ಚಾಮರಾಜನಗರ: ಕೋವಿಡ್-19 ವೈರಾಣು ಹರಡದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿ ಜನರ ಆರೋಗ್ಯ ಕಾಪಾಡಬೇಕೆಂದು ಸಂಸದ ಶ್ರೀನಿವಾಸ್ ಪ್ರಸಾದ್ ಸೂಚಿಸಿದರು. ನಗರದಲ್ಲಿ ಕೋವಿಡ್-19 ತಡೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಪರಾಮರ್ಶೆ ಸಭೆಯಲ್ಲಿ ಮಾತನಾಡಿದರು.
ಮುನ್ನೆಚ್ಚರಿಕೆ ಪಾಲಿಸಿ: ಕೋವಿಡ್-19 ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ವೈಯಕ್ತಿಕ ಶುಚಿತ್ವ ಮತ್ತಿತರ ಪರಿಣಾಮಕಾರಿ ವಿಧಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಪ್ರಯೋಗಾಲಯ ಪರಿಶೀಲನೆ: ಕೋವಿಡ್ ಆಸ್ಪತ್ರೆ ಸ್ಥಾಪನೆ, ಫೀವರ್ ಕ್ಲಿನಿಕ್‌ಗಳ ಕಾರ್ಯ, ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಿರುವ ಪಿಸಿಆರ್ ಪ್ರಯೋಗಾಲಯ ಕಾರ್ಯವೈಖರಿಯನ್ನು ಪರಿಶೀಲಿಸಿ ದ ಸಂಸದರು, ಸುಸಜ್ಜಿತ ವ್ಯವಸ್ಥೆ, ಸೌಲಭ್ಯ ಜಿಲ್ಲೆಯಲ್ಲಿಯೇ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಹೆಚ್ಚು ಗಮನ ನೀಡಿದೆ ಎಂದರು.
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹಾಗೂ ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವ ಇಲ್ಲಿನ ಕಾರ್ಮಿಕರ ಬಗ್ಗೆ ವಹಿಸಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ವೇಳೆ ಕಾರ್ಮಿಕರ ಹಿತ ಕಾಯುವ ವಿಷಯಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು. ನಗರಸಭೆ ವ್ಯಾಪ್ತಿಯ ಆಟೋ, ಟ್ಯಾಕ್ಸಿ ಚಾಲಕರಿಗೆ ಆಹಾರ, ದಿನಸಿ ಪದಾರ್ಥಗಳ ಕಿಟ್ ನೀಡಲು ನಿರ್ಧರಿಸಲಾಗಿದೆ.
ಚಾಲಕರ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಶಾಸಕ ಮಹೇಶ್, ಜಿಪಂ ಅಧ್ಯಕ್ಷ ಮಹೇಶ್, ಸಿಇಒ ನಾರಾಯಣರಾವ್, ಎಸ್‌ಪಿ ಆನಂದಕುಮಾರ್, ಎಡೀಸಿ ಆನಂದ್, ಉಪ ವಿಭಾಗಾಧಿಕಾರಿ ನಿಖೀತಾ, ಡಿಎಚ್‌ಒ ಡಾ.ಎಂ.ಸಿ.ರವಿ, ಸಿಮ್ಸ್ ಡೀನ್ ಡಾ.ಸಂಜೀವ್ ಇತರರಿದ್ದರು.