ಹನೂರು: ಅಸ್ಪೃಶತೆ ಆಚರಣೆ ಕಾನೂನು ಬಾಹಿರ. ಈ ಬಗ್ಗೆ ಹಿಂದೆಯೂ 2 ಬಾರಿ ಸಭೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಆದರೂ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದ ಎಂದು ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ಜಯಕಾಂತ ಎಚ್ಚರಿಸಿದರು.
ಸಮೀಪದ ಹೂಗ್ಯಂ ಗ್ರಾಮದ ಏಳುದಂಡಿನ ಮಾರಮ್ಮನ ದೇಗುಲದ ಆವರಣದಲ್ಲಿ ಸಮಾಜ ಕಲ್ಯಾಣ, ಕಂದಾಯ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಸ್ಪೃಶತೆ ಆಚರಣೆ ವಿರುದ್ಧ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಕ್ಷೌರಿಕ ಅಂಗಡಿಗೆ ಹೋಗುವಂತಿಲ್ಲ: ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, ದಲಿತ ಸಮುದಾಯದ ಜನರಿಗೆ ಕಳೆದ 2 ವರ್ಷಗಳಿಂದ ಹೂಗ್ಯಂ ಗ್ರಾಮದಲ್ಲಿ ಕ್ಷೌರಿಕ ಅಂಗಡಿಗಳಲ್ಲಿ ಕ್ಷೌರ ಮಾಡುತ್ತಿಲ್ಲ. ಜತೆಗೆ ಹೋಟೇಲ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ಅಲ್ಲದೇ ಈ ಭಾಗದ ಜಲ್ಲಿಪಾಳ್ಯ, ಕೂಡಲೂರು, ಪೆದ್ದನಪಾಳ್ಯ, ನಲ್ಲೂರು ಗ್ರಾಮದ ಕ್ಷೌರಿಕ ಅಂಗಡಿಗಳಲ್ಲೂ ಕ್ಷೌರ ಮಾಡುತ್ತಿಲ್ಲ. ಕಳೆದ ವಾರ ಕಟಿಂಗ್ ಮಾಡಿಸಲು ಹೋದ ವೇಳೆ ಇನ್ನೊಮ್ಮೆ ಬಂದರೆ ಹೊಡೆದು ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಮಾನಸಿಕವಾಗಿ ತುಂಬಾ ನೊಂದಿದ್ದೇವೆ. ಆದ್ದರಿಂದ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಳಲು ತೋಡಿಕೊಂಡರು.
ಕೂಲಿ ಕೆಲಸಕ್ಕೂ ಕರೆಯಲ್ಲ: ನಂಜಮ್ಮ ಮಾತನಾಡಿ, ಗ್ರಾಮದಲ್ಲಿನ ಕಟಿಂಗ್ ಷಾಪ್‌ಗ್ಳಲ್ಲಿ ನಮ್ಮ ಮಕ್ಕಳಿಗೆ ಕಟಿಂಗ್ ಮಾಡಲು ನಿರಾಕರಿಸುತ್ತಿದ್ದಾರೆ. ಇದರಿಂದ 17 ಕಿ.ಮೀ ದೂರದ ಮಾರ್ಟಳ್ಳಿ ಗ್ರಾಮಕ್ಕೆ ಬರಬೇಕಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಅಲ್ಲದೇ ಇತರೆ ಸಮುದಾಯದವರು ನಮ್ಮನ್ನು ಕೂಲಿ ಕೆಸಲಕ್ಕೆ ಕರೆಯುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಗ್ರಾಪಂ ಮೂಲಕ ನಮಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.
ಮನವಿಯನ್ನು ಆಲಿಸಿದ ಅಧಿಕಾರಿಗಳು ಹೋಟೇಲ್, ಕ್ಷೌರಿಕ ಅಂಗಡಿಯವರನ್ನು ಪ್ರಶ್ನಿಸಿದಾಗ ದಲಿತ ಸಮುದಾಯದವರನ್ನು ಕ್ಷೌರಿಕ ಹಾಗೂ ಹೋಟೆಲ್‌ಗಳಿಗೆ ಪ್ರವೇಶ ನೀಡಿದರೆ ಬೇರೆ ಸಮುದಾಯದವರು ಅಂಗಡಿಗಳಿಗೆ ಬರುವುದಿಲ್ಲದಿರುವುದು ಸಮಸ್ಯೆಯಾಗಿದೆಯಷ್ಟೇ, ಇನ್ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದರ ಮೂಲಕ ಎಲ್ಲರಿಗೂ ಪ್ರವೇಶ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.
ಕೊನೆಯ ಶಾಂತಿ ಸಭೆ: ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸುತ್ತಿರುವುದು ಕಾನೂನು ಬಾಹಿರ. ಆಗಾಗಿ ಪ್ರತಿಯೊಬ್ಬರೂ ಸ್ನೇಹ ಸಂಬಂಧವನ್ನು ಹೊಂದುವುದರ ಮೂಲಕ ಹೋಟೆಲ್ ಹಾಗೂ ಕ್ಷೌರಿಕ ಅಂಗಡಿಗಳಿಗೆ ಪ್ರವೇಶ ನೀಡಬೇಕು. ಇದುವರೆಗೂ ಇಲ್ಲಿ 3 ಶಾಂತಿ ಸಭೆಯನ್ನು ನಡೆಸಲಾಗಿದ್ದು, ಇದು ಕೊನೆಯ ಸಭೆ. ಒಂದು ವೇಳೆ ಇಂತಹ ಘಟನೆ ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ಕೊಳ್ಳೇಗಾಲ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ನವೀನ್‌ಕುಮಾರ್ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಕಾಂತ, ತಹಶೀಲ್ದಾರ್ ಜಿ.ಎಚ್.ನಾಗರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್, ಪಿಡಿಒ ಪುಷ್ಪಲತಾ ಹಾಗೂ ಹೂಗ್ಯಂ ಗ್ರಾಪಂ ವ್ಯಾಪ್ತಿಯ ವಿವಿಧ ಸಮುದಾಯದ ಮುಖಂಡರು ಇದ್ದರು.