ಕೊಪ್ಪಳ: ನಗರದಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ವಸೂಲಿ ಮಾಡುತ್ತಿರುವ ಜಕಾತಿ ಪದ್ಧತಿಯನ್ನು ಕೂಡಲೇ ರದ್ದು ಮಾಡಬೇಕೆಂದು ಒತ್ತಾಯಿಸಿ ಗವಿಸಿದ್ದೇಶ್ವರ ಕಿರುಕುಳ (ಬೀದಿ ಬದಿ) ವ್ಯಾಪಾರಿಗಳ ಹಿತ ರಕ್ಷಣಾ ಸಂಘ ನಗರದಲ್ಲಿ ಮಂಗಳವಾರ ಧರಣಿ ಆರಂಭಿಸಿದೆ. ನಗರಸಭೆಯು ಖಾಸಗಿ ವ್ಯಕ್ತಿಗೆ ಜಕಾತಿ ವಸೂಲಾತಿಗೆ ಗುತ್ತಿಗೆ ನೀಡಿದೆ. ಆದರೆ ಖಾಸಗಿ ವ್ಯಕ್ತಿಯು ಬೀದಿ ಬದಿ ವ್ಯಾಪಾರಸ್ಥರಿಂದ ಅನಗತ್ಯವಾಗಿ ಹೆಚ್ಚು ಜಕಾತಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಬೀದಿ ಬದಿ ವ್ಯಾಪಾರಿಗಳಿಂದ ಜಕಾತಿ ವಸೂಲಾತಿ ಮಾಡುವುದು ಕಾನೂನು ಬಾಹಿರವಾಗಿದೆ. ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ ಜಾರಿ ಮಾಡಿದೆ. ರಾಜ್ಯ ಸರ್ಕಾರವು ಅದನ್ನು 2016ರಲ್ಲಿಯೇ ಗೆಜೆಟ್ ಅ ಧಿಸೂಚನೆ ಹೊರಡಿಸಿದೆ. ಇದರಿಂದ ಪುರಸಭೆ ಕಾಯ್ದೆ 1964ರ ಕಲಂ 138 ಅನುರ್ಜಿತವಾಗಲಿದೆ. ಇಷ್ಟೆಲ್ಲ ಕಾಯ್ದೆ ಗೊತ್ತಿದ್ದರೂ ನಗರಸಭೆಯಿಂದ ಸುಮ್ಮನೆ ಜಕಾತಿ ವಸೂಲಾತಿ ಮಾಡಲಾಗುತ್ತಿದೆ ಎಂದು ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯು ಜಕಾತಿ ವಸೂಲಾತಿಗೆ ಕರೆದಿರುವ ಟೆಂಡರ್‌ನ್ನು ಕೂಡಲೇ ರದ್ದು ಪಡಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ನಿತ್ಯವೂ 10, 20, 30 ರೂ. ಶುಲ್ಕ ಪಡೆಯುವ ವ್ಯಕ್ತಿಗಳು ವ್ಯಾಪಾರಿಗಳ ಮೇಲೆ ಸುಖಾಸುಮ್ಮನೆ ದೌರ್ಜನ್ಯ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ-2017 ಪ್ರಕಾರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಪ್ರಮಾಣ ಪತ್ರ ವಿತರಣೆ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಟೌನ್ ವೆಂಡಿಂಗ್ ಕಮೀಟಿ ರಚನೆ ಮಾಡಿ ಶುಲ್ಕ ನಿಗದಿ ಪಡಿಸಬೇಕೆಂದು ಒತ್ತಾಯಿಸಿ ವ್ಯಾಪಾರಿಗಳು ನಗರಸಭೆ ಮುಂದೆ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.
ಮಿಶ್ರ ಪ್ರತಿಕ್ರಿಯೆ: ನಗರಸಭೆ ಜಕಾತಿ ವಸೂಲಾತಿ ವಿರುದ್ಧ ಸಿಡಿದೆದ್ದಿದ್ದ ಬೀದಿ ಬದಿ ವ್ಯಾಪಾರಿಗಳು ಮಂಗಳವಾರ ನಗರಸಭೆ ಮುಂದೆ ಧರಣಿ ನಡೆಸುವ ನಿರ್ಧರಿಸಿದ್ದರು. ಹಲವು ವ್ಯಾಪಾರಿಗಳು ಅಂಗಡಿ-ಮುಂಗಟ್ಟು ಬಂದ್ ಮಾಡಿ ಧರಣಿಯಲ್ಲಿ ಕುಳಿತಿದ್ದರೆ, ನಗರದ ವಿವಿಧ ಭಾಗಗಳಲ್ಲಿ ಕೆಲವೆಡೆ ಬೀದಿ ಬದಿ ವ್ಯಾಪಾರಿಗಳು ಸದ್ದಿಲ್ಲದೇ ವಹಿವಾಟು ನಡೆಸಿದ್ದರು.