ಬೀದರ: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟ ಹಿನ್ನೆಲೆಯಲ್ಲಿ ಮಾ.16 ರಿಂದ ಮೇ 4ರ ವರೆಗೆ ಜಿಲ್ಲಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಮತದಾರರ ಪ್ರಭಾವಕ್ಕೊಳಪಡುವ ಎಲ್ಲ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿ ಪತ್ರ, ಕಟೌಟ್ಸ್, ಬ್ಯಾನರ್ ತೆರವಿಗೆ ಎಲ್ಲ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಪ್ರವಾಸಿ ಮಂದಿರಗಳನ್ನು ರಾಜಕೀಯ ಪ್ರೇರಿತ ವ್ಯಕ್ತಿಗಳಿಗೆ, ಮುಖಂಡರಿಗೆ ನೀಡದೇ, ತಮ್ಮ ವಶಕ್ಕೆ ಪಡೆಯುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದ ಡಿಸಿ, ಎಲ್ಲ ಚುನಾಯಿತ, ನಾಮ ನಿರ್ದೇಶಿತಗೊಂಡ ರಾಜಕೀಯ ಮುಖಂಡರಿಗೆ ನೀಡಲಾದ ಸರ್ಕಾರಿ ವಾಹನ ಸೌಲಭ್ಯವನ್ನು ಮರಳಿ ಪಡೆದು ಜಿಲ್ಲಾಡಳಿತದ ಅಧೀನದಲ್ಲಿ ಇಟ್ಟುಕೊಳ್ಳಲಾಗುತ್ತದೆ ಎಂದರು.
ಸುಗಮ, ಶಾಂತಿಯುತ ಚುನಾವಣೆ ನಡೆಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಸವಕಲ್ಯಾಣದ ಮಿನಿ ವಿಧಾನಸೌಧದಲ್ಲಿ ಮತದಾರರ ಮಾಹಿತಿ ಕೇಂದ್ರ (9480347656)ವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮತದಾರರ ನಿರಂತರ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ. ಆ.18ರಂದು ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಹೊಸದಾಗಿ ಮತದಾರರ ಹೆಸರು ನೋಂದಾಯಿಸಬೇಕಾದ ಮತದಾರರ ನೋಂದಣಿಗಾಗಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಆದ್ದರಿಂದ ಅರ್ಹ ಮತದಾರರು ನಾಮಪತ್ರ ಸ್ವೀಕರಿಸುವ ಕೊನೆಯ ದಿನಾಂಕ 30ರೊಳಗಾಗಿ ನೋಂದಣಿ ಪ್ರಕ್ರಿಯೆಗಾಗಿ ಅಂತರ್ಜಾಲದಲ್ಲಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ರಾಮಚಂದ್ರನ್ ಕೋರಿದರು. ಜಹೀರಾ ನಸೀಮ್, ರುದ್ರೇಶ್ ಘಾಳಿ, ಡಾ| ಗೋಪಾಲ್ ಬ್ಯಾಕೋಡ್ ಇದ್ದರು.
ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಮಾ.23ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಮಾ.30 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಮಾ.31 ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಏ.3 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಏ.17ರಂದು ಮತದಾನ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ 2,38,855 ಮತದಾರರಿದ್ದು, 1,24,530 ಪುರುಷ, 1,14,325 ಮಹಿಳಾ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ 264 ಮೂಲ ಮತಗಟ್ಟೆಗಳು ಮತ್ತು 81 ಹೆಚ್ಚುವರಿ ಮತಗಟ್ಟೆಗಳು ಸೇರಿ 345 ಮತಗಟ್ಟೆಗ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರಾಮಚಂದ್ರನ್ ಆರ್. ಡಿಸಿ, ಬೀದರ