ಆಫೀಸಿನ ಕೆಲಸ ಮುಗಿಸಿಕೊಂಡು ಮನೆಯ ಹತ್ತಿರದ ಸ್ಟಾಪಿನಲ್ಲಿ ಬಸ್ಸಿಳಿದ ಅನಂತು, ಸ್ವಲ್ಪ ದೂರ ನಡೆದಿದ್ದನಷ್ಟೇ, ನಡೆಯುತ್ತಿದ್ದ ಹಾದಿಯಲ್ಲೇ ರಸ್ತೆ ಬದಿಯ ಮಣ್ಣಿನ ಮಧ್ಯೆ ಅನಾಥವಾಗಿ ಬಿದ್ದಿದ್ದ ಬೀಗದ ಕೀಯೊಂದು ಕಾಣಿಸಿಬಿಟ್ಟಿತು. ಕೀ ಕಳೆದುಕೊಂಡವರು ಯಾರೋ, ಏನು ಕಥೆಯೋ? ಈ ಊರಿನ ಅವಸರದ ಬದುಕಿನಲ್ಲಿ ಜನರು ಏನೇನೋ ಕಳೆದುಕೊಳ್ಳುವ ಮಧ್ಯೆ ತಮ್ಮ ಬದುಕಿನ ಕೀಯನ್ನೇ ಕಳೆದುಕೊಂಡು, ಕೊನೆಗೆ ನಕಲಿ ಕೀ ಮಾಡಿಸಲಾಗದ ಅಸಹಾಯಕತೆಯಲ್ಲಿ ನರಳುತ್ತಾ ಇನ್ಯಾರದ್ದೋ ನೆರಳಿನಲ್ಲೇ ತಮ್ಮದಲ್ಲದ ಬದುಕನ್ನೇ ಬದುಕೆದ್ದು ಹೋಗುವುದಿಲ್ಲವಾ; ನನ್ನಂತೆಯೇ ಎಂದುಕೊಂಡ ಅನಂತುಗೆ ಒಂದು ಕ್ಷಣ ರಸ್ತೆಪಕ್ಕ ಅನಾಥವಾಗಿ ಬಿದ್ದಿದ್ದ ಕೀಯನ್ನು ಎತ್ತಿಕೊಳ್ಳೋಣ ಅನ್ನಿಸಿತು. ಹೀಗನ್ನಿಸಿದ ಮರುಕ್ಷಣವೇ, ನಾನು ಇದನ್ನು ತೆಗೆದುಕೊಂಡು ಮಾಡುವುದಾದರೂ ಏನು ಎನ್ನುವ ಪ್ರಶ್ನೆಯೊಂದು ಹುಟ್ಟಿ ಉತ್ತರ ಸಿಕ್ಕದೇ ಅದನ್ನು ತೆಗೆದುಕೊಳ್ಳಲಿಕ್ಕೆಂದು ಬಗ್ಗಿದವನು ಬೆನ್ನು ನೆಟ್ಟಗೆ ಮಾಡಿ ನಿಂತುಕೊಂಡ.
ಈ ಊರಿನ ಹಾದಿಬೀದಿಯಲ್ಲಿ ನನ್ನನ್ನೂ ಸೇರಿ ಅದೆಷ್ಟು ಜನ ತಮಗೆ ಬೇಡವಾದದ್ದನ್ನೆಲ್ಲ ಹೀಗೆ ಬಿಸಾಕಿ ಹೋಗಿರುತ್ತಾರೋ?! ಅದನ್ನೆಲ್ಲ ಆಫೀಸಿಗೆ ಹೋಗಿ ಬರುವ ದಾರಿಯಲ್ಲಿ ಈ ಕೀಯಂತೆಯೇ ಪ್ರತೀದಿನ ನೋಡುವ ನಾನು ಎತ್ತಿಕೊಳ್ಳುತ್ತಾ ಹೋದರೆ ಇನ್ನೊಬ್ಬ ಜರಿಯಂಗಡಿಯವನಾಗುತ್ತೇನಷ್ಟೇ ಎಂದುಕೊಂಡವನು ಒಂದು ಕ್ಷಣ ರೂಮಿನ ತುಂಬಾ ಇಂತಹ ಬೇಡವಾದ ಸಾಮಾನುಗಳನ್ನೆಲ್ಲ ತುಂಬಿಕೊಂಡು, ಅದರ ನಡುವೆ ತನಗೇ ಇರಲಿಕ್ಕೆ ಜಾಗವೇ ಇಲ್ಲದೆ ಒದ್ದಾಡುತ್ತಾ, ಕೊನೆಗೆ ಬೇರೆ ದಾರಿ ಕಾಣದೇ ಆ ಗುಜರಿ ಸಾಮಾನುಗಳನ್ನೆಲ್ಲ ಒಮ್ಮೆಗೇ ತೂಕಕ್ಕೆ ಹಾಕಿ ಕೈಗೆ ಬಂದ ಚಿಲ್ಲರೆ ಕಾಸು ಹಿಡಿದುಕೊಂಡು ರೂಮಿಗೆ ಬಂದರೆ, ಖಾಲಿಯಾದ ರೂಮನ್ನು ನೋಡುತ್ತಿದ್ದಂತೆ ತನ್ನವರನ್ನೆಲ್ಲ ಅದ್ಯಾವುದೋ ಆಕ್ಸಿಡೆಂಟಿನಲ್ಲಿ ಕಳೆದುಕೊಂಡಂತಹ ಅನಾಥಭಾವಕ್ಕೆ ಸಿಲುಕಿ, ಇಲ್ಲ ಇದು ನನ್ನ ರೂಮು ಅಲ್ಲವೇ ಅಲ್ಲ, ನಾನಿಲ್ಲಿ ಬದುಕಲಿಕ್ಕೆ ಸಾಧ್ಯವೇ ಇಲ್ಲ ಎಂದು ಅಲ್ಲಿಂದ ಓಡಿ… ಕಲ್ಪಿಸಿಕೊಂಡ ಅನಂತುಗೆ ಅಳಬೇಕೋ, ನಗಬೇಕೋ ಗೊತ್ತಾಗದೇ ಸರ್ಕಲ್ ಮಧ್ಯದ ಪ್ರತಿಮೆಯೊಂದರಂತೆ ನಿರ್ಭಾವುಕನಾಗಿ ಒಂದು ಕ್ಷಣ ನಿಂತುಕೊಂಡ.
ಈ ಕೀ ಬಿದ್ದಲ್ಲೇ ಬಿದ್ದಿರಲಿ. ಒಂದೊಮ್ಮೆ ಕಳೆದುಕೊಂಡವರ್ಯಾರೋ ಹುಡುಕಿಕೊಂಡು ಬಂದು, ಅವರಿಗೇ ಸಿಕ್ಕರೆ ಅವರಿಗೆಷ್ಟು ಖುಷಿಯಾಗಬಹುದು ಎಂದುಕೊಳ್ಳುತ್ತಲೇ ಕೀ ಮೇಲಿದ್ದ ಮಣ್ಣನ್ನೆಲ್ಲ ಕಾಲಿನಿಂದಲೇ ಬದಿಗೆ ಸರಿಸಿ ಒಂದೆರಡು ಹೆಜ್ಜೆ ಹಾಕಿದ್ದವನ ತಲೆಯಲ್ಲಿ ಚಳಕ್ಕೆಂದು ಕನಸೊಂದು ಕಣ್ಣು ಬಿಟ್ಟಿತು.
ಈ ರಸ್ತೆಯಲ್ಲೇ ಹೋಗಿಬರುವ ಚೆಂದದ ಹುಡುಗಿಯೇನಾದರೂ ಈ ಕೀ ಕಳೆದುಕೊಂಡಿದ್ದು, ಆಕೆ ಈಗ ಕೀ ಹುಡುಕುತ್ತಾ ಇದೇ ದಾರಿಯಲ್ಲಿ ಬಂದು, ಕೀ ನನ್ನ ಬಳಿಯೇ ಇದ್ದರೆ, ಅವಳು ಹುಡುಕುವುದನ್ನು ಗಮನಿಸಿ ನಾನೇ ಅವಳ ಕೈಗೆ ಇದನ್ನು ಕೊಟ್ಟರೆ… ಅವಳು ಖುಷಿಯಾಗುವುದು, ನಿಮ್ಮಿಂದ ತುಂಬಾ ಹೆಲ್ಪ್ ಆಯ್ತು ಎಂದು ಅವಳು ನಕ್ಕು, ಆ ನಗುವಿನಿಂದಲೇ ಪರಿಚಯವಾಗಿ, ಮೊಬೈಲ್ ನಂಬರುಗಳೂ ವಿನಿಮಯವಾಗಿ… ಲವ್ವೆನ್ನುವುದು ಎಲ್ಲಿ, ಯಾವುದರಿಂದ, ಯಾಕಾಗಿ ಹುಟ್ಟುತ್ತದೆ ಎಂದು ಯಾರು ತಾನೇ ಬರೆದಿಟ್ಟಿ¨ªಾರೆ ಎಂದುಕೊಂಡ ಅನಂತು ಮತ್ತೆ ತಡಮಾಡಲಿಲ್ಲ. ಒಂದೆರಡು ಹೆಜ್ಜೆ ಮುಂದೆ ಹೋದವನು ಹಿಂದೆ ಬಂದು ಅನಾಥವಾಗಿ ಬಿದ್ದಿದ್ದ ಕೀಗೆ ತಾನು ಬಾಳು ಕೊಡುತ್ತಿದ್ದೇನೆ ಅಥವಾ ಈ ಕೀ ಮೂಲಕವೇ ತನ್ನ ಬಾಳಿನ ಬೆಳಕನ್ನು ಪಡೆದುಕೊಳ್ಳುತ್ತಿದ್ದೇನೆ ಎನ್ನುವ ಭಾವದಲ್ಲಿ ಬಗ್ಗಿ ಅದನ್ನು ಎತ್ತಿಕೊಂಡು ಕೈಯಿಂದ ಮಣ್ಣನ್ನೆಲ್ಲ ಒರೆಸಿ, ಬಾಯಿಂದ ಊದಿ ಧೂಳನ್ನೆಲ್ಲ ಹಾರಿಸಿ, ಯಾವುದಕ್ಕೂ ಜೋಪಾನವಾಗಿರಲಿ ಎಂದು ತನ್ನ ಪ್ಯಾಂಟಿನ ಜೇಬಿಗೆ ಹಾಕಿಕೊಂಡ.
ಕಳೆದುಕೊಂಡಿರಬಹುದಾದ ಹುಡುಗಿಗೆ ಕೊಡಬೇಕೆಂದು ತಾನು ಈ ಕೀ ತೆಗೆದುಕೊಂಡಿದ್ದೇನೋ ಸರಿ, ಆದರೆ ಕೀ ಕಳೆದುಕೊಂಡಿರಬಹುದಾದ ಆ ಹುಡುಗಿಗೆ ನನಗೇ ಕೀ ಸಿಕ್ಕಿದೆ ಎಂದು ಗೊತ್ತಾಗುವುದಾದರೂ ಹೇಗೆ? ಹೌದಲ್ಲವಾ, ನಾನು ಇದನ್ನು ಯೋಚಿಸಿಯೇ ಇರಲಿಲ್ಲವಲ್ಲ ಎಂದುಕೊಂಡವನು, ರಸ್ತೆಯ ಪಕ್ಕದಲ್ಲೇ ಒಂದು ಸ್ವಲ್ಪ ಹೊತ್ತು ಕಾಯೋಣ ಎಂದುಕೊಂಡವನು ಅಲ್ಲೇ ನೆರಳಿನಲ್ಲಿ ನಿಂತುಕೊಂಡು ಕಾಯಲಾರಂಭಿಸಿದ. ಎಷ್ಟು ಹೊತ್ತು ಕಾಯುವುದು? ಊರಿನಲ್ಲಿ ಅಪ್ಪ-ಅಮ್ಮ ನನ್ನ ಮದುವೆಗಾಗಿ ಹುಡುಗಿ ನೋಡುತ್ತಾ, ನನ್ನ ಬಾಳಿಗೆ ಜೊತೆಯಾಗಬಹುದಾದ ಹುಡುಗಿಗೆ ಕಾಯುತ್ತಾ ಹತ್ತಿರತ್ತಿರ ಎರಡು ವರ್ಷವಾಗುತ್ತಾ ಬಂತು. ಅಂತಹದ್ದರಲ್ಲಿ ಈ ಕೀ ಮೂಲಕ ನನ್ನ ಬದುಕಿನ ಬೀಗವನ್ನು ತೆರೆಯಬಹುದಾದ ಹುಡುಗಿ ಸಿಕ್ಕಬಹುದಾದರೆ ಸಂಜೆಗತ್ತಲಾಗುವವರೆಗಾದರೂ ಕಾಯೋಣ ಎಂದುಕೊಂಡ ಅನಂತು, ಹೀಗೇನಾದರೂ ಹುಡುಗಿ ಸಿಕ್ಕರೆ ಅಪ್ಪ-ಅಮ್ಮನ ಹುಡುಗಿ ಹುಡುಕುವ ಕಷ್ಟಕ್ಕೂ, ತನ್ನ ಒಂಟಿ ಬಾಳಿನ ಪಯಣಕ್ಕೂ ಒಂದು ಕೊನೆ ಸಿಕ್ಕಂತಾಗುತ್ತದೆ ಎಂದುಕೊಂಡು ಒಮ್ಮೆ ರಸ್ತೆಯ ಆ ಕಡೆ, ಇನ್ನೊಮ್ಮೆ ಈ ಕಡೆ ನೋಡುತ್ತಾ ಅಲ್ಲೇ ನಿಂತುಕೊಂಡ.
ಉಹೂಂ, ಕೀ ಕಳೆದುಕೊಂಡ ಹುಡುಗಿಯೂ ಕಾಣಿಸಲಿಲ್ಲ, ಮುದುಕಿಯೂ ಬರಲಿಲ್ಲ. ಇನ್ನೆಷ್ಟು ಹೊತ್ತು ಕಾಯುವುದು ಎಂದುಕೊಂಡ ಅನಂತುಗೆ ತಾನು ಕೀಯನ್ನು ತನ್ನ ಜೊತೆಗೆ ತೆಗೆದುಕೊಂಡು ಹೋದರೆ, ಕಳೆದುಕೊಂಡವರು ಇತ್ತ ಕಡೆಯೇ ಹುಡುಕುತ್ತಾ ಬಂದರೆ ಅವರಿಗೆ ಕೀ ಸಿಕ್ಕುವುದು ಹೇಗೆ ಎಂದೆನ್ನಿಸಿ, ಕೀ ಎಲ್ಲಿ ಬಿದ್ದಿತ್ತೋ ಅಲ್ಲಿಯೇ ಅದನ್ನು ಮಣ್ಣಿನಡಿ ಸಿಕ್ಕದ ಗಟ್ಟಿ ನೆಲವಿರುವ ಜಾಗದ ಮೇಲೆ ಮೆಲ್ಲಗೆ ಇಟ್ಟು ರೂಮಿನತ್ತ ಹೊರಟ.
ಮೊದಲನೇ ಮಹಡಿಯಲ್ಲಿರುವ ರೂಮಿಗೆ ಮೆಟ್ಟಿಲು ಹತ್ತಿ ಬಂದು ಬಾಗಿಲೆದುರು ನಿಂತು, ಯಾವಾಗಲೂ ತಾನು ಕೀ ಇಟ್ಟುಕೊಳ್ಳುವ ಪ್ಯಾಂಟಿನ ಎಡಭಾಗದ ಜೇಬಿಗೆ ಕೈ ಹಾಕಿದರೆ ಕೀ ಎಲ್ಲಿದೆ? ಅಯ್ಯೋ ನನ್ನ ಕೀ ಎಲ್ಲಿ ಹೋಯಿತು, ಮರೆತು ಎಲ್ಲಿ ಬಿಟ್ಟೆ ಎಂದು ಒಂದು ಕ್ಷಣ ಆತಂಕವಾದರೂ, ಕೆಲವೊಮ್ಮೆ ತಾನು ತನ್ನ ಬ್ಯಾಕ್‌ಪ್ಯಾಕಿನಲ್ಲಿ ಇಟ್ಟುಕೊಳ್ಳುತ್ತೇನಲ್ಲ ಎನ್ನುವುದು ನೆನಪಾಗಿ ಅವಸರದಲ್ಲಿ ಬೆನ್ನಿಗೆ ನೇತು ಹಾಕಿಕೊಂಡಿದ್ದ ಬ್ಯಾಗ್ ತೆಗೆದು, ಕೈ ಹಾಕಿ ಬ್ಯಾಗಿನೊಳಗಿದ್ದ ಎಲ್ಲವನ್ನೂ ಹೊರಗೆಸೆದು, ಅದನ್ನು ತಿರುವು ಮುರುವು ಮಾಡಿ ಕೊಡವಿದರೂ ಕೀ ಕಾಣಿಸದೇ ಇ¨ªಾಗ ದಾರಿಯಲ್ಲಿ ಯಾರೋ ಕಳೆದುಕೊಂಡಿದ್ದಾರೆ ಎಂದುಕೊಂಡಿದ್ದ ಕೀ ತನ್ನ ಕೀಯಂತೆಯೇ ಇತ್ತಲ್ಲವಾ ಎನ್ನುವುದು ನೆನಪಾಗಿ, ಹೌದು, ಅದು ನನ್ನದೇ ಕೀ, ಬೆಳಿಗ್ಗೆ ಆಫೀಸಿಗೆ ಹೋಗುವ ಅವಸರದಲ್ಲಿ ದಾರಿಯಲ್ಲೆಲ್ಲೂ ಬೀಳಿಸಿಕೊಂಡಿರಬೇಕು, ಅದರ ಮೇಲೆ ಯಾರದ್ದೋ ಬೈಕೋ, ಕಾರೋ ಹೋಗಿ ಕೀ ಬಂಚ್ ಒಡೆದು ಹೋಗಿ ಬರೀ ಕೀ ಉಳಿದುಕೊಂಡು ತನ್ನ ಕೀ ತನಗೇ ಗುರುತು ಸಿಕ್ಕದೇ ಹೋಯಿತಲ್ಲ ಎಂದು ತನ್ನನ್ನು ತಾನೇ ಬೈಯ್ದುಕೊಳ್ಳುತ್ತಾ ಅವಸರದಲ್ಲಿ ಮೆಟ್ಟಿಲಿಳಿದು ತಾನು ಯಾರಿಗೇ ಆದರೂ ಸ್ಪಷ್ಟವಾಗಿ ಕಾಣಿಸುವಂತೆ ಕೀ ಇಟ್ಟಿದ್ದ ಜಾಗದಲ್ಲಿ ಬಂದು ನೋಡಿದರೆ ಕೀ ಇರಲಿಲ್ಲ!
ತನ್ನಂತೆಯೇ ಆ ಕೀಯಲ್ಲಿ ಇನ್ಯಾರು ಏನೇನು ಹುಡುಕುವವರಿದ್ದರೋ, ಏನೇನು ಕಂಡುಕೊಳ್ಳುವವರಿದ್ದರೋ ಎಂದುಕೊಳ್ಳುತ್ತಾ, ಯಾರಾದರೂ ನನ್ನಂತೆಯೇ ಸಿಕ್ಕ ಕೀ ಹಿಡಿದುಕೊಂಡು ಕೀ ಕಳೆದುಕೊಂಡವರಿಗಾಗಿ ಕಾಯುತ್ತಾ ನಿಂತಿರಬಹುದೇನೋ ಎಂದು ಆಚೀಚೆ ನೋಡಿದರೆ, ಇಡೀ ನಗರವನ್ನೇ ಅವುಚಿಕೊಳ್ಳುತ್ತಿದ್ದ ಕತ್ತಲಿನಲ್ಲಿ ಏನೂ ಕಾಣಿಸದೆ ಅನಂತು ಅಲ್ಲೇ ಕುಸಿದು ಕುಳಿತ.
ಕೆ. ಗಣೇಶ ಕೋಡೂರು