ಅದ್ಯಾಕೋ ನಿಖೀಲ್ ಅಭಿನಯದ ಎರಡನೆಯ ಚಿತ್ರಕ್ಕೆ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ, ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದು, ಚಿತ್ರಕ್ಕೇನೋ ಚಾಲನೆ ಸಿಕ್ಕಿತು. ಆದರೆ, ಇನ್ನೇನು ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರಕ್ಕೆ ಹೆಸರು ಸಿಗದಂತಾಯಿತು, ನಿರ್ದೇಶಕರ ಬದಲಾವಣೆಯಾಯಿತು, ಈಗ ನೋಡಿದರೆ ಚಿತ್ರದ ಕಥೆಯೇ ಬದಲಾಗುತ್ತಿದೆ.
ಹೌದು, ಈ ಹಿಂದೆ “ಬಹದ್ದೂರ್’ ಚೇತನ್ ರಚಿಸಿದ್ದ ಕಥೆ ನಿರ್ಮಾಪಕ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖೀಲ್‌ಗೆ ಇಷ್ಟವಾಗಿತ್ತು. ಚೇತನ್ ನಿರ್ದೇಶನದಲ್ಲಿ ಚಿತ್ರಕ್ಕೆ ಚಾಲನೆಯೂ ಸಿಕ್ಕಿತು. ಒಂದು ಹಂತದಲ್ಲಿ ಚೇತನ್ ಬದಲಾದರೂ, ಅವರು ಬರೆದ ಕಥೆಯನ್ನು ಉಳಿಸಿಕೊಳ್ಳುವುದಕ್ಕೆ ಚಿತ್ರತಂಡ ತೀರ್ಮಾನಿಸಿತ್ತು.
ಅದೇ ಕಥೆಯನ್ನು ಮಹೇಶ್ ರಾವ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ನೋಡಿದರೆ, ಕಾರಣಾಂತರಗಳಿಂದ ಕಥೆಯೂ ಬದಲಾಗುತ್ತಿದೆ. ಈಗ ನಿಖೀಲ್‌ಗೆ ಹೊಸ ಬರೆಯಲಾಗುತ್ತಿದ್ದು, ಮೂವರು ತಂಡ ಕಟ್ಟಿಕೊಂಡು ಕಥೆ ರಚಿಸುವಲ್ಲಿ ನಿರತರಾಗಿದ್ದಾರೆ. ಒಂದು ಕಥೆಯನ್ನು ಮಹೇಶ್ ರಾವ್ ಅವರೇ ಬರೆಯುತ್ತಿದ್ದಾರಂತೆ.
ಇನ್ನೊಂದು ಕಥೆಯನ್ನು ಗೋಪಿಮೋಹನ್ ಬರೆಯುತ್ತಿದ್ದಾರೆ. ಈ ಗೋಪಿಮೋಹನ್ ತೆಲುಗಿನಲ್ಲಿ ದೊಡ್ಡ ಹೆಸರು. ತೆಲುಗಿನ ಹಲವು ಸೂಪರ್ ಹಿಟ್ ಸಿನಿಮಾಗಳಾದ “ದೂಕುಡು’, “ಬಾದ್‌ಷ’, “ರೆಡಿ’, “ಕಿಂಗ್’, “ನಮೋ ವೆಂಕಟೇಶ’ ಮುಂತಾದ ಹಲವು ಚಿತ್ರಗಳಿಗೆ ಕಥೆ ರಚಿಸಿದ್ದಾರೆ. ಹಾಗಾಗಿ ನಿಖೀಲ್‌ಗೆ ಕಥೆ ಬರೆಯುವುದಕ್ಕೆ ಅವರಿಗೆ ಹೇಳಲಾಗಿದೆ. ಇನ್ನು ಮೆಹರ್ ರಮೇಶ್‌ಗೂ ಜವಾಬ್ದಾರಿ ನೀಡಲಾಗಿದೆಯಂತೆ.
ಮೆಹರ್ ರಮೇಶ್ ಈ ಹಿಂದೆ ಕನ್ನಡದಲ್ಲಿ ಪುನೀತ್ ಅಭಿನಯದ “ವೀರ ಕನ್ನಡಿಗ’ ಮತ್ತು “ಅಜಯ್’ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ತೆಲುಗಿನಲ್ಲಿ ಹಲವು ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಈ ಮೂವರ ಪೈಕಿ ಯಾರ ಕಥೆ ಓಕೆಯಾಗುತ್ತದೋ, ಆ ಕಥೆ ಚಿತ್ರವಾಗಲಿದೆ. ಅಂದಹಾಗೆ, ಈ ಮುನ್ನ ಆಗಸ್ಟ್‌ನಲ್ಲಿ ಚಿತ್ರ ಶುರುವಾಗಬಹುದು ಎಂದು ಹೇಳಲಾಗಿತ್ತು. ಈಗ ಎರಡು ತಿಂಗಳು ಮುಂದಕ್ಕೆ ಹೋಗಿದ್ದು, ಅಕ್ಟೋಬರ್‌ನಲ್ಲಿ ಚಿತ್ರ ಪ್ರಾರಂಭವಾಗಲಿದೆ.
ಈ ಮಧ್ಯೆ ನಿಖೀಲ್‌ಗೆ “ಜಾಗ್ವಾರ್’ ಚಿತ್ರದ ಅಭಿನಯಕ್ಕಾಗಿ ಸಾಯ್ಮಾ ಅತ್ಯುತ್ತಮ ಡೆಬ್ಯುಟೆಂಟ್ ನಟ ಎಂಬ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರಕ್ಕೆ ನಿಖೀಲ್‌ಗೆ ಸಿಗುತ್ತಿರುವುದು ಇದು ಎರಡನೆಯ ಪ್ರಶಸ್ತಿ. ಈ ಹಿಂದೆ ಟಿಎಸ್‌ಆರ್ ಅತ್ಯುತ್ತಮ ಡೆಬ್ಯುಟೆಂಟ್ ನಟ ಪ್ರಶಸ್ತಿ ಸಿಕ್ಕಿತ್ತು.