ಎಂ. ಅರಳಗುಂಡಗಿ, ಆರ್.ಎನ್. ಹೊಟಗೊಂಡ, ಡಿ.ಕೆ. ಹಂಜಗಿ, ಎ.ಎಲ್. ನಾರಾಯಣಕರ, ಪಿ.ಐ. ಹಡಪದ ಸೇರಿದಂತೆ ಅನೇಕರು ಇದ್ದರು.