ಉಡುಪಿ : ಜಿಲ್ಲೆಯಲ್ಲಿ ಜೂನ್ 14ರಿಂದ ಪ್ರಾರಂಭವಾಗುವ ಅನ್‌ಲಾಕ್ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಚಟುವಟಿಕೆಗಳು ಮಾತ್ರ ನಡೆಯಲು ಅನುಮತಿ ನೀಡಿ, ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.
ಇಂದು ಜಿಲ್ಲೆಯ ತಹಶೀಲ್ದಾರ್ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲೆಯಲ್ಲಿ ಅನ್‌ಲಾಕ್ ಮಾರ್ಗ ಸೂಚಿಗಳ ಕುರಿತು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು, ಎಲ್ಲಾ ಅಧಿಕಾರಿಗಳು ಮತ್ತು ಪಂಚಾಯತ್ ಗಳ ಸಹಕಾರದಿಂದ ಯಶಸ್ವಿಯಾಗಿ ಅನುಷ್ಠಾನ ಮಾಡಿದರ ಫಲವಾಗಿ ಜಿಲ್ಲೆಯಲ್ಲಿ ಸೋಂಕು ಹರಡುವುದು ಗಣನೀಯವಾಗಿ ಕಡಿಮೆಯಾಗಿದೆ, ಇದೇ ಕಾರಣ ದಿಂದ ಸರ್ಕಾರ ಜಿಲ್ಲೆಯಲ್ಲಿ ಅನ್‌ಲಾಕ್ ಘೋಷಣೆ ಮಾಡಿದ್ದು , ಈ ಕುರಿತಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಮಾಡುವುದರ ಮೂಲಕ ಜಿಲ್ಲೆಯಲ್ಲಿ ಪಾಸಿಟಿವಿಟಿ ದರವನ್ನು ಸೊನ್ನೆಗೆ ಇಳಿಸಬೇಕು ಎಂದು ಹೇಳಿದರು .
ಇದನ್ನೂ ಓದಿ :ಉಡುಪಿ ತಾಲೂಕಿನಾದ್ಯಂತ ಉತ್ತಮ ಮಳೆ: ವಿವಿಧೆಡೆ ವಿದ್ಯುತ್ ವ್ಯತ್ಯಯ
ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಾರ್ಗಸೂಚಿಯಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಕುರಿತು ಖುದ್ದು ಪರಿಶೀಲಿಸಬೇಕು, ಮಾರ್ಗಸೂಚಿಯಲ್ಲಿ ಇಲ್ಲದ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ಅಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸಮಾರಂಭಗಳು ,ಸನ್ಮಾನ ಕಾರ್ಯಕ್ರಮಗಳು ನಡೆಯದಂತೆ ಅಧಿಕಾರಿಗಳು ಗಮನಹರಿಸಬೇಕು ಕಾರ್ಯಕ್ರಮಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅನ್‌ಲಾಕ್ ಅವಧಿಯಲ್ಲಿ ಮದುವೆಗಳಿಗೆ ಮಾತ್ರ ಅನುಮತಿ ನೀಡಿದ್ದು ,ಮದುವೆ ಹೊರತುಪಡಿಸಿ ಇತರ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಲಾದ ಫ್ಲೈಯಿಂಗ್ ಸ್ಕ್ವಾಡ್ ಗಳು ಭಾಗವಹಿಸಿದ್ದರು