ಹೇಳಿ ಕೇಳಿ ಇದು ಇಂಟರ್ನೆಟ್ ಜಮಾನ. ರಾತ್ರಿ ಬೆಳಗ್ಗೆ ಆಗುವ ಮುನ್ನ ಯಾರು ವೈರಲ್ ಆಗ್ತಾರೆ, ಯಾರು ಕೆಂಗಣ್ಣಿಗೆ ಗುರಿಯಾಗ್ತಾರೆ ಅನ್ನೋದೆಲ್ಲಾ ಕ್ಷಣ ಮಾತ್ರದಲ್ಲಿ ತಿಳಿಯುವ ಕಾಲ. ಇಂಟರ್ನೆಟ್ ಯುಗದಲ್ಲಿ ಒಬ್ಬರ ಕಾಲು ಒಬ್ಬರು ಎಳೆಯುತ್ತಾ, ಒಬ್ಬರ ಮೇಲೆ ಒಬ್ಬರು ಕೆಸರು ಎರಚುತ್ತಾ ದಿನ ಕಳೆಯುವ ಕಾಲ. ಟ್ರೋಲ್ ,ಮಿಮ್ಸ್ ಗಳ ಪೇಜ್ ಗಳಲ್ಲಿ ಬರುವ ಹಾಸ್ಯವನ್ನು ಹಾಗೆಯೇ ನೇರವಾಗಿ ಸ್ಟೇಟಸ್ ಗಳಿಗೆ ಹಾಕಿ ಟೈಮ್ ಪಾಸ್ ಆಗುವ ಇಂಟರ್ ನೆಟ್ ಯುಗದಲ್ಲಿ ವೈರಲ್ ಆಗುವಂತೆ ಏನಾದ್ರು ಮಾಡುವುದು ಕಷ್ಟ. ಹೇಳಿ ಕೇಳದೆ ವೈರಲ್ ಆಗುವುದೇ ಹೆಚ್ಚು.
ಮಿಮ್ಸ್ ಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಆಗುವ ಮಿಮ್ಸ್ ಗಳು ಎಲ್ಲೆಡೆ ವೇಗವಾಗಿ ಹರಿದಾಡುತ್ತದೆ. ಇತ್ತೀಚೆಗೆ ಈಗಲೂ ಟ್ರೆಂಡ್ ಆಗಿರುವ ಒಂದು ಮಿಮ್ಸ್ ಅನ್ನು ಖಂಡಿತವಾಗಿ ನಾವು ನೀವೂ ಆಗಾಗ ನಮ್ಮ ಸ್ಟೇಟಸ್ ಗಳಲ್ಲಿ ಹಾಕಿ ನಕ್ಕು ನಕ್ಕು ಸುಸ್ತಾಗುತ್ತೇವೆ. ಆರು ಜನರ ಗುಂಪೊಂದು ಕಫೀನ್ ಬಾಕ್ಸ್ ( ಶವ ಪೆಟ್ಟಿಗೆ) ಅನ್ನು ಹೆಗಲ ಮೇಲಿಟ್ಟುಕೊಂಡು ಭಿನ್ನ ಭಂಗಿಯಲ್ಲಿ ಹಾಸ್ಯಾಸ್ಪದವಾಗಿ ನೃತ್ಯ ಮಾಡುವ ವಿಡಿಯೋವೊಂದು ಎಷ್ಟು ವೈರಲ್ ಆಗಿದೆ ಅಂದರೆ ಎಲ್ಲಿ ನೋಡಿದ್ರು, ಯಾವ ಸನ್ನಿವೇಶದಲ್ಲೂ ಆ ವಿಡಿಯೋದ ತುಣುಕು ಸೇರಿ ಮಿಮ್ಸ್ ಗಳಾಗುತ್ತಿವೆ.
ಕಫೀನ್ ಬಾಕ್ಸ್ ಹೆಗಲ ಮೇಲಿಟ್ಟು ಅಂತಿಮ ಯಾತ್ರೆಯನ್ನು ಸಾಗಿಸುವುದನ್ನು ನಾವು ನೋಡಿದ್ದೇವೆ. ಆದರೆ ಕಫೀನ್ ಬಾಕ್ಸ್ ಹಿಡಿದುಕೊಂಡು ಅದರೊಂದಿಗೆ ನೃತ್ಯ ಮಾಡಿಕೊಂಡು ಸಾಗುವುದು ನೋಡಿದರೆ ಇದು ವಿಚಿತ್ರ ಅನ್ನಿಸುವುದು ಖಚಿತ. ಅಂದ ಹಾಗೆ ಇದರ ಹಿಂದೆಯೂ ಒಂದು ಕಥೆಯಿದೆ. ವೈರಲ್ ಆಗಿರುವ ಕಫೀನ್ ಡ್ಯಾನ್ಸರ್ ಗಳ ಹಿಂದೆ ಒಂದು ಪಯಣವಿದೆ..
ಇದು ಪಶ್ಚಿಮ ಆಫ್ರಿಕಾದ ಗಾನಾ ಪ್ರದೇಶದಲ್ಲಿರುವ ಒಂದು ಸಾಂಪ್ರದಾಯಿಕ ಆಚರಣೆ. ಗಾನಾದಲ್ಲಿ ವ್ಯಕ್ತಿಯೊಬ್ಬ ಸತ್ತ ಮೇಲೆ ಆತ ಇಹಲೋಕ ಬಿಟ್ಟು ದೇವಲೋಕಕ್ಕೆ ಹೋಗುವಾಗ ಆತನ ಪಾರ್ಥಿವ ಶರೀರವನ್ನು ನೊಂದುಕೊಂಡು ಸಾಗಿಸುವ ಬದಲು ಖುಷಿ ಖುಷಿಯಾಗಿಯೇ ಸಾಗಿಸಬೇಕೆನ್ನುವ ಒಂದು ನಂಬಿಕೆ ಆ ಭಾಗದಲ್ಲಿ ಇದೆ. ಅದಕ್ಕಾಗಿ ಆ ಪ್ರದೇಶದಲ್ಲಿ ಪಾಲ್ಬೀರರ್ಸ್ (ಶವ ಪೆಟ್ಟಿಗೆ ಎತ್ತುವವರು) ಗಳ ಗುಂಪುಗಳಿವೆ.
2010 ರಲ್ಲಿ ಬೆಂಜಮಿನ್ ಐಡೋ ಎನ್ನುವ ವ್ಯಕ್ತಿಯೊಬ್ಬ ಪಾಲ್ಬೀರರ್ಸ್ ಗಳ ಕಂಪೆನಿಯೊಂದನ್ನು ಪ್ರಾರಂಭಿಸುತ್ತಾನೆ. ಇದು ಬ್ಯುಸಿನೆಸ್ ಆಗಿ ಅಕ್ಕ ಪಕ್ಕದ ಪ್ರದೇಶದಲ್ಲಿ ಈ ಗ್ರೂಪ್ ಪರಿಚಿತವಾಗುತ್ತದೆ. ಅದೊಂದು ದಿನ ಅಮೇರಿಕಾದಲ್ಲಿ ವಾಸಿಸುತ್ತಿದ್ದ ಎಲಿಜಬೆತ್ ಅಣ್ಣನ್ ಎನ್ನುವ ಮಹಿಳೆಯ ಅಮ್ಮ ಗಾನಾದಲ್ಲಿ ನಿಧನರಾದಾಗ ಅವರ ಅಂತಿಮ ಇಚ್ಛೆಯಂತೆ ಅವರ ಶವ ಪೆಟ್ಟಿಗೆಯನ್ನು ಹೆಗಲ ಮೇಲಿರಿಸಿಕೊಂಡು ಸ್ಮಶಾನಕ್ಕೆ ಹೋಗುವವರೆಗೆ ವಿವಿಧ ಭಂಗಿಯಲ್ಲಿ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಾರೆ. ಬೆಂಜಮಿನ್ ರ ಈ ಗುಂಪು ಕಫೀನ್ ಬಾಕ್ಸ್ ಜೊತೆ ಕುಣಿಯುತ್ತಿದ್ದಾಗ ಅದನ್ನು ಯಾರೋ ಒಬ್ಬ ಮಹಿಳೆ ಯೂಟ್ಯೂಬ್ ನಲ್ಲಿ ಆಪ್ಲೋಡ್ ಮಾಡುತ್ತಾರೆ. ಆ ವಿಡಿಯೋ ನೋಡು ನೋಡುತ್ತಿದ್ದಂತೆ ರಲ್ಲಿ ವೈರಲ್ ಆಗುತ್ತದೆ. ಆ ವಿಡಿಯೋದೊಂದಿಗೆ ಅದ್ಯಾರೋ ‘ಅಸ್ಟ್ರೋನೋಮಿಯಾ’ ಎನ್ನುವ ಇಡಿ ಎಮ್ ಸಾಂಗ್ ಅನ್ನು ಸೇರಿಸಿ ಇದ್ದ ಬದ್ದ ಮಿಮ್ಸ್ ಗಳ ಜೊತೆ ಜೋಡಿಸುತ್ತಾರೆ. ಅದು ಈಗಲೂ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಕಫೀನ್ ನಲ್ಲಿರುವುದು ಎಲಿಜಬೆತ್ ಅವರ ಅಮ್ಮನ ದೇಹ. ಅಲ್ಲಿಂದ ಗಾನಾದ ಈ ಬೆಂಜಮಿನ್ ಗುಂಪಿನ ಆರು ಜನ ಎಲ್ಲೆಡೆ ಮಿಮ್ಸ್ ಗಳ ಮೆಚ್ಚಿನ ಆಯ್ಕೆ.
ಇವರು ಎಷ್ಟು ಜನಪ್ರಿಯರಾದರು ಎಂದರೆ 2017 ರಲ್ಲಿ ಆಫ್ರಿಕಾದ ಬಿಬಿಸಿ ವಾಹಿನಿ ಇವರ ಕುರಿತು ಒಂದು ಸಣ್ಣ ಡಾಕ್ಯುಮೆಂಟರಿಯನ್ನು ಮಾಡಿತ್ತು. ಹಲವಡೆ ಇವರ ಸಂದರ್ಶನಗಳನ್ನು ಕಾಣಬಹುದು. ಗುಂಪಿನ ಮುಖ್ಯಸ್ಥ ಬೆಂಜಮಿನ್ ಪ್ರಕಾರ ಇವರು ಈ ಮೂಲಕ ಆದ್ರು ಅಲ್ಲಿಯ ನಿರುದ್ಯೋಗವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದರಂತೆ.
ಕಪ್ಪು, ಬಿಳುಪು, ಬಣ್ಣ ಬಣ್ಣದ ಸೂಟ್ ಬೂಟ್ ನ ತಯಾರಿಕೆಯನ್ನು ಇವರ ಸದಸ್ಯರೇ ಮಾಡುತ್ತಾರೆ. ಬಟ್ಟೆಯ ಬಣ್ಣ ಹಾಗೂ ನೃತ್ಯದ ಸ್ಟೆಪ್ ಗಳು ಹೇಗಿರಬೇಕೆನ್ನುವುದನ್ನು ಸತ್ತ ಮನೆಯ ಜನ ಹಾಗೂ ಸ್ಥಳೀಯರ ಆಯ್ಕೆಯಂತೆ ಆಗುತ್ತದೆ. ಸದ್ಯ ಇವರ ಈ ಗುಂಪಿನಲ್ಲಿ ನೂರು ಜನರಿದ್ದಾರೆ. ಒಂದು ಶವ ಪೆಟ್ಟಿಗೆಯ ನೃತ್ಯಕ್ಕೆ ಇವರು ಡಾಲರ್ ಗಟ್ಟಲೆ ಹಣ ತೆಗೆದುಕೊಳ್ಳುತ್ತಾರಂತೆ.
ಸಂದರ್ಶನವೊಂದರಲ್ಲಿ ಇವರ ಮುಖ್ಯಸ್ಥ ಹೇಳುವ ಪ್ರಕಾರ, ಪ್ರತಿವಾರ 5-6 ಶವಯಾತ್ರೆಗೆ ಹೋಗಿ ಇವರು ಡ್ಯಾನ್ಸ್ ಮಾಡಿ, ಮಡಿದ ಜೀವಕ್ಕೆ ಗೌರವ ಸಲ್ಲಿಸುತ್ತಾರಂತೆ. ಇತ್ತೀಚೆಗೆ ಕೋವಿಡ್ ವಾರಿಯರ್ಸ್ ಗಳಿಗೆ ಇವರು ಗೌರವ ಪೂರ್ವಕವಾಗಿ ಧನ್ಯವಾದಗಳು ಅರ್ಪಿಸಿದ್ದರು. ಸದ್ಯ ಕೋವಿಡ್ ವೈರಸ್ ಮುಂಜಾಗ್ರತ ಕ್ರಮವನ್ನು ಇವರು ಅನುಸರಿಸುತ್ತಿದ್ದಾರೆ. ಈ ಸಮಯದಲ್ಲೂ ಇವರ ಜನಪ್ರಿಯ ಕುಗ್ಗಿಲ್ಲ ಎನ್ನುತ್ತಾರೆ ಬೆಂಜಮಿನ್.
– ಸುಹಾನ್ ಶೇಕ್