Advertisement

ಇಂದು ಕಟ್ಟುನಿಟ್ಟಿನ ಲಾಕ್‌ಡೌನ್‌ : ತುರ್ತು ಸೇವೆ ಹೊರತು ಪಡಿಸಿ ಸಂಚಾರ-ವಹಿವಾಟು ಸ್ಥಗಿತ

07:17 AM May 24, 2020 | mahesh |

ಹುಬ್ಬಳ್ಳಿ: ರಾಜ್ಯ ಸರಕಾರದ ಸೂಚನೆಯಂತೆ ರವಿವಾರ ಕಟ್ಟುನಿಟ್ಟಿನ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ಸಂಜೆಯಿಂದಲೇ ಅಗತ್ಯ ಕ್ರಮ  ಕೈಗೊಂಡಿದ್ದು, ರವಿವಾರ ತುರ್ತು ಸೇವೆ ಹೊರತು ಪಡಿಸಿ ಉಳಿದ ಬಹುತೇಕ ಸಂಚಾರ, ವ್ಯಾಪಾರ-ವಹಿವಾಟು ಬಂದ್‌ ಆಗಲಿದೆ. ರವಿವಾರ ಲಾಕ್‌ಡೌನ್‌ ಕಟ್ಟುನಿಟ್ಟು ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ಶನಿವಾರ ಸಂಜೆ 7:00ಗಂಟೆಯಿಂದ ಸೋಮವಾರ ಬೆಳಿಗ್ಗೆ 7:00ಗಂಟೆವರೆಗೂ ಇದು ಮುಂದುವರಿಯಲಿದೆ.

Advertisement

ಅಗತ್ಯ ಸೇವೆಗಳು ಮಾತ್ರ: ರವಿವಾರ ಲಾಕ್‌ ಡೌನ್‌ ಬಿಗಿಯಾಗಿರಬೇಕು ಎನ್ನುವ ಕಾರಣಕ್ಕೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ  ವ್ಯಾಪಾರ, ವಹಿವಾಟುಗಳಿಗೆ ಅವಕಾಶ ಇರಲ್ಲ. ಅಗತ್ಯ ಸೇವೆಗಳಾದ ಔಷಧಿ ಅಂಗಡಿ, ಆಸ್ಪತ್ರೆ, ಹಾಲಿನ ಅಂಗಡಿಗೆ ಅವಕಾಶ ನೀಡಲಾಗಿದೆ. ಇನ್ನೂ ಈ ಸೇವೆಗಳ ಹೆಸರಲ್ಲಿ ವಿನಾಕಾರಣ ರಸ್ತೆಗಿಳಿದರೆ ಪೊಲೀಸರು ಯಾವುದೇ ಮುಲಾಜಿಯಿಲ್ಲದೆ ಪ್ರಕರಣ ದಾಖಲಿಸಲಿದ್ದಾರೆ. ಲಾಕ್‌ ಡೌನ್‌ ಬಿಗಿಯಾಗಿರಬೇಕೆನ್ನುವ ಕಾರಣಕ್ಕೆ ಪ್ರಮುಖವಾಗಿ ಸಮೂಹ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಈ ಕುರಿತು ವಾಯವ್ಯ ಸಾರಿಗೆ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಆಟೋ, ಟ್ಯಾಕ್ಸಿ, ಅಂಗಡಿ ಮುಗ್ಗಟ್ಟುಗಳು ಬಂದ್‌ ಇರಲಿವೆ.

ಕಾರ್ಯಪ್ರವೃತ್ತರಾದ ಪೊಲೀಸರು: ರವಿವಾರದ ಲಾಕ್‌ಡೌನ್‌ ಬಿಗಿಯಾಗಿಸುವ ನಿಟ್ಟಿನಲ್ಲಿ ಶನಿವಾರ ಪೊಲೀಸರು ಮೈಕ್‌ಗಳ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಿದರು. ಸಂಜೆಯ ನಂತರ ಆಯಾ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಕೆಲಸ ಮಾಡಿದರು. ಇನ್ನೂ ಕೆಲ ರಸ್ತೆಗಳಿಗೆ ಬ್ಯಾರಿಕೇಡ್‌ ಅಳವಡಿಸಿದರು. ಇನ್ನೂ ಸಂಜೆ 7:00 ಗಂಟೆಯ ನಂತರ ರಸ್ತೆಗಿಳಿದ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದು. ಸಕಾರಣವಿಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿ ಕಾರ್ಯಕ್ಕೆ ಮುಂದಾದರು. ಇನ್ನೂ ಕೆಲವರಿಗೆ ಪುನರಾವರ್ತನೆಯಾದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು.

ಮದುವೆಗಿಲ್ಲ ಸಮಸ್ಯೆ: ಪೂರ್ವ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಈ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರಕಾರ ಅನುಮತಿ ನೀಡಿದ್ದು, 50 ಜನರು ಮೀರದಂತೆ ಸಮಾರಂಭ ನಡೆಸಬೇಕೆನ್ನುವ ಷರತ್ತು ವಿಧಿಸಲಾಗಿದೆ. ರವಿವಾರದ ಲಾಕ್‌ಡೌನ್‌ ಅಕ್ಷರಶಃ ಮೊದಲ ಲಾಕ್‌ ಡೌನ್‌ನಂತೆ ಇರಲಿದ್ದು, ಸೋಂಕಿನಿಂದ ದೂರವಿರಲು ಸಾರ್ವಜನಿಕರು ಈ ಅವಧಿಯಲ್ಲಿ ವಿನಾಕಾರಣ ಹೊರಗೆ
ಬರಬಾರದು. ಮಹಾನಗರದಾದ್ಯಂತ ಬಿಗಿ ಭದ್ರತೆ ಇರಲಿದೆ. ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ಇರಲ್ಲ ಎಂದು ಪೊಲೀಸರು
ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಇಂದು ನಿಷೇಧಾಜ್ಞೆ ಜಾರಿ
ಧಾರವಾಡ: ಕೋವಿಡ್ ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮೇ 24 ರವಿವಾರ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಆದೇಶ ಮೇ 23ರ ಸಂಜೆ 7:00 ರಿಂದ ಮೇ 25 ಬೆಳಿಗ್ಗೆ 7:00 ಗಂಟೆವರೆಗೆ ಮದ್ಯ ಉತ್ಪಾದನೆ, ಮದ್ಯ ಸಾಗಾಟ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ಕಿರಾಣಿ, ತರಕಾರಿ, ಹಾಲು , ಚಿಕ ನ್‌-ಮಟನ್‌ಅಂಗಡಿ, ಹೋಟೆಲ್‌ಗ‌ಳಿಂದ ಪಾರ್ಸಲ್‌ ಸೇವೆ ಹೊರತು ಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿರಬೇಕು.
ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಯಾವುದೇ ವಾಣಿಜ್ಯ ವಹಿವಾಟುಗಳಿಗೆ ಅವಕಾಶವಿಲ್ಲ. 05ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.ಈ ಅವಧಿಯಲ್ಲಿ ಸಾರ್ವಜನಿಕರು ತುರ್ತು ವೈದ್ಯಕೀಯ ಕಾರ್ಯ ಹೊರತು ಪಡಿಸಿ ಅನಗತ್ಯವಾಗಿ ತಿರುಗಾಡುವುದನ್ನು ನಿಬಂರ್ಧಿಸಿದೆ.

Advertisement

ಜಿಲ್ಲೆಯಲ್ಲಿನ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಶವಸಂಸ್ಕಾರ ಕಾರ್ಯದಲ್ಲಿ ಕೇವಲ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಸರಕಾರಿ ವಾಹನಗಳಿಗೆ ಮತ್ತು ಕೋವಿಡ್‌-19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳಿಗೆ ಈ ಆದೇಶ ಅನ್ವಯಿಸಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next