ಚೆನ್ನೈ: ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೊನೆಯ ದೃಶ್ಯದಲ್ಲಿ ಹಡಗು ಮುಳುಗುವುದು ಅದರ ಜೊತೆಗೆ ರಾಶಿ, ರಾಶಿ ಚಿನ್ನ ಸಮುದ್ರ ಗರ್ಭ ಸೇರುತ್ತಿರುವ ದೃಶ್ಯ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿದೆ. ಆದರೆ ಕೆಜಿಎಫ್ 2 ಚಿತ್ರ ಕಥೆಯಂತೆ ರಿಯಲ್ ಸ್ಟೋರಿ ತಮಿಳುನಾಡಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೋಟ್ಯಂತರ ರೂಪಾಯಿ ಚಿನ್ನಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದ ಪರಿಣಾಮ ಕೇಜಿಗಟ್ಟಲೆ ಚಿನ್ನವನ್ನು ಸಮುದ್ರಕ್ಕೆ ಎಸೆದು ಪರಾರಿಯಾಗುತ್ತಿದ್ದವರನ್ನು ಸೆರೆಹಿಡಿದು ಚಿನ್ನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಏನಿದು ಪ್ರಕರಣ:
ಶ್ರೀಲಂಕಾದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿ ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ)ಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ಮೇ 30ರಂದು ಇಂಡಿಯನ್ ಕೋಸ್ಟ್ ಗಾರ್ಡ್, ಕಸ್ಟಮ್ಸ್ ಡಿಪಾರ್ಟ್ ಮೆಂಟ್ ಮತ್ತು ಡಿಆರ್ ಐ ಜಂಟಿಯಾಗಿ ರಹಸ್ಯ ಕಾರ್ಯಾಚರಣೆಗೆ ಇಳಿದಿತ್ತು.
ಇಂಡೋ-ಶ್ರೀಲಂಕಾ ಇಂಟರ್ ನ್ಯಾಶನಲ್ ಮಾರ್ಟೈಮ್ ಬೌಂಡರಿ ಲೈನ್ ಸಮೀಪದ ಗಲ್ಫ್ ಆಫ್ ಮನ್ನಾರ್ ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗಳ ಮೇಲೆ ಅಧಿಕಾರಿಗಳು ಕಣ್ಗಾವಲಿಟ್ಟಿದ್ದರು. ಕೊನೆಗೂ ಮಂಡಪಂ ಬಂದರು ಪ್ರದೇಶದತ್ತ ಅನುಮಾನಾಸ್ಪದ ಬೋಟ್ ಬರುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಕೂಡಲೇ ಅಧಿಕಾರಿಗಳು ಸ್ಪೀಡ್ ಬೋಟ್ ಮೂಲಕ ಅವರನ್ನು ಹಿಂಬಾಲಿಸತೊಡಗಿದ್ದು, ಆಗ ಶಂಕಿತ ಸ್ಮಗ್ಲರ್ಸ್ ಗಳು ಚಿನ್ನವನ್ನು ಸಮುದ್ರಕ್ಕೆ ಎಸೆದು ಪರಾರಿಯಾಗಲು ಯತ್ನಿಸಿದ್ದರು. ಆದರೆ ಬೋಟ್ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು.
ಬೋಟ್ ನಲ್ಲಿದ್ದ 21 ಕೇಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದು, ಆರೋಪಿಗಳ ವಿಚಾರಣೆ ನಡೆಸಿದಾಗ ಉಳಿದ ಚಿನ್ನವನ್ನು ಸಮುದ್ರಕ್ಕೆ ಎಸೆದಿರುವುದಾಗಿ ತಿಳಿಸಿದ್ದರು. ಜೂನ್ 1ರಂದು ಇಂಡಿಯನ್ ಕೋಸ್ಟ್ ಗಾರ್ಡ್ ನ ಮುಳುಗು ತಜ್ಞರು 12 ಕೇಜಿ ಚಿನ್ನವನ್ನು ಪತ್ತೆ ಹಚ್ಚಿದ್ದರು. ಒಟ್ಟು 33 ಕೇಜಿ ಚಿನ್ನದ ಮೌಲ್ಯ 20 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.