Advertisement
ಇಲ್ಲವಾದರೆ ಪಾಲಿಕೆಗೆ ಮುತ್ತಿಗೆ ಹಾಕಿ ತಾವೇ ಬಂಧಿಸಿ ಪೊಲೀಸರಿಗೆ ಒಪ್ಪಿಸಲು ವಕೀಲರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಗುರುವಾರ ಸಂಜೆ ನಡೆದ ಸಂಘದ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣೆಕರ ಮಾತನಾಡಿದರು.
Related Articles
Advertisement
ಸಂಘದ ಸದಸ್ಯರಾದ ಮಂಜುನಾಥ ದಾಟನಾಳ, ಸಂಜಯ ಬಡಸ್ಕರ, ಉಮೇಶ ಹುಡೇದ, ದೇವರಾಜ ಗೌಡರ, ಶಿವಾನಂದ ವಡ್ಡಟ್ಟಿ, ಎಸ್.ಆರ್. ಮಾಂಡ್ರೆ ಮಾತನಾಡಿ, ಕೊಲೆಗೆ ಯತ್ನ ಪ್ರಕರಣ ದಾಖಲಾಗಿ ಎರಡು ದಿನ ಕಳೆದರೂ ಪಾಲಿಕೆ ಆಯುಕ್ತರನ್ನು ಏಕೆ ಬಂಧಿಸಿಲ್ಲ. ಅಧಿಕಾರಿಗಳಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಪಾಲಿಕೆ ಆಯುಕ್ತರ ಪರ ವಾದ ಬೇಡ: ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ದೇಸಾಯಿ ಮಾತನಾಡಿ, ದೌರ್ಜನ್ಯ ವೆಸಗಿದ ಪಾಲಿಕೆ ಆಯುಕ್ತರನ್ನು ಬಂಧಿಸಿ, ಅಮಾನತು ಮಾಡಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಮಾಡಲಾಗುತ್ತಿದೆ.
ಬೀದಿ ಹೋರಾಟದ ಬದಲು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸೋಣ, ಪಾಲಿಕೆ ಆಯುಕ್ತರ ಪರ ಯಾವ ವಕೀಲರು ವಾದ ಮಂಡಿಸದಂತೆ ಮಾಡೋಣ. ನಿಮ್ಮ ಹೋರಾಟಕ್ಕೆ ಧಾರವಾಡ ಹೈಕೋರ್ಟ್ ವಕೀಲರ ಸಂಘದ ಪೂರ್ಣ ಬೆಂಬಲವಿದೆ ಎಂದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ ಮಾತನಾಡಿ, ಪಾಲಿಕೆ ಆಯುಕ್ತರು ಜನ ಸೇವೆಗೆ ಬಂದಿದ್ದೇನೆ ಎಂಬುದನ್ನು ಮರೆತು ಇನ್ನು ಸೈನ್ಯದಲ್ಲಿಯೇ ಇದ್ದೇನೆಂಬ ಭಾವನೆ ಹೊಂದಿದ್ದಾರೆ. ಎಲ್ಲರನ್ನೂ ಗಡಿಯಾಚೆಗಿನವರು ಎಂಬಂತೆ ಕಾಣುತ್ತಿದ್ದಾರೆ.
ವಕೀಲರ ವಿರುದ್ಧ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಧಾರವಾಡ ಕೋರ್ಟ್‌ನಲ್ಲೂ ಅವರ ಪರವಾಗಿ ಯಾವ ವಕೀಲರು ವಕಾಲತ್ತು ವಹಿಸಲ್ಲ. ಹೋರಾಟಗಳನ್ನು ಮಾಡುವಾಗ ಮುಂದಿನ ಆಗು-ಹೋಗುಗಳ ಬಗ್ಗೆ ಪರಾವಲೋಕಿಸಿ ನಿರ್ಧಾರ ತೆಗೆದುಕೊಳ್ಳಿ. ಸ್ಥಳೀಯ ವಕೀಲರ ಸಂಘದವರು ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೂ ಧಾರವಾಡ ವಕೀಲರ ಸಂಘ ಸದಾ ಬೆಂಬಲವಾಗಿರುತ್ತದೆ ಎಂದರು.
ಧಾರವಾಡ ವಕೀಲರ ಸಂಘದ ಕಾರ್ಯದರ್ಶಿ ಸಿ.ಎಸ್. ಪೊಲೀಸ್ ಪಾಟೀಲ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ, ಪದಾಧಿಕಾರಿಗಳು, ಸದಸ್ಯರು ಇದ್ದರು. ನಂತರ ಸಂಘದ ಪದಾಧಿಕಾರಿಗಳು ನ. 10ರಂದು ಬೆಳಗ್ಗೆ 10:30 ಗಂಟೆಗೆ ಸಂಘದ ಕಚೇರಿಯಲ್ಲಿ ಸರ್ವಸದಸ್ಯರ ಸಭೆ ಕರೆಯಲು ನಿರ್ಧರಿಸಿದರು.