ಇನ್ನೇನು ಕೆಲವೇ ನಿಮಿಷಗಳು ಕಳೆದಿದ್ದರೆ ಅಂದಿನ ಪಂದ್ಯ ಮುಗಿದು ಹೋಗುತ್ತಿತ್ತು. ಬಹುಶಃ ಫ್ರಾನ್ಸ್ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುತ್ತಿತ್ತು. ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಪ್ರೇಕ್ಷಕರ ಎದುರು ಫ್ರಾನ್ಸ್ ಕಂಡ ಶ್ರೇಷ್ಠ ಕಾಲ್ಚೆಂಡು ಆಟಗಾರ, ತಂಡದ ನಾಯಕ ಕೊನೆಯದಾಗಿ ಅಭಿಮಾನಿಗಳ ಎದುರು ಹೆಜ್ಜೆ ಹಾಕಿರುತ್ತಿದ್ದ. ಗರ್ವದಿಂದ ತನ್ನ ದೇಶದ ಬಾವುಟ ಹೊದ್ದುಕೊಂಡು ಮೈದಾನದ ತುಂಬಾ ಓಡಾಡಿ ಸಂಭ್ರಮಿಸುತ್ತಿದ್ದ. ವಿಶ್ವಕಪ್ ಗೆದ್ದ ಸಂತಸದೊಂದಿಗೆ ತನ್ನ ವೃತ್ತಿಜೀವನವನ್ನು ಸಾರ್ಥಕಗೊಳಿಸಿದ ಸಂತೃಪ್ತಿಯಿಂದ ಡ್ರೆಸ್ಸಿಂಗ್ ರೂಮ್ ಕಡೆಗೆ ಹೆಜ್ಜೆ ಹಾಕುತ್ತಿರುತ್ತಿದ್ದ. ಆದರೆ ಹೆಚ್ಚುವರಿ ಸಮಯದಲ್ಲಿ ನಡೆದ ಆ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಫ್ರಾನ್ಸ್ ವಿಶ್ವಕಪ್ ಕೈ ಚೆಲ್ಲಿತ್ತು.
ಹೌದು, ಇದು ಜಿನೆದಿನ್ ಜಿದಾನೆ ಎಂಬ ದುರಂತ ನಾಯಕನ ಕಥೆ.
1972ರಲ್ಲಿ ದಕ್ಷಿಣ ಫ್ರಾನ್ಸ್ ನ ಮರ್ಸೆಲ್ಲೆ ಎಂಬಲ್ಲಿ ಜನಿಸಿದ ಜಿನೆದಿನ್ ಯಾಜಿದ್ ಜಿದಾನೆ ಐವರು ಸಹೋದರರಲ್ಲಿ ಕಿರಿಯವರರು. ಅಪ್ಪ ಕಿರಾಣಿ ಅಂಗಡಿಯೊಂದರ ರಾತ್ರಿ ವಾಚಮನ್. ಕ್ರೈಮ್ ಸಂಖ್ಯೆ ಹೆಚ್ಚಾಗಿದ್ದ ನಗರದಲ್ಲಿ ಬೆಳೆದ ಹುಡುಗನಿಗೆ ಫುಟ್ಬಾಲ್ ಹುಚ್ಚು ಹಿಡಿಸಿದ್ದು ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ. 1986ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಮರಡೋನಾ ಮ್ಯಾಜಿಕ್ ಕಂಡ ಜಿದಾನೆ ಅವರಂತಾಗುವ ಕನಸು ಕಂಡಿದ್ದ. ಹೀಗೆ ಫುಟ್ಬಾಲ್ ಆಟಗಾರನಾಗಿ ಬೆಳೆದ ಜಿದಾನೆ ಫ್ರಾನ್ಸ್ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿ ಬೆಳೆದಿದ್ದು ಒಂದು ಇತಿಹಾಸ.
ನ್ಯಾಶನಲ್ ಹೀರೋ
ಅಲ್ಗೇರಿಯಾ ಮತ್ತು ಫ್ರಾನ್ಸ್ ದೇಶಗಳ ನಾಗರಿಕತ್ವ ಹೊಂದಿದ್ದ ಜಿದಾನೆ ಫ್ರಾನ್ಸ್ ತಂಡಕ್ಕಾಗಿ ಆಡಿದ. 1998 ರಲ್ಲಿ ನಡೆದ ವಿಶ್ವಕಪ್ ಜಿದಾನೆಗೆ ಮೊದಲ ವಿಶ್ವ ಕೂಟ. ಫ್ರಾನ್ಸ್ ನಲ್ಲೇ ನಡೆದ ಕೂಟವದು. ಮೊದಲ ಪಂದ್ಯದಲ್ಲಿ ಸಹ ಆಟಗಾರ ಗೋಲಿಗೆ ಜಿದಾನೆ ಅಸಿಸ್ಟ್ ಮಾಡಿದ್ದ. ಫ್ರಾನ್ಸ್ ಆ ವರ್ಷದ ಕೂಟದಲ್ಲಿ ಅದ್ಭುತವಾಗಿ ಆಡಿತ್ತು. ಗ್ರೂಪ್ ಹಂತದ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಗೆದ್ದ ಫ್ರಾನ್ಸ್ ಮೊದಲ ಕಪ್ ಗೆಲ್ಲುವ ಆಸೆಯಿಂದ ತವರು ಅಭಿಮಾನಿಗಳೆದುರು ಫೈನಲ್ ಪ್ರವೇಶಿಸಿತ್ತು.
ಸಂಪೂರ್ಣ ಕೂಟದಲ್ಲಿ ತಂಡಕ್ಕಾಗಿ ದುಡಿದಿದ್ದ ಜಿದಾನೆ ಹಲವು ಗೋಲುಗಳಿಗೆ ಸಹಾಯ ಮಾಡದ್ದ. ಆದರೆ ಜಿದಾನೆ ಹೆಸರಿಗೆ ಒಂದೇ ಒಂದು ಗೋಲು ಬಂದಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಬದಲಾಗಿತ್ತು. ಫ್ರಾನ್ಸ್ ತವರಾದರೂ ಫೈನಲ್ ನಲ್ಲಿ ಫೇವರೆಟ್ ಆಗಿದ್ದ ಬ್ರೆಜಿಲ್ ಲೆಕ್ಕಾಚಾರವನ್ನು ಜಿದಾನೆ ಮತ್ತು ಫ್ರಾನ್ಸ್ ತಲೆ ಕೆಳಗು ಮಾಡಿದರು. ಮೊದಲಾರ್ಧದಲ್ಲೇ ಹೆಡ್ಡರ್ ಮೂಲಕ ಜಿದಾನೆ ಎರಡು ಗೋಲು ಗಳಿಸಿದ್ದ. ಮತ್ತೊಂದು ಅರ್ಧದಲ್ಲಿ ಇಮ್ಯಾನುಯೆಲ್ ಪೆಟಿಟ್ ಗೋಲು ಗಳಿಸಿದರು. ಬ್ರೆಜಿಲ್ ಒಂದೇ ಒಂದು ಗೋಲು ಗಳಿಸಲಾಗಲಿಲ್ಲ. ಪಂದ್ಯವನ್ನು ಫ್ರಾನ್ಸ್ 3-0 ಅಂತರದಿಂದ ಗೆದ್ದುಕೊಂಡಿತು. ವಿಶ್ವಕಪ್ ಫೈನಲ್ ಪಂದ್ಯ ಮುಗಿಯುವ ವೇಳೆಗೆ ಜಿನೆದಿನ್ ಜಿದಾನೆ ಫ್ರಾನ್ಸ್ ನ ನ್ಯಾಶನಲ್ ಹೀರೊ ಆಗಿದ್ದ.
2002 ವಿಶ್ವಕಪ್ ನ ನಿರಾಶಾದಾಯಕ ಪ್ರದರ್ಶನದ ಬಳಿಕ ಫ್ರಾನ್ಸ್ 2004ರ ಯೂರೋ ಕಪ್ ನಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಗ್ರೀಸ್ ವಿರುದ್ಧ ಸೋತು ಕೂಟದಿಂದಲೇ ಹೊರಬಿತ್ತು. ಇದರಿಂದ ಬೇಸತ್ತ ಜಿದಾನೆ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ರಾಜೀನಾಮೆ ನೀಡಿ ಬಿಟ್ಟಿದ್ದ.
ಜಿದಾನೆ ಸೇರಿ ಫ್ರಾನ್ಸ್ ದಿಗ್ಗಜರು ರಾಜೀನಾಮೆ ನೀಡಿದ್ದರು. ಹೀಗಾಗಿ 2006ರ ವಿಶ್ವಕಪ್ ಗೆ ಅರ್ಹತೆ ಗಳಿಸುವುದೇ ಕಷ್ಟವಾಯಿತು. ಇದನ್ನು ಕಂಡ ಕೋಚ್ ರೇಮಂಡ್ ಡೊಮೆನಿಕ್ ಅವರು ವಿದಾಯ ಹಿಂಪಡೆಯುವಂತೆ ಜಿದಾನೆಗೆ ಕೋರಿಕೊಂಡರು. ಹೀಗೆ ಜಿದಾನೆ ಮತ್ತೆ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಮರಳಿದರು. ಫ್ರಾನ್ಸ್ ತಂಡದ ನಾಯಕತ್ವವನ್ನೂ ವಹಿಸಿದರು.
ಕೋಪ ಎಲ್ಲವನ್ನೂ ಕೆಡಿಸಿತು
ಫುಟ್ಬಾಲ್ ವಿಶ್ವದ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ ಫ್ರಾನ್ಸ್ 2006 ವಿಶ್ವಕಪ್ ನಲ್ಲಿ ಒಂದೊಂದೇ ಮೆಟ್ಟಲು ಮೇಲೆರಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಬ್ರಿಜಿಲ್ ತಂಡವನ್ನು, ಸೆಮಿ ಫೈನಲ್ ನಲ್ಲಿ ಪೋರ್ಚುಗಲ್ ನನ್ನು ಸೋಲಿಸಿದ ಫ್ರಾನ್ಸ್ ಫೈನಲ್ ಪ್ರವೇಶ ಮಾಡಿತ್ತು. ಎದುರಾಳಿ ಇಟಲಿ.
ಕೂಟದಲ್ಲಿ ಅದುವರೆಗೆ ಎರಡು ಗೋಲು ಗಳಿಸಿದ್ದ ಜಿದಾನೆ ಅಂದು ಅಂತಿಮ ಪಂದ್ಯವಾಡಲು ಸಜ್ಜಾಗಿದ್ದರು. ಅದಾಗಲೇ ತನ್ನ ಕ್ಲಬ್ ರಿಯಲ್ ಮ್ಯಾಡ್ರಿಡ್ ಕೂಡಾ ತೊರೆದಿದ್ದ ಜಿದಾನೆ ಅಂದು ಕೊನೆಯ ಬಾರಿಗೆ ಕಾಲ್ಚೆಂಡು ಆಡಲು ಮೈದಾನಕ್ಕೆ ಇಳಿದಿದ್ದರು.
ಬರ್ಲಿನ್ ನಲ್ಲಿ ಪಂದ್ಯ ಆರಂಭವಾಗಿತ್ತು. ಇಟಲಿ ಮತ್ತು ಫ್ರಾನ್ಸ್ ದೇಶಗಳ ಆಟಗಾರರ ಕಾದಾಟ ಆರಂಭವಾಗಿತ್ತು. ಪಂದ್ಯ ಆರಂಭವಾಗಿ ಕೇವಲ ಏಳು ನಿಮಿಷವಾಗಿತ್ತು ಅಷ್ಟೇ. ಒಲಿದು ಬಂದ ಪೆನಾಲ್ಟಿ ಅವಕಾಶವನ್ನು ಪಡೆದ ಜಿದಾನೆ ಪನೆಂಕಾ ಸ್ಟೈಲ್ ನಲ್ಲಿ ಗೋಲು ಬಾರಿಸಿ ಬಿಟ್ಟರು. ಈ ಮೂಲಕ ಎರಡು ವಿಶ್ವಕಪ್ ಫೈನಲ್ ನಲ್ಲಿ ಗೋಲು ಗಳಿಸಿದ ಕೇವಲ ನಾಲ್ಕನೇ ಆಟಗಾರ ಎಂಬ ಸಾಧನೆ ಮಾಡಿದ್ದರು. ಫ್ರಾನ್ಸ್ 1-0 ಅಂತರದ ಮುನ್ನಡೆ. ಮೊದಲಾರ್ಧದಲ್ಲೇ ಹೆಡ್ಡರ್ ಮೂಲಕ ಮತ್ತೊಂದು ಗೋಲು ಯತ್ನ ಮಾಡಿದ್ದರು. ಆದರೆ ಇಟಲಿ ಗೋಲು ಕೀಪರ್ ಅದ್ಭುತವಾಗಿ ತಡೆದಿದ್ದರು. 19ನೇ ನಿಮಿಷದಲ್ಲಿ ಇಟಲಿಯ ಮಾರ್ಕೋ ಮೆಟರಾಜಿ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದ್ದರು. 1-1 ಸಮಬಲದೊಂದಿಗೆ ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಯಿತು. ಇಲ್ಲಿಯೇ ನಡೆದಿತ್ತು ಆ ದುರಂತ.
ತಮ್ಮ ತಂಡಗಳಿಗೆ ಅಂದು ತಲಾ ಒಂದೊಂದು ಗೋಲು ಗಳಿಸಿದ್ದ ಜಿದಾನೆ ಮತ್ತು ಮೆಟರಾಜಿ ಅಂದು ಮದಗಜಗಳಂತೆ ಹೋರಾಡಿದ್ದರು. ಕೆಲವೊಮ್ಮೆ ಎದುರು ಬದುರಾಗಿದ್ದರು. ಅದು ಪಂದ್ಯದ 110ನೇ ಸಮಯ. 1-1 ಗೋಲುಗಳು. ಸಮಬಲದ ಹೋರಾಟ. ಇನ್ನೇನು ಪೆನಾಲ್ಟಿ ಶೂಟೌಟ್ ಕಡೆಗೆ ಪಂದ್ಯ ಸಾಗಬೇಕು ಎಂದಾಗ ಜಿದಾನೆ ಮತ್ತು ಮೆಟರಾಜಿ ನಡುವೆ ಜಗಳ ಆರಂಭವಾಗಿತ್ತು.
ಪಂದ್ಯದುದ್ದಕ್ಕೂ ಜಿದಾನೆ ಹಿಂದೆ ಬಿದ್ದಿದ್ದ ಮೆಟರಾಜಿ 110ನೇ ನಿಮಿಷದಲ್ಲಿ ಜಿದಾನೆ ಓಡುದನ್ನು ತಡೆಯುವ ಪ್ರಯತ್ನ ಮಾಡಿದ್ದ. ಜಿದಾನೆ ಬೆನ್ನ ಹಿಂದೆ ಬಂದು ಆತನನ್ನು ಹಿಡಿಯುವ ಪ್ರಯತ್ನ ಮಾಡಿದ್ದ. ಇದರಿಂದ ಕೋಪಗೊಂಡ ಜಿದಾನೆ ಬಯ್ದಿದ್ದ. ಮೆಟರಾಜಿ ಕ್ಷಮೆ ಕೇಳಿದ. ಪರ್ವಾಗಿಲ್ಲ, ಮ್ಯಾಚ್ ಮುಗಿದ ಬಳಿಕ ‘ನನ್ನ ಜೆರ್ಸಿ ನಿನಗೆ ಕೊಡುತ್ತೇನೆ’ ಎಂದು ಜಿದಾನೆ ಲೇವಡಿ ಮಾಡಿದ. ಇದನ್ನು ಕೇಳಿದ ಮೆಟರಾಜಿ ‘ಜೆರ್ಸಿ ಬೇಡ, ನಿನ್ನ ತಂಗಿಯನ್ನೇ ಕೊಡು’ ಎಂದು ಬಿಟ್ಟ. (ಈ ಸಂಭಾಷಣೆ ವಿಚಾರವನ್ನು ಮೆಟರಾಜಿ 2020ರಲ್ಲಿ ಬಹಿರಂಗ ಪಡಿಸಿದ್ದ) ಮೊದಲೇ ಕೋಪಗೊಂಡಿದ್ದ ಜಿದಾನೆ ಮತ್ತಷ್ಟು ವ್ಯಗ್ರನಾದ. ಚೆಂಡಿನೆಡೆಗೆ ಓಡಬೇಕಿದ್ದ ಜಿದಾನೆಯು ಮೆಟರಾಜಿ ಕಡೆ ದೃಷ್ಠಿ ಹಾಯಿಸಿದ. ವಿಶ್ವಕಪ್ ಫೈನಲ್ ಅದರಲ್ಲೂ ತನ್ನ ವೃತ್ತಿ ಜೀವನದ ಕೊನೆಯ ಪಂದ್ಯವಾಡುತ್ತಿದ್ದ ಜಿದಾನೆಗೆ ಅದೇನು ಅನಿಸಿತೋ ಏನೋ, ನೇರವಾಗಿ ಗೂಳಿಯಂತೆ ನುಗ್ಗಿ ಬಂದು ತನ್ನ ತಲೆಯಿಂದ ಮೆಟರಾಜಿ ಎದೆಗೆ ಗುದ್ದಿ ಬಿಟ್ಟ!
ಫುಟ್ಬಾಲ್ ಲೋಕವೇ ಒಮ್ಮೆ ಆಶ್ಚರ್ಯ ಪಟ್ಟಿತ್ತು. ಏನಾಗುತ್ತಿದೆ ಎಂದು ಅರಿಯಲು ಕೆಲ ಕ್ಷಣಗಳೇ ಹಿಡಿಯಿತು. ಜಿದಾನೆ ಪೆಟ್ಟು ತಿಂದ ಮೆಟರಾಜಿ ನೆಲಕ್ಕೆ ಬಿದ್ದಿದ್ದ. ಫ್ರಾನ್ಸ್ ಆಟಗಾರರು ದಿಕ್ಕು ತೋಚದೆ ನಿಂತಿದ್ದರು. ನಾಯಕನಿಗೆ ರೆಫ್ರಿ ಕೆಂಪು ಕಾರ್ಡ್ ತೋರಿಸಿದರು. ಅಂದರೆ ಇನ್ನು ಆಡುವಂತಿಲ್ಲ.
ಬೇಸರದಿಂದಲೋ, ಕೋಪದಿಂದಲೋ, ಪಶ್ಚತಾಪದಿಂದಲೋ ಜಿದಾನೆ ತಲೆ ತಗ್ಗಿಸಿಕೊಂಡು ಮೈದಾನದಿಂದ ಹೊರಕ್ಕೆ ನಡೆದರು. ಈ ಶಾಕ್ ನಿಂದ ಹೊರಬರದ ಫ್ರಾನ್ಸ್ ಪೆನಾಲ್ಟಿ ಶೂಟೌಟ್ ನಲ್ಲಿ 5-3 ಅಂತರದಿಂದ ಸೋತಿತು. ಇಟಲಿ ವಿಶ್ವಕಪ್ ಗೆದ್ದುಕೊಂಡಿತು. ಅಂತಿಮ ಪಂದ್ಯ ಗೆದ್ದು ಮತ್ತೊಮ್ಮೆ ವಿಶ್ವಕಪ್ ಎತ್ತಬೇಕು ಎಂಬ ಕನಸು ಕಂಡಿದ್ದ ಜಿದಾನೆ ಡ್ರೆಸ್ಸಿಂಗ್ ರೂಂ ನಲ್ಲಿ ಬೇಸರದಿಂದ ಕುಳಿತಿದ್ದರೆ ಅತ್ತ ಇಟಲಿ ವಿಶ್ವಕಪ್ ವಿಜಯದಿಂದ ಸಂಭ್ರಮಿಸುತ್ತಿತ್ತು.
ಕೀರ್ತನ್ ಶೆಟ್ಟಿ ಬೋಳ