ನಾವು ಬದುಕೋದು ನಮಗಾಗಿ. ನಮ್ಮ ಆಸೆಗಾಗಿ, ನಮ್ಮ ಆಕಾಂಕ್ಷೆಗಾಗಿ, ನಮ್ಮ ಖುಷಿಗಾಗಿ. ನಾವೆಲ್ಲಾ ಒಂದಲ್ಲ ಒಂದು ಹಂತದಲ್ಲಿ ಸ್ವಾರ್ಥಿಗಳಾಗುತ್ತೇವೆ.ಸ್ವಾರ್ಥತನ ನಮ್ಮ ಜೀವನದ ಒಂದು ಭಾಗ. ಅದು ನಮ್ಮೊಟ್ಟಿಗೆ ಬೆಳೆಯುವ ನಮ್ಮ ಸ್ವಂತ ಅಹಂ.!
ಆದರೆ ಸ್ವಾರ್ಥತನವನ್ನೇ ಅರಿಯದವರು ಕೆಲವರು ಇರುತ್ತಾರೆ. ಎಲ್ಲದರಲ್ಲೂ ಅಂಥವರಿಗೆ ಸಹಾಯವನ್ನು ಮಾಡುವ ಮತ್ತು ಅಸಹಾಯಕತೆಯ ಪರಿಸ್ಥಿತಿಯನ್ನು ನೋಡಿ ಸಣ್ಣ ಮಟ್ಟಿನ ತೃಪ್ತಿಯನ್ನಾದರೂ ಆ ಜೀವಕ್ಕೆ ನೀಡುವ ಗುಣದವರು ಇರುತ್ತಾರೆ. ಒಡಿಶ್ಸಾದ 19 ವರ್ಷದ ಶ್ರುತಿ ಸ್ವಪ್ನಾ ಮೈಟಿ. ಹದಿಹರೆಯದ ಕನಸು,ಸುಂದರ ಮುಖ. ಕಲಿಯುವ ಆಸಕ್ತಿ,ಸಾಧಿಸುವ ತುಡಿತ ಇರುವ ಈಕೆ ಇಂದು ನಮ್ಮೆಲ್ಲರ ಮನ ಮೆಚ್ಚುವ ಜನವಾಗಿ ನಿಂತಿದ್ದಾಳೆ.
ಹೆಣ್ಣಿನ ಅಂದವನ್ನು ಹೆಚ್ಚಿಸುವ ತಲೆಯ ಉದ್ದ ಕೂದಲು. ಆಕೆಯ ರೂಪವನ್ನು ಅಂದಗಾಣಿಸುತ್ತದೆ. ಅಂಥ ಉದ್ದ ಕೂದಲನ್ನೇ ಹೆಣ್ಣೊಬ್ಬಳು ಪೂರ್ತಿಯಾಗಿ ಕತ್ತರಿಸಿದ್ರೆ, ಕಣ್ಣಿನ ನೋಟವೂ ಭೀತಿಗೆ ಒಳಗಾಗಬಹುದು. ಶ್ರುತಿ ಅದೊಂದು ದಿನ ಕಾಲೇಜಿನಲ್ಲಿ ಆಕೆಯ ಗೆಳತಿಯ ತಾಯಿಯನ್ನು ನೋಡುತ್ತಾರೆ. ಶ್ರುತಿ ಗೆಳತಿಯ ತಾಯಿ ಕ್ಯಾನ್ಸರ್ ರೋಗದಿಂದ ತತ್ತರಿಸಿ ಕೀಮೋಥೆರಪಿಯನ್ನು ಮಾಡಿ, ತನ್ನ ತಲೆಯ ಕೂದಲನ್ನು ಕತ್ತರಿಸಿ ಇರುತ್ತಾರೆ.ಇದನ್ನು ನೋಡಿದ 19 ವರ್ಷದ ಹುಡುಗಿ ಶ್ರುತಿ ಆ ವಯಸ್ಸಿಗೆ ಮೀರಿದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದು ಕೂದಲು ದಾನ ಮಾಡುವ ನಿರ್ಧಾರ.!
ಕ್ಯಾನ್ಸರ್ ರೋಗದಿಂದ ಬೋಳು ಆಗುವ ಕೂದಲು, ಆ ರೋಗಿಯ ಮನಸ್ಸನ್ನು ಇನ್ನಷ್ಟು ಕುಗ್ಗುವಂತೆ ಮಾಡುತ್ತದೆ. ಅವರಲ್ಲಿ ಇನ್ನಷ್ಟು ಅವಮಾನದ ನೋವನ್ನು ಚುಚ್ಚುವಂತೆ ಮಾಡುತ್ತದೆ. ಹೀಗೆಲ್ಲಾ ಯೋಚಿಸಿದ ಶ್ರುತಿ ಅವರಿಗಾಗಿ ತಾನು ಏನಾನದರೂ ಮಾಡಬೇಕೆನ್ನುವ ನಿರ್ಣಾಯದ ಹೆಜ್ಜೆಯೇ ಈ ಕೂದಲು ದಾನ.
ಕೂದಲು ದಾನದ ಬಗ್ಗೆ ಯೋಚಿಸಿದ ಶ್ರುತಿ, ಲೇಡಿಸ್ ಬ್ಯೂಟಿ ಪಾರ್ಲರ್ ನಲ್ಲಿ ಈ ಕುರಿತು ವಿಚಾರಿಸುತ್ತಾರೆ. ಆ ಬಳಿಕ ಇಂಟರ್ ನೆಟ್ ನಲ್ಲಿ ಹೇಗೆಲ್ಲಾ ಕೂದಲು ದಾನ ಮಾಡಬಹುದು, ಯಾವೆಲ್ಲಾ ಹಂತದಿಂದ ಕೂದಲನ್ನು ದಾನವಾಗಿ ನೀಡಬಹುದು ಎನ್ನುವುದರ ಕುರಿತು ಮಾಹಿತಿಯನ್ನು ಕಲೆಹಾಕುತ್ತಾರೆ. ತಾನು ಕೂದಲು ದಾನ ಮಾಡಿ, ಜನ ತನ್ನ ಮುಖವನ್ನು ನೋಡಿ ನಕ್ಕರು ಪರವಾಗಿಲ್ಲ. ತನ್ನಿಂದ ಕ್ಯಾನ್ಸರ್ ರೋಗಿಗಳ ಮುಖದಲ್ಲಿ ನಗುವೊಂದು ಇದ್ದರೆ. ಅದಕ್ಕಿಂತ ದೊಡ್ಡ ಖುಷಿ ಬೇರೆ ಯಾವುದಿಲ್ಲ ಎನ್ನುವ ಶ್ರುತಿ, ತನ್ನ ನಿರ್ಣಯದಂತೆ ಕೂದಲು ದಾನಕ್ಕೆ ಸಿದ್ಧರಾಗುತ್ತಾರೆ.
ಕೂದಲು ದಾನವನ್ನು ಮಾಡಿದ ಶ್ರುತಿಯ ದೈರ್ಯಕ್ಕೆ ಮನೆ ಮಂದಿಯೆಲ್ಲಾ ಗೌರವದ ಭಾವವಿದೆ, ವಿನಃ ಅವಮಾನದ ಬೇಗೆಯಲ್ಲ. ಶ್ರುತಿ ಇಷ್ಟು ಮಾತ್ರವಲ್ಲದೆ. ತನ್ನ ಸಾವಿನ ಬಳಿಕ ಕಣ್ಣು ಮತ್ತು ದೇಹದ ಇತರ ಅಂಗಾಂಗಗಳನ್ನು ದಾನವಾಗಿ ನೀಡುವ ಕುರಿತು ಪ್ರತಿಜ್ಞೆ ಮಾಡಿದ್ದಾರೆ.
ಶ್ರುತಿ ಶಾಲಾ ದಿನಗಳಲ್ಲಿ ಎನ್.ಎಸ್,ಎಸ್ ವಿಭಾಗದ ವಿದ್ಯಾರ್ಥಿಯಾಗಿರುವುದರಿಂದ ಈ ಬಗೆಯ ಸೇವಾ ಮನೋಭಾವ ಅವರಲ್ಲಿ ಬೇರೂರಿತ್ತು ಎನ್ನುತ್ತಾರೆ.
-ಸುಹಾನ್ ಶೇಕ್