ವಾಡಿ: ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಸದಸ್ಯರು ಉಳಿದ ಸದಸ್ಯರಿಗೆ ಪ್ರವಾಸದ ಭಾಗ್ಯ ಕಲ್ಪಿಸಿದ್ದಾರೆ. ಕೆಲ ತಂಡಗಳು ಗೋವಾ ಬೀಚ್‌ಗಳಲ್ಲಿ ಇದ್ದರೆ, ಇನ್ನು ಕೆಲ ತಂಡಗಳು ವಿಜಯಪುರದ ಗೋಲ್ ಗುಮ್ಮಟ, ಸೌದತ್ತಿ ಯಲ್ಲಮ್ಮ, ಶ್ರೀಶೈಲ ಮಲ್ಲಿಕಾರ್ಜುನ, ಗುಡ್ಡಾಪುರದ ದಾನಮ್ಮ ದೇವಿ ದರ್ಶನ ಪಡೆಯಲು ಸಾಲಗಟ್ಟಿ ನಿಂತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಹಾಗೂ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿವಿಧ ಗ್ರಾ.ಪಂ ವ್ಯಾಪ್ತಿಯ ಆಕಾಂಕ್ಷಿಗಳು ತಮ್ಮ ಬೆಂಬಲಿಗ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಒಂದೆಡೆ ಹಿಡಿದಿಡುವ ತಂತ್ರ ಹೆಣೆದಿದ್ದಾರೆ.
ಹಳಕರ್ಟಿ, ಲಾಡ್ಲಾಪುರ, ಇಂಗಳಗಿ, ರಾವೂರ, ಕಮರವಾಡಿ, ಸನ್ನತಿ, ಕಡಬೂರ, ಯಾಗಾಪುರ, ನಾಲವಾರ ಗ್ರಾ.ಪಂಗಳಿಗೆ ಫೆ.5 ಮತ್ತು 6ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆ ದಿನದಂದು ಸದಸ್ಯರು ಒಟ್ಟಿಗೆ ಗ್ರಾ.ಪಂ ಕಚೇರಿಗೆ ಆಗಮಿಸಬೇಕು. ಯಾರ ಒತ್ತಡಕ್ಕೂ ಮಣಿಯದೇ ತಮ್ಮದೇ ಅಭ್ಯರ್ಥಿ ಪರ ಮತ ಚಲಾಯಿಸಬೇಕು ಎನ್ನುವ ಕಾರಣಕ್ಕೆ ಸದಸ್ಯರು ಪ್ರವಾಸಕ್ಕೆ ಹೋಗಿದ್ದಾರೆ ಎನ್ನಲಾಗಿದೆ.
ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾ.ಪಂಗಳು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಗ್ರಾ.ಪಂ ಗದ್ದುಗೆಗಳು ಕೈ ಪಾಲಾಗುವುದನ್ನು ತಪ್ಪಿಸಲು ಬಿಜೆಪಿ ಮುಂದಾಗಿದೆ. ನಾವು ಕಾಂಗ್ರೆಸ್ ವಿರುದ್ಧ ಅಡ್ಡ ಮತದಾನ ಮಾಡುವುದಿಲ್ಲ ಎಂದು ಕೈ ಬೆಂಬಲಿತ ಸದಸ್ಯರು ಅಧ್ಯಕ್ಷ ಆಕಾಂಕ್ಷಿಗಳಿಗೆ ಭರವಸೆ ನೀಡಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸ ಕೈಗೊಳ್ಳಲಾಗಿದೆ.
ಗ್ರಾಪಂ ನೂತನ ಸದಸ್ಯರು ಗೋವಾ, ಹೈದ್ರಾಬಾದ್, ಪುಣೆ, ಮುಂಬೈ, ಮೈಸೂರು, ವಿಜಯಪುರ, ಹಾಸನ, ಮಂಗಳೂರು ಪ್ರವಾಸಿ ತಾಣಗಳಲ್ಲಿ ಬೀಡುಬಿಟ್ಟು ಮನರಂಜನೆಯಲ್ಲಿ ತೊಡಗಿದ್ದಾರೆ.
ವಾಡಿ ಮತ್ತು ನಾಲವಾರ ಸೇರಿದಂತೆ ಚಿತ್ತಾಪುರ ತಾಲೂಕಿನಲ್ಲಿ ಕೈ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ನಾಲವಾರ ಬಿಟ್ಟು ಉಳಿದೆಲ್ಲ ಗ್ರಾ.ಪಂ
ಆಡಳಿತ ಕಾಂಗ್ರೆಸ್ ಬೆಂಬಲಿತರ ವಶವಾಗಿದೆ. ಖರೀದಿ ರಾಜಕಾರಣವನ್ನೇ ಪಕ್ಷದ ಸಿದ್ಧಾಂತ ಮಾಡಿಕೊಂಡಿರುವ ಬಿಜೆಪಿಯವರು ಕೈ ಸದಸ್ಯರಿಗೆ ಕಿರುಕುಳ ನೀಡದಿರಲಿ ಎನ್ನುವ ಕಾರಣಕ್ಕೆ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಹೋಗಿದ್ದಾರೆ. ಚುನಾವಣೆ ದಿನ ಆಗಮಿಸುತ್ತಾರೆ.
ಸೈಯ್ಯದ್ ಮಹೆಮೂದ್ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
*ಮಡಿವಾಳಪ್ಪ ಹೇರೂರ