ಕಾಡಿನಲ್ಲಿ ಮಳೆಯಿಲ್ಲದೆ ಗಿಡಮರಗಳೆಲ್ಲ ಒಣಗಿದ್ದವು. ಹುಲ್ಲುಗಾವಲು ಕೂಡ ಇಲ್ಲವಾಗಿ ಮೊಲಗಳು ಬಳಲಿ ಬೆಂಡಾಗಿದ್ದವು. ಒಂದು ದಿನ ಪೊದೆಯೊಂದರಲ್ಲಿ ಮೊಲಗಳು ಸಭೆ ಸೇರಿದವು. ಹಿರಿಯ ಮೊಲವೊಂದು ಹೇಳಿತು- “ಗೆಳೆಯರೇ, ದೇವರು ನಮ್ಮ ಪಾಲಿಗೆ ಅತ್ಯಂತ ನಿರ್ದಯಿಯಾಗಿದ್ದಾನೆ. ಆಹಾರ ದೊರೆಯುತ್ತಿಲ್ಲ. ನಮ್ಮನ್ನು ಪುಟ್ಟದಾಗಿ ಸೃಷ್ಟಿಸಿರುವುದರಿಂದ ಶತ್ರುಗಳಿಂದ ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ನಮಗೆಲ್ಲ ಹುಲಿಗಳಂತೆ ಪಂಜ, ಸಾರಂಗಗಳಂತೆ ಕೋಡು, ಆನೆಗಳ ಸೊಂಡಿಲು, ಮೊಸಳೆಗಳ ಬಾಯಿಯಂತೆ ಒಂದೂ ಆಯುಧವನ್ನು ಕೊಡದೇ ಮೋಸ ಮಾಡಿದ್ದಾನೆ. ಹಾಗಾಗಿ ಯಾವುದೇ ಪ್ರಾಣಿ ನಮ್ಮ ಮೇಲೆ ದಾಳಿ ಮಾಡಿದರೂ ಓಡಿ ಹೋಗಿ ತಪ್ಪಿಸಿಕೊಳ್ಳುವುದೇ ನಮ್ಮ ಹಣೆಬರಹವಾಗಿದೆ.’. ಮಿಕ್ಕ ಮೊಲಗಳೆಲ್ಲ ಹೂಂಗುಟ್ಟಿದವು.
ಅಂತಿಮವಾಗಿ ಅವೆಲ್ಲವೂ ದೇವರಿಗೆ ಪಾಠ ಕಲಿಸುವ ಸಲುವಾಗಿ ಮುಷ್ಕರ ಹೂಡಲು ನಿಶ್ಚಯಿಸಿದವು. ಮುದಿಮೊಲ ಎದ್ದು ನಿಂತು “ನನಗೂ ಹಾಗೇ ಅನಿಸಿದೆ. ಈ ಕೋಟಲೆಗಳನ್ನೆಲ್ಲ ಸಹಿಸಿ ಬಾಳಲು ನನ್ನಿಂದ ಸಾಧ್ಯವಿಲ್ಲ. ದೇವರನ್ನೇ ಪರಿಹಾರಕ್ಕಾಗಿ ಕೇಳಿಬಿಡೋಣ’ ಎಂದು ಕೆರೆಯ ಬಳಿ ಹೊರಟಿತು. ಉಳಿದೆಲ್ಲ ಮೊಲಗಳು ಅಹುದಹುದೆಂದು ತಲೆಯಲ್ಲಾಡಿಸುತ್ತಾ ಅದನ್ನು ಹಿಂಬಾಲಿಸಿದವು.
ಕೆರೆಯ ದಂಡೆಯುದ್ದಕ್ಕೂ ಅನೇಕ ಕಪ್ಪೆಗಳು ಬಿಸಿಲು ಕಾಯಿಸುತ್ತಾ ಮಲಗಿದ್ದವು. ಮೊಲಗಳು ಗುಂಪು ಗುಂಪಾಗಿ ಕೆರೆಯ ಬಳಿ ಬರುತ್ತಿದ್ದಂತೆ ಅವೆಲ್ಲ ಬೆದರಿ ಪಟಪಟನೆ ಕೆರೆಗೆ ಹಾರಿದವು. ಆ ಒಂದು ಕ್ಷಣದಲ್ಲಿ ಮುದಿ ಮೊಲಕ್ಕೆ ಜ್ಞಾನೋದಯವಾಯಿತು. ಮುದಿ ಮೊಲ ತನ್ನವರನ್ನು ತಡೆದು ಹೇಳಿತು- “ನಿಲ್ಲಿ, ಸೋದರ, ಸೋದರಿಯರೇ… ದೇವರು ನಮಗೆ ಮೋಸ ಮಾಡಿಲ್ಲ. ನಮ್ಮನ್ನು ಕಂಡು ಬೆದರಿದ ಕಪ್ಪೆಗಳೆಲ್ಲ ನೀರಿಗೆ ಹಾರಿದವು. ಅಂದರೆ ಅವುಗಳಿಗೆ ನಮ್ಮನ್ನು ಕಂಡರೆ ಹೆದರಿಕೆ. ಅದೇ ಸುಮ್ಮನೆ ತನ್ನ ಪಾಡಿಗೆ ತಾನಿರುವಾಗ ನಾವೇಕೆ ನಿರಾಶಾವಾದಿಗಳಾಗಬೇಕು?’
ಮುದಿ ಮೊಲದ ಮಾತಿಗೆ ತಲೆದೂಗಿದ ಇತರೆ ಮೊಲಗಳೆಲ್ಲ ಸಂತಸದಿಂದ ಶಿಳ್ಳೆ ಹಾಕುತ್ತಾ ತಮ್ಮ ತಮ್ಮ ಪೊದೆಗಳೆಡೆಗೆ ದಾಂಗುಡಿಯಿಟ್ಟವು.
ಸಂಗ್ರಹ: ಕೆ. ಶ್ರೀನಿವಾಸರಾವ್