Advertisement

ಟ್ವಿಟರ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ

12:25 AM May 28, 2021 | Team Udayavani |

ಹೊಸದಿಲ್ಲಿ: ಹೊಸ ಡಿಜಿಟಲ್‌ ನಿಯಮಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸಾಮಾಜಿಕ ಜಾಲತಾಣಗಳ ನಡುವಿನ ಸಮರ ತೀವ್ರಗೊಂಡಿದೆ. ಸರಕಾರದ ವಿರುದ್ಧ ವಾಟ್ಸ್‌ಆ್ಯಪ್‌ ಸಂಸ್ಥೆಯು ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ ಗುರುವಾರ ಟ್ವಿಟರ್‌ ಸಂಸ್ಥೆ ಕೂಡ ಮೌನ ಮುರಿದಿದೆ. ಟ್ವಿಟರ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, “ನಮಗೆ ಪಾಠ ಮಾಡಬೇಡಿ’ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ.

Advertisement

“ಕಾನೂನು ಪಾಲನೆಗೆ ನಾವು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯಬಹುದಾದ ಸಂಭಾವ್ಯ ದಾಳಿ ಮತ್ತು ಪೊಲೀಸರು ಬಳಸಬಹುದಾದ ಬೆದರಿಕೆ ತಂತ್ರದ ಬಗ್ಗೆ ನಮಗೆ ಕಳವಳವಿದೆ’ ಎಂದು ಟ್ವಿಟರ್‌ ಗುರುವಾರ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಭಾರತದಲ್ಲಿ ಇರುವ ನಮ್ಮ ಉದ್ಯೋಗಿಗಳು ಆತಂಕದಲ್ಲಿದ್ದಾರೆ. ದಿಲ್ಲಿ ಪೊಲೀಸರು ನಮ್ಮ ಕಚೇರಿಗೆ ಭೇಟಿ ನೀಡುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದಿದೆ.

ಟ್ವಿಟರ್‌ನ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕೇಂದ್ರ ಸರಕಾರ, “ಈ ಹೇಳಿಕೆ ಆಧಾರರಹಿತ, ಸುಳ್ಳು ಮತ್ತು ಭಾರತವನ್ನು ಅವಹೇಳನ ಮಾಡುವ ಪ್ರಯತ್ನ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ದೇಶದಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಸುರಕ್ಷಿತವಾಗಿ ಇರುತ್ತವೆ. ಅದರ ಉದ್ಯೋಗಿಗಳ ವೈಯಕ್ತಿಕ ಸುರಕ್ಷೆ ಮತ್ತು ಭದ್ರತೆಗೆ ಅಪಾಯವಿಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಪಾಠ ಮಾಡಲು ಬರಬೇಡಿ. ನೆಲದ ಕಾನೂನನ್ನು ಗೌರವಿಸಲು ಕಲಿಯಿರಿ. ಕಾನೂನು, ನೀತಿ ನಿಯಮಗಳನ್ನು ರಚಿಸುವ ಅಧಿಕಾರ ಸರಕಾರಕ್ಕಿದೆ, ಅದು ಹೇಗಿರಬೇಕೆಂದು ಬೇರೆಯವರು ನಮಗೆ ಹೇಳಿಕೊಡಬೇಕಾಗಿಲ್ಲ ಎಂದಿದೆ.

ದುರ್ಬಳಕೆ ತಡೆ ಉದ್ದೇಶ :

ಹೊಸ ನಿಯಮಗಳ ಕುರಿತು ವಾಟ್ಸ್‌ಆ್ಯಪ್‌ ಬಳಕೆದಾರರು ಆತಂಕಪಡಬೇಕಾದ ಅಗತ್ಯವಿಲ್ಲ. ಈ ವೇದಿಕೆಯ ದುರ್ಬಳಕೆ ತಡೆಯುವುದಷ್ಟೇ ನಮ್ಮ ಉದ್ದೇಶ ಎಂದು ಐಟಿ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಪ್ರಶ್ನೆ ಕೇಳುವ ಹಕ್ಕು ಸಹಿತ ಟೀಕೆಗಳನ್ನು ಸರಕಾರ ಸ್ವಾಗತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

15 ದಿನಗಳ ಗಡುವು :

ಸಾಮಾಜಿಕ ತಾಣಗಳ ಬಳಿಕ ಈಗ ಆನ್‌ಲೈನ್‌ ಸುದ್ದಿ ಮತ್ತು ಒಟಿಟಿ ಪ್ಲಾಟ್‌ಫಾರಂಗಳಿಗೆ ಹೊಸ ಡಿಜಿಟಲ್‌ ಮಾಧ್ಯಮ ನಿಯಮಗಳ ಪಾಲನೆ ಕುರಿತು ವಿವರ ನೀಡಲು ಕೇಂದ್ರ 15 ದಿನಗಳ ಗಡುವು ವಿಧಿಸಿದೆ. ಫೆಬ್ರವರಿಯಲ್ಲೇ ಕೇಂದ್ರ ಮಾಹಿತಿ ತಂತ್ರಜ್ಞಾನ (ಇಂಟರ್‌ಮೀಡಿಯರೀಸ್‌ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆಯ ಮಾರ್ಗಸೂಚಿ) ನಿಯಮಗಳು, 2021ನ್ನು ಸರಕಾರ ಘೋಷಿಸಿತ್ತು.

ಕೇಂದ್ರಕ್ಕೆ ಎನ್‌ಬಿಎ ಮನವಿ :

ಸಾಂಪ್ರದಾಯಿಕ ಟಿವಿ ಸುದ್ದಿ ಮಾಧ್ಯಮಗಳು ಮತ್ತು ಡಿಜಿಟಲ್‌ ಸುದ್ದಿ ಪ್ಲಾಟ್‌ಫಾರಂಗಳನ್ನು ಐಟಿ ನಿಯಮಗಳು 2021ರ ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರಕಾರಕ್ಕೆ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಅಸೋಸಿಯೇಶನ್‌(ಎನ್‌ಬಿಎ) ಮನವಿ ಮಾಡಿದೆ. ಈ ಮಾಧ್ಯಮಗಳು ಈಗಾಗಲೇ ವಿವಿಧ ಶಾಸನಗಳು, ಕಾನೂನುಗಳು, ಮಾರ್ಗಸೂಚಿಗಳು, ಸಂಹಿತೆಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ಹೀಗಾಗಿ ಹೊಸ ನಿಯಮಗಳಿಂದ ಇವುಗಳಿಗೆ ವಿನಾಯಿತಿ ನೀಡಬೇಕು ಎಂದು ಎನ್‌ಬಿಎ ಕೋರಿದೆ.

ನಾವು ಪ್ರತೀ ದೇಶದ ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತೇವೆ ಮತ್ತು ಆಯಾ ಸರಕಾರಗಳ ಜತೆ ಸೇರಿ ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ಮುಕ್ತ ಅಂತರ್ಜಾಲ ಎನ್ನುವುದು ಮೂಲ ತತ್ವವಿದ್ದಂತೆ. ಭಾರತ ದೀರ್ಘಾವಧಿಯಿಂದಲೂ ಅದನ್ನು ಪಾಲಿಸುತ್ತ ಬಂದಿದೆ.ಸುಂದರ್‌ ಪಿಚೈ, ಗೂಗಲ್‌ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next