Advertisement

ಅಕ್ರಮ ತಡೆಗೆ ಕಠಿನ ಮಾರ್ಗಸೂಚಿ: ಹೈಕೋರ್ಟ್‌ ನೋಟಿಸ್‌

12:30 AM Mar 12, 2024 | Team Udayavani |

ಬೆಂಗಳೂರು: ಚುನಾವಣ ಪೂರ್ವ, ಚುನಾವಣೆ ಸಂದರ್ಭದಲ್ಲಿ ಹಾಗೂ ಚುನಾವಣ ಅನಂತರದ ಭ್ರಷ್ಟಾಚಾರ, ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆಯ ಜತೆಗೆ ಕಠಿನ ನಿಯಮಗಳನ್ನು ರೂಪಿಸಲು ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರಕಾರ ಹಾಗೂ ಚುನಾವಣ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ವಿಚಾರವಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗೌತಮ್‌ ಎಂ. ಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾ| ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಭಾರತ ಚುನಾವಣಾ ಆಯೋಗ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಚುನಾವಣ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಎಪ್ರಿಲ್‌ 1ಕ್ಕೆ ಮುಂದೂಡಿತು.

ಚುನಾವಣಾ ಪೂರ್ವ, ಚುನಾವಣೆ ಸಂದರ್ಭದಲ್ಲಿ ಹಾಗೂ ಚುನಾವಣಾ ನಂತರದ ಭ್ರಷ್ಟಾಚಾರ, ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆಯ ಜತೆಗೆ ಕಠಿಣ ನಿಯಮಗಳನ್ನು ರೂಪಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣಾ ಅಕ್ರಮ, ಆಮಿಷಗಳನ್ನು ತಡೆಗಟ್ಟಲು ಈಗಿರುವ ಕಾನೂನು-ನಿಯಮಗಳನ್ನು ಮರುಪರಿಶೀಲಿಸಬೇಕು. ಚುನಾವಣೆ ವೇಳೆ ಹಣದ ಆಮಿಷಗಳನ್ನು ಪತ್ತೆ ಹಚ್ಚಿನ ಕಾನೂನು ರೀತಿ ಕ್ರಮ ಜರುಗಿಸಲು ಪ್ರತಿ ಮತಗಟ್ಟೆಗೆ ಹೆಚ್ಚುವರಿ ಚುನಾವಣಾ ಸಿಬ್ಬಂದಿ ನಿಯೋಜಿಸಬೇಕು. ಆರ್ಥಿಕ ದುರ್ಬಲ ವರ್ಗಗಳ ವಾಸ ಮಾಡುವ ಪ್ರದೇಶಗಳಲ್ಲಿ ಪ್ರಚಾರದ ಮೇಲೆ ನಿಗಾ ಇಡಲು ಪೊಲೀಸ್‌ ಗಸ್ತು, ನೀತಿ ಸಂಹಿತೆ ಜಾರಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಳೆದ ವಿಧಾನಸಭೆ ಚುನಾವಣೆ ವೇಳೆ ನಡೆದ ಚುನಾವಣಾ ಅಕ್ರಮಗಳು ಅರ್ಜಿದಾರರು 2023ರ ಜುಲೈ 13ರಂದು ಬರೆದಿರುವ ಪತ್ರ ಆಧರಿಸಿ ಕ್ರಮ ಜರುಗಿಸಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next