Advertisement

ವ್ಯಾಪಿಸಿದೆ ನಕಲಿ ಬೀಜ ತಯಾರಿಕೆ ಜಾಲ

08:35 PM Jun 23, 2021 | Team Udayavani |

ವರದಿ: ಕೆ. ನಿಂಗಜ್ಜ

Advertisement

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕೈದು ದಶಕಗಳಿಂದ ಭತ್ತದ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ನಕಲಿ ಭತ್ತದ ಬೀಜ, ರಸಗೊಬ್ಬರ, ಕ್ರಿಮಿನಾಶಕ ತಯಾರಕರ ಸಂಖ್ಯೆ ಹೆಚ್ಚಾಗಿದೆ.

ರೈತರು ಬೆಳೆದ ಭತ್ತವನ್ನೇ ಬೀಜ ತಯಾರಿಕಾ ಘಟಕಕ್ಕೆ ಖರೀದಿಸಿ, ಬ್ರಾಂಡ್‌ ಚೀಲದಲ್ಲಿ ತುಂಬಿ ಅನಧಿಕೃತವಾಗಿ ಮಾರಾಟ ಮಾಡುವ ಜಾಲ ತಾಲೂಕಿನಲ್ಲಿದೆ. ಇದು ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳಿಗೆ ಗೊತ್ತಿದೆ. ಆದರೂ ಆಗಾಗ ಬೀಜ ತಯಾರಿಕಾ ಘಟಕದವರಿಗೆ ನ್ಯೂನ್ಯತೆಗಳ ಕುರಿತು ನೋಟಿಸ್‌ ನೀಡಿ ಕೈ ತೊಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಗಂಗಾವತಿ ತಾಲೂಕಿನ ಕೆಲ ಗ್ರಾಮಗಳಲ್ಲಿರುವ ಖಾಸಗಿ ಭತ್ತದ ಬೀಜ ತಯಾರಿಕಾ ಘಟಕಗಳು ಪ್ರತಿ ಹಂಗಾಮಿನಲ್ಲಿ 5000 ಕ್ವಿಂಟಲ್‌ ಭತ್ತದ ಬೀಜ ಮಾರಾಟ ಮಾಡುತ್ತವೆ. ಕೊಪ್ಪಳ, ರಾಯಚೂರು, ಬಳ್ಳಾರಿ, ಯಾದಗಿರಿ, ಕಲಬುರ್ಗಿ, ದಾವಣಗೆರೆ ಜಿಲ್ಲೆಗಳು ಸೇರಿ ಪಕ್ಕದ ಆಂಧ್ರಪ್ರದೇಶ, ತೆಲಂಗಾಣದ ಕೆಲ ಭಾಗಕ್ಕೆ ಮಾರಾಟ ಆಗುತ್ತವೆ. ಇಲ್ಲಿ ಕೃಷಿ ವಿವಿ ಹಾಗೂ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಮ್ಮುಖದಲ್ಲಿ ಬೀಜ ತಯಾರಾಗುತ್ತಿಲ್ಲ. ಸ್ಥಳೀಯವಾಗಿ ರೈತರು ಬೆಳೆದ ಭತ್ತವನ್ನು ಖರೀದಿಸಿ, ಸ್ವತ್ಛಗೊಳಿಸಿ ಚೀಲದಲ್ಲಿ ತುಂಬಿ ನೇರವಾಗಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ.

ಸರಕಾರಿ ಅಥವಾ ಖಾಸಗಿಯಾಗಿ ಭತ್ತದ ಬೀಜೋತ್ಪಾದನೆ ಮಾಡುವ ಸಂದರ್ಭದಲ್ಲಿ ಸರಕಾರ ಹಲವು ನಿಯಮಗಳನ್ನು ರೂಪಿಸಿದೆ. ಮೊದಲೇ ಬೀಜ ಮಾಡುವ ಭತ್ತದ ಗದ್ದೆಯ ಮಣ್ಣಿನ ಫಲವತ್ತತೆ ಗುರುತಿಸಬೇಕು. ಭತ್ತದ ಬೀಜ ಬೆಳೆಸುವ ರೈತರ ಹೆಸರು, ಪಹಣಿ ಸಂಖ್ಯೆಯನ್ನು ಮುಂಚಿತವಾಗಿ ಕೃಷಿ ಇಲಾಖೆಗೆ ರವಾನಿಸಬೇಕು. ಬೀಜ ಖರೀದಿಸುವ ರೈತರ ಹೆಸರು, ಅವರು ಭತ್ತವನ್ನು ಬೆಳೆದ ರೀತಿ, ಇಳುವರಿ ಕುರಿತು ಬೀಜೋತ್ಪಾದನಾ ಕೇಂದ್ರದವರು ಕೃಷಿ ಇಲಾಖೆ ಗಮನಕ್ಕೆ ತರಬೇಕು. ಬೀಜ ಖರೀದಿಸಿದ ರೈತರ ಗದ್ದೆಯಲ್ಲಿ ಕ್ಷೇತ್ರೋತ್ಸವ ಸೇರಿ ಬೀಜದ ಗುಣಮಟ್ಟ ಇಳುವರಿ ಕುರಿತು ಖಚಿತತೆಯನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಬೇಕು. ಹೀಗೆ ಭತ್ತದ ಬೀಜ ತಯಾರಿಸುವ ಘಟಕಗಳು ಹಲವು ನಿಯಮ ಪಾಲಿಸಬೇಕು.

Advertisement

ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬೀಜ ತಯಾರಿಕಾ ಘಟಕದವರು ಬಳಸಿಕೊಂಡು ಗುಣಮಟ್ಟವಲ್ಲದ ಭತ್ತದ ಬೀಜ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಸಾಣಾಪುರ, ಸಂಗಾಪುರ, ಢಣಾಪುರ, ರಾಂಪುರ ಸೇರಿ ತಾಲೂಕಿನ ವಿವಿಧೆಡೆ ನಕಲಿ ಭತ್ತದ ಬೀಜ ಸಸಿ ಮಡಿ ಹಾಕಿದ್ದರಿಂದ ಸಸಿ ಸರಿಯಾಗಿ ಬೆಳೆದಿಲ್ಲ. ಆದ್ದರಿಂದ ರೈತರು ಹೊಸದಾಗಿ ಭತ್ತದ ಸಸಿಮಡಿ ಹಾಕಿ ನಾಟಿ ಮಾಡಬೇಕಾಗಿದೆ. ರೈತರು ಸಹ ಕೃಷಿ ಇಲಾಖೆ, ಕೃಷಿ ವಿವಿ, ಕೃಷಿ ಸಂಶೋಧನಾ ಕೇಂದ್ರದವರು ಶಿಫಾರಸ್ಸು ಮಾಡಿದ ಬೀಜ ಖರೀದಿಸಬೇಕು. ತಪ್ಪದೇ ರಸೀದಿ ಪಡೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next