ಸೈದಾಪುರ: 18 ವರ್ಷದೊಳಗಿನ ಎಲ್ಲ ಮಕ್ಕಳ ರಕ್ಷಣೆಗಾಗಿ ಚೈಲ್ಡ್‌ಲೈನ್ ಕಾರ್ಯ ನಿರ್ವಹಿಸುತ್ತದೆ ಎಂದು ಡಾನ್ ಬೋಸ್ಕೊ ಕೇಂದ್ರದ ಮಕ್ಕಳ ಸಹಾಯವಾಣಿ ಸದಸ್ಯ ಶರಣಪ್ಪ ಬಳಿಚಕ್ರ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಚೈಲ್ಡ್ ಲೈನ್ 1098 ಡಾನ್ ಬೋಸ್ಕೊ ಸಮಾಜ ಸೇವಾ ಕೇಂದ್ರದ ನಿರ್ವಹಣೆ ಕೊಲ್ಯಾಬ್ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೊಜನೆ ಘಟಕ ವತಿಯಿಂದ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ 1098ಗೆ ಉಚಿತ ಕರೆಯ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಅಸಂಘಟಿತ ಮತ್ತು ಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಬಾಲ ಕಾರ್ಮಿಕರು, ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನ ಅಗತ್ಯವಿರುವ ಮಕ್ಕಳು, ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು, ಮಕ್ಕಳ ಕಳ್ಳಸಾಗಣಿಕೆಗೆ ಬಲಿಯಾದವರು, ಪೋಷಕರು ಅಥವಾ ಪಾಲಕರು ಕೈಬಿಟ್ಟ ಮಕ್ಕಳು, ಕಾಣೆಯಾದ ಮಕ್ಕಳು, ಮಾದಕ ದ್ರವ್ಯಕ್ಕೆ ಬಲಿಯಾದ ಮಕ್ಕಳು, ವಿಭನ್ನ ಸಾಮರ್ಥ್ಯದ ಮಕ್ಕಳು, ಮಾನಸಿಕ ವಿಕಲಚೇತನ ಮಕ್ಕಳು, ಎಚ್‌ಐವಿ ಸೋಂಕಿತ ಮಕ್ಕಳು, ಸಂಘರ್ಷ ಮತ್ತು ವಿಪತ್ತಿನಿಂದ ಬಳಲುತ್ತಿರುವ ಮಕ್ಕಳು, ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಹಾಯವಾಣಿ ಕರೆ ಮೂಲಕ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ದೇಶಾದ್ಯಂತ ಸಂಕಷ್ಟದಲ್ಲಿರುವ 3.95 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ. ಕೋವಿಡ್19 ಸಂಬಂಧಿತ ಸಹಾಯವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ| ಕಿಶನ್ ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ವೇತಾ ರಾಘವೇಂದ್ರ ಪೂರಿ, ಭೀಮಶಪ್ಪ ಕೊಂಡಾಪುರ, ಭೀಮರೇಡ್ಡಿ, ಮಂಜುನಾಥ, ಹೊನ್ನಪ್ಪ ಸಗರ, ಮಾರುತಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.