ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರ್ಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೇ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದರಿಂದ ಸರ್ಕಾರ-ಸಾರಿಗೆ ನೌಕರರ ನಡುವಿನ ಸಂಘರ್ಷ ಸೋಮವಾರ(ಡಿ.14) ಕೂಡ ಮುಂದುವರಿದಿದೆ.
ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರ ಪರದಾಟ ಮುಂದುವರಿದಿದೆ. ಸೋಮವಾರವಾದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳು ಮತ್ತು ಇತರ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಇನ್ನೊಂದೆಡೆ ಖಾಸಗಿ ಬಸ್ ಮತ್ತು ಆಟೋ ಸೇವೆ ದುಬಾರಿಯಾಗಿದ್ದು, ಹೆಚ್ಚಿನ ಹಣ ಕೊಟ್ಟು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ, ಕಲಬುರುಗಿ, ಕೊಪ್ಪಳ ಸೇರಿದಂತೆ ಹಲವೆಡೆ ಕೆಎಸ್ ಆರ್ ಟಿಸಿ ಸಂಚಾರ ಆರಂಭವಾಗಿದೆ. ಬೆಂಗಳೂರು, ಚಿತ್ರದುರ್ಗ ಮೊದಲಾದ ಕಡೆಗಳಲ್ಲಿ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್ ಗಾಗಿ ಕಾಯುವಂತಾಗಿದೆ. ಮುಷ್ಕರ ಮುಂದುವರೆದಿರುವುದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವೆಡೆ ಪೊಲೀಸ್ ಬಂದೋಬಸ್ತ್ ನಲ್ಲಿ ಬಿಎಂಟಿಸಿ ಮತ್ತು KSRTC ಸಂಚಾರ ಆರಂಭಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲೂ ಕೂಡ ಸರ್ಕಾರಿ ಬಸ್ ಸೇವೆ ಸ್ಥಬ್ಧವಾಗಿದ್ದು, ಪುತ್ತೂರು, ಧರ್ಮಸ್ಥಳ ಮುಂತಾದ ಕಡೆಗಳಿಗೆ ಪ್ರಯಾಣಿಸುವವರು, ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಆಶ್ರಯಿಸುವಂತಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆ; ವಾಹನ ಚಲಾಯಿಸುವಾಗ ಜಾಗ್ರತೆ: ಹೇಗಿದೆ ಇಂದಿನ ಗ್ರಹಬಲ ?