Advertisement

‘ಮಾಲಿನ್ಯ ಉಂಟುಮಾಡುವವರ ವಿರುದ್ಧ ಕ್ರಮ’

02:00 AM Jul 14, 2017 | Team Udayavani |

ಸುರತ್ಕಲ್‌: ಸುರತ್ಕಲ್‌, ಕಾಟಿಪಳ್ಳ ಪರಿಸರದಲ್ಲಿ ಮಂಗಳವಾರ ಬೆಳಗ್ಗೆ  5 ಗಂಟೆಯ ಸುಮಾರಿಗೆ ಭಾರೀ ದುರ್ವಾಸನೆ ಹರಡಿ ಸಮಸ್ಯೆಗೀಡಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಗುರುವಾರ ಬೆಳಗ್ಗೆ 5 ಗಂಟೆಗೆ ಶಾಸಕ ಮೊದಿನ್‌ ಬಾವಾ ಅವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಎನ್‌ಐಟಿಕೆ ತಜ್ಞರೊಂದಿಗೆ ಎಂಆರ್‌ಪಿಎಲ್‌, ಬಿಎಎಸ್‌ಎಫ್‌, ಎಚ್‌ಪಿಸಿಎಲ್‌ ಮತ್ತಿತರ ಕೈಗಾರಿಕಾ ಪ್ರದೇಶದ ಸುತ್ತಲಿನ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಘಾಟು ವಾಸನೆಗೆ ತಲೆ ನೋವು, ವಾಂತಿ ಮತ್ತಿತರ ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ಮುಂಜಾನೆ ಎರಡು ಗಂಟೆಯ ಬಳಿಕ ಈ ಬೃಹತ್‌ ಉದ್ಯಮದ ಸುತ್ತಮುತ್ತಲಿನ ಗ್ರಾಮದ ಜನರು ವಾಯು ಮಾಲಿನ್ಯದಿಂದ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಸ್ವತಃ ಅನುಭವ ನನಗೇ ಆಗಿದೆ. ಈ ಬಗ್ಗೆ ಅಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

Advertisement

ಪೆಟ್‌ ಕೋಕ್‌ ಬಳಕೆ 
ಮಾರಕ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತಿರುವ ಪೆಟ್‌ ಕೋಕ್‌ ಬಳಕೆ ನಿರ್ಬಂಧಿಸಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದ್ದರೂ ಮಂಗಳೂರಿನ ಎರಡು ಕಾರ್ಖಾನೆಗಳು ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸುತ್ತಿರುವುದು ಕಂಡುಬಂದಿದೆ. ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ ಹಾಗೂ ವಿಶೇಷ ಆರ್ಥಿಕ ವಲಯದಲ್ಲಿರುವ ಜೆಬಿಎಫ್‌ ಕಂಪೆ‌ನಿಗಳು ಬಳಸುತ್ತಿವೆ. ಇದಕ್ಕೆ ವಿವಿಧ ರಾಜ್ಯಗಳಲ್ಲಿ ಈಗಾಗಲೇ ನಿಷೇಧ ಹೇರಲಾಗಿದೆ. ಸಿಮೆಂಟ್‌ ಕಂಪೆನಿಗಳಿಗೆ ಜನರಹಿತ ಪ್ರದೇಶದಲ್ಲಿ ಬಳಸಲು ಅನುಮತಿ ಮಾತ್ರ ನೀಡಲಾಗಿದೆ. ಇದರ ಬಗ್ಗೆಯೂ ನಿಯಂತ್ರಣ ಮಂಡಳಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಾಸಕರು ತಿಳಿಸಿದರು. ಎನ್‌ಐಟಿಕೆ ಪ್ರೊಫೆಸರ್‌ ಹಾಗೂ ಪ್ರಕೃತಿ ವಿಕೋಪ‌ ಸಮಿತಿ ಸದಸ್ಯ ಶ್ರೀನಿಕೇತನ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಜಯಪ್ರಕಾಶ್‌, ಲಕ್ಷ್ಮೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಜು.20ಕ್ಕೆ ಕಂಪೆ‌ನಿ ಅಧಿಕಾರಿಗಳ ತುರ್ತು ಸಭೆ
ದುರ್ವಾಸನೆಗೆ ಸಂಬಂಧಿಸಿದಂತೆ ಸುರತ್ಕಲ್‌ ಸುತ್ತಮುತ್ತಲಿನ ಕಂಪೆನಿಗಳ ಸಭೆಯನ್ನು ಜು.20 ರಂದು ತುರ್ತಾಗಿ ಕರೆಯುವಂತೆ ಈ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪನಿರ್ದೇಶಕ ರಾಜಶೇಖರ ಪುರಾಣಿಕ್‌ ಅವರಿಗೆ ಸೂಚಿಸಿದ ಶಾಸಕ ಬಾವಾ. ನಾವು ಯಾವುದೇ ಕೈಗಾರಿಕೆಗಳ ವಿರುದ್ಧ ಇಲ್ಲ. ಆದರೆ ಪರಿಸರ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಅಂತಾರಾಷ್ಟ್ರೀಯ ಮಾನದಂಡವನ್ನು ಉಪಯೋಗಿಸಿ ನಿಯಂತ್ರಣ ಮಾಡುವುದು ಕಂಪೆನಿಗಳ ಹೊಣೆಗಾರಿಕೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ಕಠಿನ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next