ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಸಹಿತ ಯಾರೇ ಆದರೂ ಸ್ಥಾನಮಾನ ಬಯಸದೆ ತಪಸ್ಸಿನಂತೆ ದುಡಿಯುತ್ತಿರುವ ಕಾರ್ಯಕರ್ತರ ಶ್ರಮವನ್ನು ಅವಮಾನಿಸುವಂತೆ, ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ತಪಸ್ಸಿನಿಂತೆ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರ ದಾರಿಗೆ ತೊಂದರೆ ಆಗುವಂಥ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ದಿಲ್ಲಿಯಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜ್ಯಾಧ್ಯಕ್ಷ ಎನ್ನುವ ಅಹಂಕಾರದಿಂದಾಗಲೀ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಎಂದಾಗಲೀ ಈ ಮಾತುಗಳನ್ನು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಒಂದು ದೊಡ್ಡ ಜವಾಬ್ದಾರಿ. ಈ ಹೊಣೆಗಾರಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಗೌರವಾನ್ವಿತ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೆಲ್ಲರೂ ಸೇರಿ ನನಗೆ ನೀಡಿದ್ದಾರೆ. ರಾಜ್ಯದಲ್ಲಿರುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡುವುದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ 28 ಕ್ಷೇತ್ರಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವುದು ನಮ್ಮೆಲ್ಲರ ಮುಂದಿರುವ ಸವಾಲು ಎಂದು ಅವರು ಹೇಳಿದರು.
ಈ ದೇಶವನ್ನು ಅಭಿವೃದ್ಧಿಪಥದಲ್ಲಿ ಮೋದಿ ತೆಗೆದುಕೊಂಡು ಹೋಗುತ್ತಿದ್ದಾರೆ. 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ತಪಸ್ಸಿನಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೇಳಿಕೆ, ನಡವಳಿಕೆಗಳು ಅದಕ್ಕೆ ಪೂರಕವಾಗಿರಬೇಕು ಎಂದರು.