Advertisement

ಓದು ಬಿಟ್ಟು ತಿರುಗಾಟ ನಡೆಸಿದ ಹುಡುಗನಿಂದ ಸ್ಥಾಪನೆಯಾಯಿತು ಕೋಟಿಗಳಿಸುವ “ಓಯೋ ರೂಮ್ಸ್”..!

02:30 PM Sep 04, 2020 | Suhan S |

ಸಾಧನೆಗೆ ವಯಸ್ಸು ಮುಖ್ಯವಲ್ಲ. ಇದು ಸಾಧಿಸಿ ಮೇಲೆ ಬಂದ ಸಾಧಕರ ಅನುಭವದ ಮಾತು. ಇಂದು ನಾವು ಯಾವುದಾದ್ದರೂ ಒಂದು ಕಾರಣಕ್ಕೆ, ಕೆಲಸಕ್ಕೆ  ಹೊರ ದೇಶಕ್ಕೋ ಅಥವಾ ಹೊರ ರಾಜ್ಯಕ್ಕೆ ಹೋಗಿ ಇದ್ದು ಬರುವುದಾದ್ದರೆ ಹಿಂದಿನ ಕಾಲದ ಹಾಗೆ ಅಜ್ಜಿ ಮನೆಯೋ, ಸಂಬಂಧಿಕರ ಮನೆಯಲ್ಲೋ ಇರಬೇಕಾದ ಪರಿಸ್ಥಿತಿ ಇಲ್ಲ. ಒಂದೊಳ್ಳೆ ಹೊಟೇಲ್ ನಲ್ಲಿ ದಿನ ಕಳೆದ್ರೆ ಸಾಕು ಎನ್ನುತ್ತೇವೆ. ಒಳ್ಳೆ ಹೊಟೇಲ್ ಅಂದ್ರೆ ನಮ್ಮ ಪಾಲಿಗೆ ಕಡಿಮೆ ಹಣ ಜಾಸ್ತಿ ಗುಣಮಟ್ಟದ್ದು ಆಗಿರಬೇಕು ಆದ್ರೆ ಭಾರತದಲ್ಲಿ ಅಂಥದ್ದು ಸಿಗುವುದು ಅನುಮಾನ. ಕಿಸೆಯಲ್ಲಿರುವ ಹಣಕ್ಕೆ ತಕ್ಕ ಗುಣಮಟ್ಟ ದೊರೆಯುವುದು ಈ ಕಾಲದಲ್ಲಿ ತುಸು ಕಷ್ಟನೇ. ಇಂಥ ಕಷ್ಟವನ್ನು ನೀಗಿಸಿ ಬರೀ ಹದಿನೇಳನೇ ವರ್ಷದಲ್ಲಿ ಎಲ್ಲಾ ಒಮ್ಮೆ ತಿರುಗಿ ನೋಡುವಂತೆ ಮಾಡಿದವರು ಓಯೋ ರೂಮ್ಸ್ ನ ಸ್ಥಾಪಕ ರಿತೇಶ್ ಅಗರ್ವಾಲ್.

Advertisement

ರಿತೀಶ್ ಅರ್ಗವಾಲ್. ಹುಟ್ಟಿದ್ದು 1993 ರ ನವೆಂಬರ್ 16 ರಂದು.ಒಡಿಶಾದ ಬಿಸ್ಸಮ್ ಕಟಕ್ ನಲ್ಲಿ. ನಕ್ಸಲ್ ಪೀಡಿತ ಪ್ರದೇಶದ  ನೆರಳಿನಲ್ಲಿ ಬಾಲ್ಯ ಕಳೆದ ರಿತೇಶ್ ಅವರದ್ದು ಅತ್ತ ಹಾಯಾಗಿ ಕೂತು ತಿನ್ನುವ ಕುಟುಂಬವೂ ಅಲ್ಲ,ಇತ್ತ ದುಡಿಯದೇ ಇರಲಾರದ ಕುಟುಂಬವೂ ಅಲ್ಲ. ಅವರದು ಮದ್ಯಮ ವರ್ಗದ ಕುಟುಂಬ. ರಿತೇಶ್ ಬಾಲ್ಯದಿಂದಲೇ ಚುರುಕು ಬುದ್ದಿಯ ಹುಡುಗ. ತನ್ನ 8 ನೇ ವಯಸ್ಸಿನಲ್ಲೇ ಕಂಪ್ಯೂಟರ್ ನ ವಿಧ ವಿಧದ ಕೋಡಿಂಗ್ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಂಥ ಚುರುಕು ಅವರಲ್ಲಿ ಅಚ್ಚಾಗಿತ್ತು. ಗೂಗಲ್ ನಲ್ಲಿ ಸದಾ ಹೊಸತನ್ನು ಶೋಧಿಸುವ ಅವರ ಗುಣ ದಿನ ಕಳೆದಂತೆ ಹೆಚ್ಚುಗುತ್ತಾ ಹೋಯಿತು. ಹೈಸ್ಕೂಲ್ ಶಿಕ್ಷಣವನ್ನು ತಮ್ಮ ಊರಿನಲ್ಲೇ ಪೊರೈಸುವ ಅವರು ತನ್ನ 13 ನೇ ವಯಸ್ಸಿನಲ್ಲಿ ಸಿಮ್ ಕಾರ್ಡ್ ಗಳನ್ನು ಮಾರಿ ತನ್ನ ಖರ್ಚಿನ ದುಡಿಮೆಯನ್ನು ಗಳಿಸಲು ಆರಂಭಿಸುತ್ತಾರೆ.

ಬದುಕು ಕಲಿಸಿದ ಪಯಣ : ರಿತೇಶ್ ಕೋಡಿಂಗ್ ಕುರಿತಾಗಿ ಹೆಚ್ಚಿನ ಅಧ್ಯಯನ ಮಾಡಲು ಹಾಗೂ ಐಐಟಿ ಪರೀಕ್ಷೆಯ ತಯಾರಿಗೆ ರಾಜಸ್ಥಾನದ ಕೋಟಾಕ್ಕೆ ಪಯಣ ಬೆಳೆಸುತ್ತಾರೆ.ಆದರೆ ಬದುಕಿನ ದಿಕ್ಕು ಅವರನ್ನು ಬೇರೆಡೆ ಹೆಜ್ಜೆಗಳನ್ನಿಡಲು ನಡೆಸುತ್ತದೆ. ರಿತೇಶ್ ಅವರದ್ದು ನಿಂತಲೇ ನಿಲ್ಲದ ಕಾಲು. ಅಂದರೆ ಅವರೊಬ್ಬ ಪಯಣಿಗ. ತಿರುಗುವ ಹವ್ಯಾಸ ಅವರನ್ನು ಇನ್ನಷ್ಟು ಉತ್ಸಾಹಿಯನ್ನಾಗಿ ಮಾಡುತ್ತದೆ. ಹೀಗಾಗಿ ಅವರು ತಿರುಗಾಡುವ ಕಡೆಯೆಲ್ಲಾ ಯಾವುದಾದರೂ ಹೊಟೇಲ್ ನಲ್ಲಿ ದಿನ ಕಳೆಯುವುದು ಅನಿವಾರ್ಯವಾಗುತ್ತದೆ. ರಿತೀಶ್ ಓದಿನ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ತನ್ನ ಸಣ್ಣ ವಯಸ್ಸಿನಲ್ಲಿ ಅವರು ‘ ‘Indian Engineering Colleges: A Complete Encyclopaedia of Top 100 Engineering Colleges’ ಎನ್ನುವ ಪುಸ್ತಕವೊಂದನ್ನು ಬರೆಯುತ್ತಾರೆ. ಈ ಪುಸ್ತಕ ಬಹಳ ಬೇಗ ಜನಪ್ರಿಯವಾಗಿ ಮಾರಾಟವಾಗುತ್ತದೆ. ಮುಂಬೈನ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ನಡೆದ ಶಿಬಿರದಲ್ಲಿ ರಿತೀಶ್ 240 ಮಕ್ಕಳಲ್ಲಿ ಆಯ್ಕೆಯಾಗುತ್ತಾರೆ. ನಂತರ ದಿಲ್ಲಿಗೆ ಇಂಡಿಯಾನ್ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಫೈನಾನ್ಸ್ ಕಾಲೇಜಿಗೆ ದಾಖಲಾಗುತ್ತಾರೆ. ಅಲ್ಲಿಂದ ರಜೆಗೆಂದು ಹೋದ ಬಳಿಕ ಮರಳಿ ಕಾಲೇಜು ನತ್ತ‌ ಮುಖ‌ ಮಾಡಲೇ ಇಲ್ಲ.

ಹೀಗೆ ಹೊಟೇಲ್ ನಲ್ಲಿ ದಿನ ಕಳೆಯುತ್ತಾ ಹೋದ ಹಾಗೆ ಅವರ ಕೈಯಲ್ಲಿ ಇರುವ ಹಣ ಖರ್ಚಾಗುತ್ತದೆ. ವಿವಿಧ ಸಮ್ಮೇಳನದಲ್ಲಿ ಭಾಗವಹಿಸುವ ಅವರು ಹೊಟೇಲ್ ವೊಂದರಲ್ಲಿ ಇರಬೇಕಾದ ಸಂದರ್ಭದಲ್ಲಿ ನಾನಾ  ಸಮಸ್ಯೆಯನ್ನು  ಎದುರಿಸುತ್ತಾರೆ. ಕೆಲ ಹೊಟೇಲ್ ನಲ್ಲಿ ಉತ್ತಮ ಸೌಲಭ್ಯ ಇಲ್ಲದೆ ಇದ್ರು ಹೆಚ್ಚು ಹಣದ ಬೇಡಿಕೆಯಿಂದ ಅವರಲ್ಲಿ ತಾನು ಒಳ್ಳೆಯ ಗುಣಮಟ್ಟ‌ ನೀಡುವ ಹೊಟೇಲ್ ರೂಮ್ ಗಳನ್ನು ಸ್ಥಾಪಿಸುವ ಒಂದು ಯೋಜನೆ ಆರಂಭಿಸಬೇಕೆನ್ನುವ ದೂರದ ಯೋಚನೆಯೊಂದು ಹೊಳೆಯುತ್ತದೆ. ಇದು ಕ್ಷಣದ ಯೋಚನೆ ಮಾತ್ರವಲ್ಲದೆ ಅದನ್ನು ರಿತೀಶ್ ಗಂಭಿರವಾಗಿಯೇ ಪರಿಗಿಣಿಸಿ ಪ್ರಯೋಗ ಹಾಗೂ ಪ್ರಯತ್ನಕ್ಕೆ ಇಳಿಯುತ್ತಾರೆ.

ಸಾಧನೆಯ ಮೊದಲ ಮೆಟ್ಟಿಲು : ಏನಾದ್ರು ಮಾಡಬೇಕೆನ್ನುವ ಉದ್ದೇಶದಿಂದ ಅವರಲ್ಲಿ ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ರೂಮ್ ಗಳನ್ನು ನೀಡುವ ಕೆಲವೊಂದು ಹೊಟೇಲ್ ನಲ್ಲಿ ಈ ಬಗ್ಗೆ ಕೇಳುತ್ತಾರೆ. ತಾನು ಆ ಹೊಟೇಲ್ ನಲ್ಲಿ ಇದ್ದು ಅಲ್ಲಿಯ ಎಲ್ಲಾ ವ್ಯವಸ್ಥೆಯನ್ನು ಪರಿಶೀಲಿಸುತ್ತಾರೆ. 2013 ರಲ್ಲಿ ‘ಒರಿಯಲ್ ಸ್ಟೇಸ್ ‘ ( ORAVEL STAYS) ಎನ್ನುವ ಸ್ಟಾರ್ಟ್ ಆಪ್ ನ್ನು ಪ್ರಾರಂಭಿಸುತ್ತಾರೆ. ಇದು ಕಡಿಮೆ ಬೆಲೆಯಲ್ಲಿ ಉತ್ತಮ ಹೊಟೇಲ್ ರೂಮ್ ಗಳನ್ನು ನೀಡುವ ಸಂಸ್ಥೆ ಆಗಿದ್ದು, ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತದೆ. ವೆಂಚರ್ ನರ್ಸರಿಯಿಂದ 30 ಲಕ್ಷ ರೂಪಾಯಿ ಸಿಕ್ಕ ಮೇಲೆ ರಿತೀಶ್ ಅವರ ಈ ಯೋಜನೆ ಒಂದು ‌ಹಂತಕ್ಕೆ ಗ್ರಾಹಕರಿಗೆ ತೃಪ್ತಿಯನ್ನು ‌ನೀಡುತ್ತದೆ. ಆದರೆ ಎಷ್ಟೇ ಜನಪ್ರಿಯ ಆಗಲಿ ಅಲ್ಲಿ ಒಂದು ಕೊರತೆ ಇದ್ದೇ  ಇರುತ್ತದೆ. ಹಾಗೆ ಇಲ್ಲಿಯೂ ಆಯಿತು. ಉತ್ತಮ ಕೋಣೆಯನ್ನು ನೀಡುವ ಒರಿಯಲ್ ಸ್ಟೇಸ್,ಉತ್ತಮ ಗುಣಮಟ್ಟದ ಸೌಲಭ್ಯದ ವ್ಯವಸ್ಥೆ ಕಲ್ಪಿಸಲು ಹಿಂದೆ ಬೀಳುತ್ತದೆ. ಇದ್ದ ಹಣವೆಲ್ಲಾ ಖಾಲಿಯಾಗುತ್ತಾ ರಿತೀಶ್ ಕಿಸೆ ಬರಿದಾಗುತ್ತದೆ. ಇದೇ ಕಾರಣದಿಂದ ಪ್ರಾರಂಭವಾದ ಆರು ತಿಂಗಳ ಬಳಿಕ ಸಂಸ್ಥೆ ಕುಗ್ಗಿ ಹೋಗುತ್ತದೆ. ರಿತೀಶ್ ನಿರೀಕ್ಷೆಯಿಂದ ಆರಂಭಿಸಿದ ಸಂಸ್ಥೆ ಅರಳುವ ಮುನ್ನ ಬಾಡಿ ಹೋಗುತ್ತದೆ.

Advertisement

ಪುಟ್ಟಿದೆದ್ದ ಉತ್ಸಾಹ.. ಮುನ್ನುಗಿದ್ದ ಸಾಧಕ : ತನ್ನ ಮೊದಲ ಪ್ರಯತ್ನ ವ್ಯರ್ಥವಾಯಿತು ಎಂದು ರಿತೀಶ್ ಸುಮ್ಮನೆ ಕೂರಲಿಲ್ಲ.ಯಾಕೆ ವ್ಯರ್ಥವಾಯಿತು ಎನ್ನುವುದರ ಬಗ್ಗೆ ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿ, ಸಂಶೋಧನೆ ಮಾಡಿ, ಕೊರತೆಗಳನ್ನು ನೀಗಿಸುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದ ‘ Airbnb ‘ ಸಂಸ್ಥೆಯ ಮಾದರಿಯಿಂದ ಪ್ರೇರಣೆಗೊಂಡು 2013 ರಲ್ಲಿ ರಿತೀಶ್ ‘ಓಯೋ ರೂಮ್ಸ್’ ನ ಹೆಸರಿನಲ್ಲಿ ‌ಮತ್ತೆ ಹಳೆಯ ತನ್ನ ಕನಸಿಗೆ ಹೊಸ ಹಮ್ಮಸ್ಸನ್ನು ಕಟ್ಟಿ ಬೆಳೆಸಲು ಪ್ರಾರಂಭಿಸುತ್ತಾರೆ.

ಅದೃಷ್ಟ ಅಂದರೆ ರಿತೀಶ್ ಅವರಿಗೆ “ಪೇಪಾಲ್” (PAY PAL) ಕಂಪೆನಿಯ  ಸ್ಥಾಪಕ ಪೀಟರ್ ಥಿಯೆಲ್ ಅವರ ಸಂಸ್ಥೆಯಿಂದ  ಒಂದು ಲಕ್ಷ ರೂಪಾಯಿಯ ಫೆಲೋಶಿಪ್  ದೊರೆಯುತ್ತದೆ. ಇದು ತಮ್ಮ ಸೃಜನಶೀಲತೆಯಿಂದ ಪ್ರಭಾವಗೊಳಿಸಿದ ಇಪ್ಪತ್ತು ವರ್ಷದ ಯುವ ಜನತೆಗೆ ನೀಡುವ ಗೌರವವಾಗಿದ್ದು. ಇದನ್ನು ‌ಪಡೆದ ಮೊದಲ ಭಾರತೀಯ ನಿವಾಸಿ ರಿತೀಶ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಾರೆ. ಒಂದು ಲಕ್ಷ ರೂಪಾಯಿ ರಿತೀಶ್ ಅವರ ಕನಸಿಗೆ ಚಿನ್ನದ ರೆಕ್ಕೆಯಾಗುತ್ತದೆ. ಓಯೋ ರೂಮ್ಸ್ ಗಾಗಿ ರಿತೀಶ್ ಒಂದಿಷ್ಟು ಹೊಟೇಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿ ತಮ್ಮ ಯೋಜನೆಯ ಹಾಗೆ ಹೊಟೇಲ್ ನ ಕೋಣೆಯನ್ನು ರೂಪಾಂತರಗೊಳಿಸಿ ಅಲ್ಲಿಯ ವಿಶೇಷ, ವಿಶಿಷ್ಠವಾದ ವ್ಯವಸ್ಥೆ ಹಾಗೂ ಕೈಗೆಟುಕುವ ದರವನ್ನು ತಮ್ಮ ವೈಬ್ ಸೈಟ್ ಹಾಗೂ ಆ್ಯಪ್ ಗಳಲ್ಲಿ ದಾಖಲಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿ ಆಗುತ್ತದೆ.

 

ಓಯೋ.. ( On Your Own) ಗಳಿಸಿದ ಜನಪ್ರಿಯತೆ :  ದಿನ ಕಳೆದಂತೆ ಜನ ಓಯೋ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಯಾವ ರಾಜ್ಯದ,ಯಾವ ಸ್ಥಳದಲ್ಲೂ ಓಯೋ ರೂಮ್ಸ್ ಎನ್ನುವ ಬೋರ್ಡ್‌ ಹೊಟೇಲ್ ನ ಹೊರ ಭಾಗದಲ್ಲಿ ದೊಡ್ಡದಾಗಿ ಕಾಣುತ್ತದೆ. ಅನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಸುಲಭವಾಗಿ ಬುಕ್ಕ್ ಮಾಡಬಹುದಾದ ಓಯೋ ರೂಮ್ಸ್ ರಾಜ್ಯ ದೇಶ ಮಾತ್ರವಲ್ಲದೆ ವಿದೇಶದ ನೆಲದಲ್ಲೂ ತಮ್ಮ ಪ್ರಾಬಲ್ಯದ ಹೆಜ್ಜೆಯನ್ನು ಸ್ಥಾಪಿಸಿದೆ. ಚೀನಾ,ಮಲೇಷ್ಯಾ, ಜಪಾನ್, ಇಂಗ್ಲೆಂಡ್,ನೇಪಾಳ, ಯುನೈಟೆಡ್ ಅರಬ್,ಸೌದಿ ಅರೇಬಿಯಾ,ಫಿಲಿಫೈನ್ಸ್, ಇಂಡೋನೇಷ್ಯಾ ದಂಥ ದೇಶದಲ್ಲೂ ಓಯೋ ರೂಮ್ಸ್ ಸೇವೆಯಿದೆ.

ಗುರಗಾಂವ್ ನ ಒಂದು ಹೊಟೇಲ್ ನಿಂದ ಪ್ರಾರಂಭವಾದ ಓಯೋ ರೂಮ್ಸ್ ಇಂದು 800 ಅಧಿಕ ನಗರದಲ್ಲಿ, 23 ಸಾವಿರಕ್ಕೂ ಅಧಿಕ ಹೊಟೇಲ್ ನಲ್ಲಿ, 850,000. ಕ್ಕೂ ಅಧಿಕ ರೂಮ್ ಗಳು ಹಾಗೂ  ಜಗತ್ತಿನಾದ್ಯಂತ 46,000 ತಾಣದಲ್ಲಿ ಓಯೋ ರಜಾ ದಿನಗಳನ್ನು ಕಳೆಯುವ ವಿಶೇಷ ರೂಮ್ಸ್ ಇದೆ. ಕಾಲೇಜು ಬಿಟ್ಟ ಹುಡುಗ ರಿತೀಶ್ ಜಗತ್ತಿನ ಎರಡನೇ ಅತಿ ಕಿರಿಯ ಸಿಇಒ ಆಗಿದ್ದಾರೆ. ಅವರಿಂದ ಸ್ಥಾಪಿತ ಆದ ಓಯೋ ಇಂದು ಕೋಟ್ಯಾಂತರ ಲಾಭಾಂಶವನ್ನು ಗಳಿಸುತ್ತಿದೆ.

 

– ಸುಹಾನ್ ಶೇಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next