Advertisement
ಮೂರು ಭಾಗಗಳನ್ನು ಒಳಗೊಂಡ ಇಂಗ್ಲಿಷ್ ಕಾದಂಬರಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಉಣಬಡಿಸಿದ ಕೀರ್ತಿ ಜೀವಜಗತ್ತಿನ ವಿಸ್ಮಯಗಳನ್ನು ಓದುಗರ ಮುಂದೆ ತೆರೆದಿಟ್ಟದ್ದು ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆ ಅವರಿಗೆ ಸಲ್ಲುತ್ತದೆ.
Related Articles
Advertisement
ಯಾರೋ ಮಾಡಿದ ತಪ್ಪಿಗೆ ಸೆರೆಮನೆ ಸೇರಿದ ಹೆನ್ರಿಗೆ ಚಿಟ್ಟೆಯಂತೆ ಸ್ವತ್ಛಂದವಾಗಿ ಹಾರುವ ಆಸೆ. ಆ ದೈತ್ಯಚಿಟ್ಟೆ ಮುಂದಕ್ಕೆ ತನ್ನ ರೆಕ್ಕೆಯನ್ನು ಕಟ್ಟಿದವರಿಗೆ ಚಳ್ಳೆಹಣ್ಣನ್ನು ತಿನ್ನಿಸಿ ಹೇಗೆ ತಪ್ಪಿಸಿಕೊಂಡು ಆಗಾಗ ಅಧಿಕಾರಿಗಳಿಗೆ ತಲೆನೋವಾಗುತ್ತಿದ್ದ ಎಂಬುದು ಈ ಕಾದಂಬರಿಯ ಮುಖ್ಯ ಅಂಶ.
ಪಲಾಯನವೆಂಬುದು ಪ್ಯಾಪಿಯ ಮೂಲಮಂತ್ರ. ಅಪಾಯಕಾರಿ ಖೈದಿ ಎಂದು ಆಗಾಗ ಪ್ಯಾಪಿಯನ್ನು ಬೇರೆ ಬೇರೆ ಜೈಲುಗಳಿಗೆ ರವಾನಿಸುತ್ತಿದ್ದರೂ ಅವನ ಮಂತ್ರ ಬದಲಾಗಲೇ ಇಲ್ಲ. ಕನಸಲ್ಲೂ, ನನಸಲ್ಲೂ ಮನಸಲ್ಲೂ ಸೆರೆಮನೆ ವಾಸದಲ್ಲಿ ದೊರೆತ ಸ್ನೇಹಿತರೆಲ್ಲರಲ್ಲೂ ಪಲಾಯನ ಪಲಾಯನ ಪಲಾಯನ ಎಂಬ ವಿಷಯದ ಕುರಿತಾದ ಚರ್ಚೆಗಳ ಹೊರತಾಗಿ ಅನ್ಯವಿಷಯಗಳಿಗೆ ಅವಕಾಶಗಳಿದ್ದದ್ದು ತೀರಾ ವಿರಳ.
ಪ್ಯಾಪಿಯಂತೂ ಹುಚ್ಚು ಸಾಹಸಿ ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗುವ ತವಕ ಆದರೆ ಅವನ ಮಿತ್ರರ ಪೈಕಿ ಒಬ್ಬರೊಬ್ಬರದ್ದು ಒಂದೊಂದು ರೀತಿಯ ಮನಸ್ಥಿತಿ. ಒಂದು ದಿನ ಪಲಾಯನಕ್ಕೆ ನಾನೂ ಸಿದ್ಧನೆಂದು ಎದೆ ಎತ್ತಿ ನುಡಿದವನು ಮರುದಿನ ತನ್ನ ಪಥವನ್ನು ಬದಲಿಸಿರುತ್ತಿದ್ದ. ಯಾರು ಏನೇ ಹೇಳಲಿ ಪ್ಯಾಪಿಯಂತೂ ಛಲದಲ್ಲಿ ಕೌರವನನ್ನೂ ಮೀರಿಸುವಂತಹ ವ್ಯಕ್ತಿ. ಒಮ್ಮೆ ಮನಸ್ಸು ಮಾಡಿದ ಎಂದರೆ ಯಾರು ಬಂದರೂ ಅವನನ್ನು ತಡೆವವರಿಲ್ಲ.
ಸೆರೆಮನೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ಜತೆಯಲ್ಲಿ ಬಂದ ಸ್ನೇಹಿತರೊಡನೆ ಇನ್ನು ಕೆಲವೊಮ್ಮೆ ಏಕಾಂಗಿಯಾಗಿ. ಎಷ್ಟೇ ಪಲಾಯನವನ್ನು ಮಾಡಿದರೂ ಪ್ಯಾಪಿ ಮಹಾನ್ ನತದೃಷ್ಟ ಸಿಕ್ಕಿಬೀಳುತ್ತಿದ್ದ. ಅವನ ಸಾಹಸವನ್ನು ನೋಡಿ ಇಡೀ ಸರಕಾರವೇ ನಡುಗಿಹೋಗುತ್ತಿತ್ತು.
ಅವನನ್ನು ಅತ್ಯಂತ ಜೋಪಾನ ಮಾಡುತ್ತಿದ್ದರು. ಅವನ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದರು. ಆಗಿನ ಜೈಲುಗಳಲ್ಲಿದ್ದ ಕೆಲವೊಂದು ಕ್ರೂರ ಶಿಕ್ಷೆಗಳು, ಅಲ್ಲಿನ ಸನ್ನಿವೇಷಗಳನ್ನು ಓದುತ್ತಿದ್ದರೆ ಎಂತಹವನಿಗೂ ಹೊಟ್ಟೆ ತೊಳಸುವುದಂತೂ ಖಂಡಿತ. ಕೆಲವೊಮ್ಮೆ ಓದುತ್ತಿರುವ ನಮಗೇ ಅಧಿಕಾರಿಗಳನ್ನು ಹಿಡಿದು ಚೆನ್ನಾಗಿ ಎರಡು ಬಾರಿಸುವ ಎಂಬಂತೆ ಕಾಣುತ್ತದೆ ಅಷ್ಟರ ಮಟ್ಟಿಗೆ ಕಣ್ಣಿನಲ್ಲಿ ರಕ್ತವಿರದ ರಕ್ತಪಿಪಾಸುಗಳು!
ಜೈಲಿನಲ್ಲಿ ಕಳೆದ ಸಮಯ ಪ್ಯಾಪಿಯ ಜೀವನದ ಒಂದು ಭಾಗವಾದರೆ ಪಲಾಯನದ ವಿವಿಧ ಹಂತಗಳಲ್ಲಿ ಅವನು ವಿಹರಿಸಿದ ಅನೇಕ ಘಳಿಗೆಗಳು ಇನ್ನೊಂದು ಭಾಗ. ತನ್ನ ಜೈಲುವಾಸ ಮತ್ತು ಪಲಾಯನದುದ್ದಕ್ಕೂ ನೋವು- ನಲಿವು, ಕಷ್ಟ -ಸುಖ ,ಉಚ್ಛ -ನೀಚ, ಪ್ರೀತಿ, ಪ್ರೇಮ, ನಂಬಿಕೆ, ಹೀಗೆ ಎಲ್ಲ ರೀತಿಯ ಜೀವನ ಘಟ್ಟಗಳ ಮೇಲೆ ದೀರ್ಘವಾದ ಪಯಣವನ್ನು ಮಾಡುತ್ತಾ ಯಾರಿಗೂ ಹೆದರದೆ ಎಂತಹ ಸಂದಿಗ್ಧ ಪರಿಸ್ಥಿತಿಗೂ ಜಗ್ಗದೆ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಮುಂದುವರೆಯುತ್ತಲೇ ಇರುತ್ತಾನೆ.
ಕೆಲವೊಂದು ಘಟನೆಗಳು ಕಣ್ಣಿನಲ್ಲಿ ರಕ್ತ ಒಸರುವಂತೆ ಮಾಡಿದರೆ, ಕೆಲವೊಮ್ಮೆ ಪ್ಯಾಪಿಯ ಸ್ಥಿತಿ ಮತ್ತು ಕಾದಂಬರಿಯ ಇತರ ಪಾತ್ರಗಳ ಸ್ಥಿತಿಯನ್ನು ಗ್ರಹಿಸಿ ನಯನಗಳು ತೇವಗೊಳ್ಳುತ್ತವೆ.
ಅನೇಕ ವಿಚಾರಗಳನ್ನು ನಿಮ್ಮಿಂತ ನಾನು ಮುಚ್ಚಿಟ್ಟಿರುವೆ ಆದರೆ ಅದರೊಳಗಿರುವುದು ಕೇವಲ ಸದುದ್ದೇಶವಷ್ಟೇ. ಸುಳಿವುಗಳನ್ನು ನಾನು ನೀಡುತ್ತಾ ಹೋದರೆ ಅದು ರಸಭಂಗವೇ ಸರಿ ರಸವೇ ಹೋದ ಮೇಲೆ ಕಾದಂಬರಿಯಲ್ಲಿ ಮತ್ತೇನಿದೆ ಸ್ವಾದ ಅಲ್ಲವೇ?
ಕಾದಂಬರಿಯ ಒಂದನೇ ಭಾಗದ ಕೊನೆಯಲ್ಲಿ ಪ್ಯಾಪಿ ರೋಯಲ್ ದ್ವೀಪದಲ್ಲಿ ಬಂಧಿಯಾಗಿರುತ್ತಾನೆ, ಮುಂದೇನಾಗಬಹುದು, ಪ್ಯಾಪಿ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವನಂತೂ ಅಲ್ಲವೇ ಅಲ್ಲ, ಮುಂದಿನ ಪಲಾಯನ ಯಾವ ರೀತಿ? ಹೇಗೆ? ಎಂಬೆಲ್ಲಾ ಕೌತುಕತೆಗಳು ನನ್ನ ತಲೆಯಲ್ಲಿ ಹೊರಳಾಡುತ್ತಾ ಇದೆ. ಇದಕ್ಕೆಲ್ಲವೂ ಉತ್ತರ ಸಿಗಬೇಕಾದರೆ ದಾರಿ ಒಂದೇ ಪ್ಯಾಪಿಲಾನ್ ಭಾಗ ಎರಡು ಮತ್ತು ಮೂರನ್ನು ಓದುವುದಷ್ಟೇ!
ಶುಭಕಾರ್ಯಗಳಿಗೆ ತಡಮಾಡುವುದು ಸರಿಯಲ್ಲವಂತೆ. ಅದರಂತೆಯೇ ಅತೀ ಶೀಘ್ರದಲ್ಲಿಯೇ ಉಳಿದ ಭಾಗಗಳನ್ನು ಓದುತ್ತೇನೆ ಎಂಬ ನಂಬಿಕೆ ಇದೆ . ತಡ ಯಾಕೆ ಪ್ಯಾಪಿಲಾನ್ ಮೂರು ಭಾಗಗಳೂ ಕೂಡ ನಿಮಗಾಗಿ ನಿಮ್ಮ ಸಮೀಪದ ಪುಸ್ತಕ ಮಳಿಗೆಗಳಲ್ಲಿ ಕಾಯುತ್ತಾ ಕುಳಿತಿವೆ. ಆನ್‌ಲೈನ್ ನಲ್ಲಿ ಕೂಡ ಲಭ್ಯವಿದೆ ತರಿಸಿಕೊಳ್ಳಿ ಓದಿ.
-ವಿಕಾಸ್ ರಾಜ್ ಪೆರುವಾಯಿ
ವಿವಿ ಮಂಗಳೂರು