Advertisement

Water: ಜಲ ಅಕ್ರಮ ತಡೆಗೆ ಕಠಿನ ಕಾನೂನು

12:45 AM Nov 20, 2023 | Team Udayavani |

ದಾವಣಗೆರೆ: ನೀರಾವರಿ ಯೋಜನೆಗಳ ಪೈಪ್‌ಲೈನ್‌ ಒಡೆಯುವುದು, ಗೇಟ್‌ಗಳಿಗೆ ಧಕ್ಕೆ ಮಾಡುವುದು, ಅನಧಿಕೃತವಾಗಿ ಪಂಪ್‌ಸೆಟ್‌ ಅಳವಡಿಸಿ ನೀರು ಬಳಸುವುದು ಮತ್ತಿತರ ಜಲ ಅಕ್ರಮಗಳನ್ನು ತಡೆಯಲು ರಾಜ್ಯ ಸರಕಾರವು ಕರ್ನಾಟಕ ನೀರಾವರಿ ಕಾಯಿದೆ-1965ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಈ ಕುರಿತು ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಿದೆ.

Advertisement

ಜಲಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಡಿ ಪೂರ್ಣಗೊಂಡ ನೀರಾವರಿ ಯೋಜನೆಗಳಲ್ಲಿ ಯೋಜಿತ ಅಚ್ಚುಕಟ್ಟು ಪ್ರದೇಶಕ್ಕೆ ಕಾಲುವೆ, ಪೈಪ್‌ ಜಾಲದಡಿ ನೀರು ಹರಿಸಲಾಗುತ್ತಿದೆ. ಆದರೆ ಕೆಲವೆಡೆ ರೈತರು ಅನಧಿಕೃತವಾಗಿ ಪಂಪ್‌ ಹಾಗೂ ಪೈಪ್‌ಗ್ಳನ್ನು ಕಾಲುವೆಗೆ ಅಳವಡಿಸುವುದು, ಏರಿ ಭಾಗದಲ್ಲಿ ಕಾಲುವೆಗಳನ್ನು ಕೊರೆದು ಪೈಪ್‌ಲೈನ್‌ ಅಳವಡಿಸುವುದು, ಕಾಲುವೆಯಡಿ ಕೃತಕ ಅಡ್ಡಗೋಡೆ ನಿರ್ಮಿಸುವುದು, ಕಾಲುವೆ ಔಟ್‌ಲೆಟ್‌ಗಳಿಗೆ ಅಳವಡಿಸಿರುವ ಗೇಟ್‌ಗಳಿಗೆ ಧಕ್ಕೆ ಮಾಡುವುದು, ಕಾಲುವೆ ಜಾಲದಲ್ಲಿ ಕಸಕಡ್ಡಿ ಹಾಕುವುದು ಮತ್ತಿತರ ಅಕ್ರಮ ನಡೆಸುತ್ತಿದ್ದಾರೆ.

ಇದರಿಂದ ನೀರು ಬಳಕೆಯಲ್ಲಿ ವ್ಯತ್ಯಯ ವಾಗುವ ಜತೆಗೆ ಕಾಲುವೆ ಜಾಲದ ಕೊನೆಯ ವರೆಗೆ ಸಮರ್ಪಕ ಹಾಗೂ ಯೋಜಿತ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದು ಫಲಾನುಭವಿ ರೈತರಲ್ಲಿ ಅಸಮಾಧಾನ ಮೂಡಿಸಿದೆ. ಅಧಿಕಾರಿಗಳು ಕೂಡ ಇದರಿಂದ ತೊಂದರೆ ಅನುಭವಿಸುತ್ತಿದ್ದು, ಇದನ್ನು ಗಂಭೀರ ವಾಗಿ ಪರಿಗಣಿಸಿದ ರಾಜ್ಯ ಸರಕಾರವು ಈಗ ನೀರಾವರಿ ಕಾಯಿದೆ-1965ಕ್ಕೆ ತಿದ್ದುಪಡಿ ತರಲು ಮುಂದಾಗಿದೆ.

ಅಧ್ಯಯನ ಸಮಿತಿಯಲ್ಲಿ ಯಾರ್ಯಾರಿದ್ದಾರೆ ?
ಕರ್ನಾಟಕ ನೀರಾವರಿ ಕಾಯಿದೆ-1965ಕ್ಕೆ ಸೂಕ್ತ ಪರಿಣಾಮಕಾರಿ ಅಧಿಕಾರಯುಕ್ತ ಪ್ರಾವಿಧಾನಗಳನ್ನು ಕಲ್ಪಿಸಲು ಅಗತ್ಯವಿರುವ ಕರಡು ತಿದ್ದುಪಡಿಗಳನ್ನು ರೂಪಿಸಿ, ಸೂಕ್ಷ್ಮ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಿವೃತ್ತ ಮುಖ್ಯ ಎಂಜಿನಿಯರ್‌ಗಳಾದ ಶಂಕರೇಗೌಡ, ಎಸ್‌.ಎಚ್‌. ಮಂಜಪ್ಪ, ಸಮಗ್ರ ಜಲಸಂಪನ್ಮೂಲ ನಿರ್ವಹಣ ಉನ್ನತ ಕೇಂದ್ರದ ತಾಂತ್ರಿಕ ನಿರ್ದೇಶಕ ಡಾ| ಪಿ. ಸೋಮಶೇಖರ ರಾವ್‌, ನೀರಾವರಿ ನಿಗಮದ ಕಾನೂನು ಸಲಹೆಗಾರ ರಾಘವೇಂದ್ರ ಕುಲಕರ್ಣಿ, ಕಾರ್ಯದರ್ಶಿ ಗಳಾದ ಬಿ.ವಿ. ಕಾಮತ್‌, ಪ್ರಕಾಶ, ಕಾರ್ಯಪಾಲಕ ಎಂಜಿನಿಯರ್‌ ಡಿ.ವಿ. ಪಾಟೀಲ್‌ ಅಧ್ಯಯನ ಸಮಿತಿ ಸದಸ್ಯರಾಗಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಶ ಪ್ರಸಾದ್‌ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಕರ್ನಾಟಕ ನೀರಾವರಿ
ಕಾಯಿದೆ 1965ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಅಧ್ಯಯನ ನಡೆಸಿ, ಶಿಫಾರಸಿ ನೊಂದಿಗೆ ವರದಿ ಸಲ್ಲಿಸಲು ಸಮಿತಿ ರಚಿಸ ಲಾಗಿದೆ. ಸಮಿತಿಯು ಅಧ್ಯಯನ ಮಾಡಿ 15 ದಿನಗಳಲ್ಲಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. – ಮನೋಹರ ರೊಟ್ಟಿ, ವಿಶೇಷ ಕರ್ತವ್ಯಾಧಿಕಾರಿ, ಜಲಸಂಪನ್ಮೂಲ ಇಲಾಖೆ

Advertisement

 ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next