ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ, ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನ ವಿರೋಧಿಸಿ ಮಾ.28 ಮತ್ತು 29ರಂದು ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ದಾವಣಗೆರೆ ಜಿಲ್ಲೆಯಲ್ಲೂ ಮುಷ್ಕರ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ. ಉಮೇಶ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ.28ರಂದು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮುಷ್ಕರ, ಹೋರಾಟ ನಡೆಸಿ ಮಧ್ಯಾಹ್ನ 12ರ ನಂತರ ದಾವಣಗೆರೆಯ ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಮಾ.29ರಂದು ಬೆಳಗ್ಗೆ 11ಕ್ಕೆ ಜಯದೇವ ವೃತ್ತದಲ್ಲಿ ಎಲ್ಲ ಕಾರ್ಮಿಕ ಸಂಘಟನೆ ಪದಾಧಿ ಕಾರಿಗಳು, ರೈತ, ವಿದ್ಯಾರ್ಥಿ, ಯುವ ಜನಾಂಗದವರು ಸೇರಿ ಬಹಿರಂಗ ಸಭೆ ನಡೆಸಲಾಗುವುದು ಎಂದರು.
ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಪೂರ್ವಭಾವಿಯಾಗಿ ಮಾ.20ರಂದು ದಾವಣಗೆರೆಯ ರೋಟರಿ ಬಾಲಭವನದಲ್ಲಿ ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 11ಕ್ಕೆ ನಡೆಯುವ ಸಮಾವೇಶ ದಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ ನಾಯರಿ ಅಧ್ಯಕ್ಷತೆ ವಹಿಸುವರು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎ.ಡಿ. ವಿಜಯಭಾಸ್ಕರ್,ಸೈಯದ್ ಮುಜೀಬ್, ಕೆ.ಬಿ. ಭಟ್, ಆರ್.ಎಸ್. ತಿಪ್ಪೇಸ್ವಾಮಿ, ಆವರಗೆರೆ ಚಂದ್ರು, ಕೆ.ಎಚ್. ಆನಂದರಾಜ್, ಜಬೀನಾಖಾನಂ, ಆನಂದಮೂರ್ತಿ, ಕೈದಾಳೆ ಮಂಜುನಾಥ್ ಇತರರು ಭಾಗವಹಿಸುವರು ಎಂದು ತಿಳಿಸಿದರು. ಸಾರ್ವತ್ರಿಕ ಮುಷ್ಕರದ ಸಂದರ್ಭದಲ್ಲಿ ಬ್ಯಾಂಕ್, ಎಲ್ ಐಸಿ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರು, ರೈತರು,ಕೃ ಷಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಭಾಗವಹಿಸುವರು ಎಂದು ತಿಳಿಸಿದರು.
ಎಐಯುಟಿಯುಸಿ ಮುಖಂಡ ಅಣಬೇರು ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನ, ರೈತ, ಕಾರ್ಮಿಕ ವಿರೋಧಿ ನೀತಿ ಜಾರಿಗೆ ಬರುತ್ತಿವೆ. ಕಾಂಗ್ರೆಸ್ 1992 ರಲ್ಲಿ ಜಾರಿಗೊಳಿಸಿದ ಜಾಗತೀಕರಣ ನೀತಿಯನ್ನು ಬಿಜೆಪಿ ತೀವ್ರ ಗತಿಯಲ್ಲಿ ಜಾರಿಗೆ ತರುತ್ತಿರುವ ಪರಿಣಾಮ ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಬಡವರ ಸಂಖ್ಯೆಯೂ ಹೆಚ್ಚಾಗುತ್ತಿದೆ, ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಕೇಂದ್ರದ ಜನ ವಿರೋಧಿ ನೀತಿ ವಿರೋಧಿಸಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೊರೊನಾದಂತಹ ಸಂದರ್ಭದಲ್ಲಿ ಅನೇಕರು ಜೀವ ಕಳೆದುಕೊಂಡರು. ಸರ್ಕಾರ ಒಂದೇ ಒಂದು ಆಸ್ಪತ್ರೆ ನಿರ್ಮಾಣ ಮಾಡಲಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗಿದೆ. ಕೊರೊನಾ ವಾರಿಯರ್ಸ್ ಅವರನ್ನು ಸನ್ಮಾನಿಸಲಾಯಿತು. ಆದರೆ, ಕೊರೊನಾ ವಾರಿಯರ್ಸ್ ಅವರಿಗೆ ಜೀವನ ಯೋಗ್ಯ ವೇತನ ನೀಡಲಿಲ್ಲ. ಮೂಗಿಗೆ ತುಪ್ಪ ಸವರುವಂತೆ ಆಶಾ, ಬಿಸಿಯೂಟ ಕಾರ್ಯಕರ್ತರಿಗೆ ಒಂದು, ಒಂದೂವರೆ ಸಾವಿರ ವೇತನ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು. ಸಮಿತಿಯ ಕೆ.ಎಚ್. ಆನಂದರಾಜ್, ಜಬೀನಾಖಾನಂ, ಮಂಜುನಾಥ ಕೈದಾಳೆ, ಪಿ. ಕರಿಬಸಪ್ಪ, ವಿ. ಲಕ್ಷ್ಮಣ್, ಸತೀಶ್ ಅರವಿಂದ್, ಶಿವಾಜಿರಾವ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು .