Advertisement

4 ನಿಮಿಷದ ನಡುವೆ ಆ ಎರಡು ಗೋಲು..!; ಕಾಲ್ಚೆಂಡಿನ ಕಾಳಗದಲ್ಲಿ ಮರಡೋನಾ ವಿವಾದ

04:55 PM Nov 23, 2022 | ಕೀರ್ತನ್ ಶೆಟ್ಟಿ ಬೋಳ |

“ಹೌದು, ಅಂದು ನಾನು ಗೋಲು ಹೊಡೆದಿದ್ದು ಕೈನಿಂದ.. ಬಹುಶಃ ಅದು ನಾಲ್ಕು ವರ್ಷಗಳ ಹಿಂದಿನ ಯುದ್ದದ ಸೋಲಿಗೆ ಒಂದು ರೀತಿಯ ಪ್ರತೀಕಾರ.. ” ಹೀಗೆಂದು ಹೇಳಿಬಿಟ್ಟಿದ್ದರು… ವಿಶ್ವಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬ ಡಿಯಾಗೊ ಮರಡೋನಾ.

Advertisement

ಅರ್ಜೆಂಟಿನಾದ ಫುಟ್ಬಾಲ್ ತಾರೆ ಡಿಯಾಗೊ ಮರಡೋನಾ ಈ ರೀತಿ ಹೇಳಿದಾಗ ಅದಾಗಲೇ ಹಲವು ವರ್ಷಗಳು ಉರುಳಿ ಹೋಗಿತ್ತು. ಫುಟ್ಬಾಲ್ ವಿಶ್ವಕಪ್ ಅದಾಗಲೇ ಕೆಲವು ಕೈಗಳನ್ನು ಬಳಸಿ ಸಾಗಿತ್ತು. ಹಲವು ಆಟಗಾರರು ಹುಟ್ಟಿ ಮರೆಯಾಗಿದ್ದರು.

ಹೌದು, ಇದು ಹ್ಯಾಂಡ್ ಆಫ್ ಗಾಡ್ ನ ಚಿತ್ರಣ. ಡಿಯಾಗೊ ಮರಡೋನಾ ಎಂಬ ವರ್ಣರಂಜಿತ ಆಟಗಾರನ ಚಾಕಚಕ್ಯತೆಯ ಪ್ರದರ್ಶನದ ಒಂದು ಮೆಲುಕು.

ಅದು 1986ರ ಫುಟ್ಬಾಲ್ ವಿಶ್ವಕಪ್. ಆ ವರ್ಷ ಕಾಲ್ಚೆಂಡು ಜಾತ್ರೆಗೆ ಮೆಕ್ಸಿಕೊ ದೇಶ ಆತಿಥ್ಯ ವಹಿಸಿತ್ತು.  ಕೂಟ ಸಾಗಿ ಕ್ವಾರ್ಟರ್ ಫೈನಲ್ ಹಂತದವರೆಗೆ ಸಾಗಿತ್ತು. ಅಂದು ಮುಖಾಮುಖಿಯಾಗಿದ್ದು ಮರಡೋನಾ ನಾಯಕತ್ವದ ಅರ್ಜೆಂಟಿನಾ ಮತ್ತು ಇಂಗ್ಲೆಂಡ್ ತಂಡ. ಇದಕ್ಕೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಅರ್ಜೆಂಟಿನಾ ಮತ್ತು ಇಂಗ್ಲೆಂಡ್ ದೇಶಗಳ ನಡುವೆ ಭೀಕರ ಯುದ್ದ ನಡೆದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ಕಾಲ್ಚೆಂಡು ಯುದ್ಧ. ಸಹಜವಾಗಿಯೇ  ವಾತಾವರಣ ಬಿಸಿಯೇರಿತ್ತು.

ಪಂದ್ಯ ಆರಂಭವಾಯಿತು. ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದ ಆರು ನಿಮಿಷಗಳ ನಂತರ, ಮರಡೋನಾ ತನ್ನ ಎಡಗಾಲಿನಿಂದ ಚೆಂಡನ್ನು ಬಾಕ್ಸ್ ನಿಂದ ಹೊರತೆಗೆದು ತಂಡದ ಸಹ ಆಟಗಾರ ಜಾರ್ಜ್ ವಾಲ್ಡಾನೊಗೆ ಪಾಸ್ ಮಾಡಿದರು. ಚೆಂಡನ್ನು ಪಡೆದ ವಾಲ್ಡಾನೊ ಹಲವಾರು ಇಂಗ್ಲಿಷ್ ಡಿಫೆಂಡರ್ ಗಳನ್ನು ವಂಚಿಸಿ ಸಾಗಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ನಿಯಂತ್ರಣದಿಂದ ತಪ್ಪಿತ್ತು. ಈ ವೇಳೆ ಇಂಗ್ಲಿಷ್ ಮಿಡ್ಫೀಲ್ಡರ್ ಸ್ಟೀವ್ ಹಾಡ್ಜ್ ಚೆಂಡನ್ನು ಹಾರಿಸಿ ಇಂಗ್ಲೆಂಡ್ ನ ಗೋಲ್ ಪೋಸ್ಟ್ ನ ಬಳಿ ನಿಂತಿದ್ದ ಇಂಗ್ಲಿಷ್ ಕೀಪರ್ ನತ್ತ ಹೊಡೆದರು.

Advertisement

ಇಂಗ್ಲಿಷ್ ಗೋಲು ಕೀಪರ್ ಆರಡಿ ಉದ್ದದ ಪೀಟರ್ ಶಿಲ್ಟನ್. ಸ್ಟೀವ್ ಹಾಡ್ಜ್ ಬಾರಿಸಿದ ಚೆಂಡನ್ನು ಹಿಡಿಯಲು ಶಿಲ್ಟನ್ ಮುಂದಡಿಯಿಟ್ಟರು. ತನ್ನ ಬಲಗೈಯನ್ನು ಮುಂದೆ ಚಾಚಿದ ಶಿಲ್ಟನ್ ಚೆಂಡನ್ನು ಹಿಡಿಯಲನುವಾಗಿದ್ದರಷ್ಟೇ, ಎಲ್ಲಿಂದಲೋ ಬಂದ ಮರಡೋನಾ ಹಾರಿಯಾಗಿತ್ತು. ಎತ್ತರದಲ್ಲಿ ಶಿಲ್ಟನ್ ಗಿಂತ ಕುಳ್ಳಗಿನ ಮರಡೋನಾ ಅಂದು ಶಿಲ್ಟನ್ ಗಿಂತ ಮೇಲಕ್ಕೆ ಹಾರಿದ್ದರು. ಶಿಲ್ಟನ್ ಬಲಗೈ ಚಾಚಿ ಚೆಂಡನ್ನು ಹಿಡಿಯುವಷ್ಟರಲ್ಲಿ ಮರಡೋನಾ ತನ್ನ ಎಡಗೈನಿಂದ ಚೆಂಡಿಗೆ ಗುದ್ದಿದ್ದರು. ಎಲ್ಲರೂ ನೋಡ ನೋಡುತ್ತಿದ್ದಂತೆ ಚೆಂಡು ಗೋಲು ಪೆಟ್ಟಿಗೆ ಸೇರಿತ್ತು.

ಕ್ಷಣ ಮಾತ್ರದಲ್ಲಿ ನಡೆದ ಘಟನೆಯದು. ಫುಟ್ಬಾಲ್ ಆಟದಲ್ಲಿ ಗೋಲು ಕೀಪರ್ ಹೊರತುಪಡಿಸಿ ಬೇರಾವುದೇ ಆಟಗಾರ ಚೆಂಡನ್ನು ಕೈಯಿಂದ ಸ್ಪರ್ಶ ಮಾಡುವುದು ನಿಷಿದ್ಧ. ಆದರೆ ಅರ್ಜೆಂಟಿನಾದ ನಾಯಕ ಕೈಯಿಂದಲೇ ಗೋಲು ಬಾರಿಸಿದ್ದ. ಅಷ್ಟೇ ಅಲ್ಲದೆ ಕೂಡಲೇ ಮೈದಾನದ ತುಂಬೆಲ್ಲಾ ಓಡಾಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅರ್ಜೆಂಟಿನಾ ಆಟಗಾರರು ನಾಯಕನ ಜೊತೆ ಸೇರಿದ್ದರು. ಆದರೆ ಇಂಗ್ಲಿಷರಿಗೆ ಈ ಮೋಸ ಅಂದಾಜಾಗಿತ್ತು. ಅವರು ಕೂಡಲೇ ರೆಫ್ರಿ ಬಳಿ ಬಂದರು. ಆದರೆ ರೆಫ್ರಿ ಮಾತ್ರ ಕಿವಿಗೊಡಲಿಲ್ಲ.

ಆ ಪಂದ್ಯಕ್ಕೆ ರೆಫ್ರಿಯಾಗಿದ್ದ ಟ್ಯುನೇಶಿಯಾದ ಅಲಿ ಬೆನಾಸಿಯುರ್ ಅರ್ಜೆಂಟಿನಾಗೆ ಒಂದು ಗೋಲು ಎಂದು ಘೋಷಿಸಿದರು. ಅವರಿಗೆ ಮರಡೋನಾ ಚೆಂಡಿಗೆ ಕೈಯಿಂದ ಸ್ಪರ್ಶ ಮಾಡಿದ್ದು ತಿಳಿಯಲಿಲ್ಲ. ಹೆಡ್ ಕಿಕ್ ಮೂಲಕ ಚೆಂಡು ಗೋಲು ಪೆಟ್ಟಿಗೆ ಸೇರಿದೆ ಎಂದು ತೀರ್ಪು ನೀಡಿದರು. ಇಂಗ್ಲಿಷ್ ಆಟಗಾರರು ಪ್ರತಿಭಟಿಸಿದರು. ಆದರೆ ಅದು ಫಲ ನೀಡಲಿಲ್ಲ.

ಈ ಮೂಲಕ ಡಿಯಾಗೊ ಮರಡೋನಾ ಅಂದು ಫುಟ್ಬಾಲ್ ವಿಶ್ವಕಪ್ ಇತಿಹಾಸದ ಅತ್ಯಂತ ವಿವಾದಾತ್ಮಕ ಗೋಲೊಂದನ್ನು ಹೊಡೆದಿದ್ದರು. 2005ರಲ್ಲಿ ಅಂದರೆ ಆ ವಿಶ್ವಕಪ್ ನಡೆದು ಬರೋಬ್ಬರಿ 19 ವರ್ಷಗಳ ಬಳಿಕ ಮರಡೋನಾ ಈ ಗೋಲಿನ ಬಗ್ಗೆ ಮಾತನಾಡಿದ್ದರು.

“ ಹೌದು, ಅಂದು ಆ ಚೆಂಡು ಗೋಲು ಪೆಟ್ಟಿಗೆ ಸೇರಿದ್ದು ಸ್ವಲ್ಪ ಮರಡೋನಾ ತಲೆಯಿಂದ, ಮತ್ತೆ ಸ್ವಲ್ಪ ದೇವರ ಕೈಯ ಸಹಾಯದಿಂದ (ಹ್ಯಾಂಡ್ ಆಫ್ ಗಾಡ್)” ಎಂದಿದ್ದರು ಮರಡೊನಾ.  ಅಲ್ಲಿಂದ ಬಳಿಕ ಆ ಗೋಲಿಗೆ ಹ್ಯಾಂಡ್ ಆಫ್ ಗಾಡ್ ಎಂಬ ಹೆಸರು ಬಂತು.

ಈ ಹೇಳಿಕೆಯ ಮೂಲಕ ಮರಡೋನಾ ತಪ್ಪೊಪ್ಪಿಕೊಂಡರು, ಅವರು ಕ್ಷಮೆ ಕೇಳಿದರು ಎಂಬ ವರದಿಗಳು ವೇಗವಾಗಿ ಹರಿದಾಡಿದವು. ಅಲ್ಲದೆ ಇಂಗ್ಲಿಷ್  ಗೋಲ್ಕೀಪರ್ ಶಿಲ್ಟನ್ ಕೂಡಾ ಕ್ಷಮೆಯನ್ನು ತಿರಸ್ಕರಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಪತ್ರಿಕೆಯೊಂದರಲ್ಲಿ ಮರಡೋನಾ ಲೇಖನ ಬರೆದರು.

“ನಾನು ಎಂದಿಗೂ ಕ್ಷಮೆಯ ಬಗ್ಗೆ ಮಾತನಾಡಲಿಲ್ಲ.  ನಾನು ಅಂದು ನಡೆದ ಘಟನೆಯನ್ನು ಮಾತ್ರ ಹೇಳಿದ್ದೇನೆ. ನಾನು ಯಾರೊಂದಿಗೂ ಕ್ಷಮೆ ಕೇಳಬೇಕಾಗಿಲ್ಲ, ಅಂದು ಅಜ್ಟೆಕಾ ಕ್ರೀಡಾಂಗಣದಲ್ಲಿ 100,000 ಜನರು, ಇಪ್ಪತ್ತೆರಡು ಆಟಗಾರರು, ಇಬ್ಬರು ಲೈನ್ಸ್ಮನ್ ಗಳಿದ್ದರು, ಒಬ್ಬ ರೆಫರಿ ಇದ್ದರು. ಈಗ ಮಾತನಾಡುವ ಗೋಲ್ಕೀಪರ್ ಶಿಲ್ಟನ್ ಅಂದು ಯಾಕೆ ಗಮನಿಸಲಿಲ್ಲ, ಆದ್ದರಿಂದ ಕಥೆಯನ್ನು ಈಗಾಗಲೇ ಬರೆಯಲಾಗಿದೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಯಾರ ಬಳಿಯೂ ಕ್ಷಮೆ ಕೇಳಿಲ್ಲ. ಅಲ್ಲದೆ ಯಾಕಾಗಿ ನಾನು ಇಂಗ್ಲೆಂಡಿಗೆ ಕ್ಷಮೆ ಕೇಳಲಿ? ನಲವತ್ತೇಳನೇ ವಯಸ್ಸಿನಲ್ಲಿ ನಾನು  ಕ್ಷಮೆಯಾಚಿಸುವುದು ಮೂರ್ಖತನ ಎಂದು ನಾನು ಭಾವಿಸುತ್ತೇನೆ” ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದರು.

ಮತ್ತದೇ 1986ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಬರೋಣ. ಮರಡೋನ ‘ಕೈ ಚಳಕ’ದ ಕಾರಣದಿಂದ ಗೋಲು ಬಿಟ್ಟಿಕೊಟ್ಟಿದ್ದ ಇಂಗ್ಲೆಂಡ್ ಇನ್ನೂ ಶಾಕ್ ನಿಂದ ಹೊರಬಂದಿರಲಿಲ್ಲ. ಆದರೆ ಮರಡೋನಾ ಮಾತ್ರ ಫುಲ್ ಜೋಶ್ ನಲ್ಲಿದ್ದರು. ಮೊದಲ  ಗೋಲು ಹೊಡೆದು ಕೇವಲ ನಾಲ್ಕು ನಿಮಿಷವಾಗಿತ್ತು. ಚೆಂಡು ಮತ್ತೆ ಮರಡೊನಾ ಬಳಿ ಬಂದಿತ್ತು. ಆಗವರು ಗೋಲಪೆಟ್ಟಿಗೆಯಿಂದ ಸುಮಾರು ದೂರದಲ್ಲಿದ್ದರು. ಚೆಂಡು ಕಾಲಿಗೆ ಸಿಕ್ಕಿದ್ದೇ ತಡ ಮರಡೋನಾ ಮ್ಯಾಜಿಕ್ ಆರಂಭಿಸಿದ್ದರು.

ಚೆಂಡನ್ನು ಸಂಪೂರ್ಣವಾಗಿ ಹತೋಟಿಗೆ ಪಡೆದ ಮರಡೋನಾ ತನ್ನ ಅದ್ಭುತ ಕೌಶಲ್ಯ ತೋರಿಸಿದ್ದರು. ಎದುರಿಗೆ ಬಂದ ಇಂಗ್ಲಿಷ್ ಆಟಗಾರರನ್ನು ವಂಚಿಸುತ್ತಾ ಮುನ್ನಡೆದರು. ಚೆಂಡನ್ನು ಯಾರಿಗೂ ಪಾಸ್ ಮಾಡದೆ ಐದು ಇಂಗ್ಲೆಂಡ್ ಡಿಫೆಂಡರ್ ಗಳ ತಡೆಯನ್ನು ಬೇಧಿಸಿ ಕೇವಲ 10 ಸೆಕೆಂಡುಗಳಲ್ಲಿ ಮರಡೋನಾ 60 ಯಾರ್ಡುಗಳನ್ನು ಓಡಿದ್ದರು. ಗೋಲು ಪೆಟ್ಟಿಗೆ ಬಳಿ ಬಂದ ಮರಡೋನಾ ಎದುರಾಲಿ ಗೋಲಿ ಶಿಲ್ಟನ್ ನ ಕಣ್ಣು ತಪ್ಪಿಸಿ ತನ್ನ ಎಡಗಾಲಿನಲ್ಲಿ ಗೋಲು ಬಾರಿಸಿದ್ದರು. ಈ ಗೋಲನ್ನು ಶತಮಾನದ ಗೋಲು ಎಂದು ಕರೆಯಲಾಯಿತು.

ಮರಡೋನಾ ಮ್ಯಾಜಿಕ್ ಗೆ ಶರಣಾದ ಇಂಗ್ಲೆಂಡ್ ಆ ಪಂದ್ಯದಲ್ಲಿ ಸೋಲನುಭವಿಸಿತು. ಬೆಲ್ಜಿಯಂ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲೂ ಮರಡೋನಾ ಎರಡು ಗೋಲು ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯನ್ನು ಸೋಲಿಸಿದ ಅರ್ಜೆಂಟಿನಾ ಫುಟ್ಬಾಲ್ ವಿಶ್ವಕಪ್ ಎತ್ತಿ ಹಿಡಿಯಿತು.

ಕೇವಲ ನಾಲ್ಕು ನಿಮಿಷದ ಅಂತರದಲ್ಲಿ ಅತ್ಯಂತ ವಿವಾದಾತ್ಮಕ ಗೋಲು ಮತ್ತು ಶತಮಾನದ ಗೋಲನ್ನು ಬಾರಿಸಿದ ಮರಡೋನಾ ಈ ವರ್ಷ ತಂಡವನ್ನು ಚಾಂಪಿಯನ್ ಮಾಡಿದರು. ವಿಪರ್ಯಾಸ ಎಂದರೆ ಅದಾಗಿ ಸುಮಾರು 36 ವರ್ಷಗಳೇ ಕಳೆದರೂ ಆ ಬಳಿಕ ಒಂದೇ ಒಂದು ಬಾರಿಯೂ ಅರ್ಜೆಂಟಿನಾ ವಿಶ್ವಕಪ್ ಗೆಲ್ಲಲಾಗಲಿಲ್ಲ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next