ಲಗಾಮುಇಲ್ಲದ ಕುದುರೆ ಯಂತೆ ಓಡುತ್ತಿದ್ದ ನಮ್ಮ ಬದುಕು ಒಮ್ಮೆಲೆ ಮುಗ್ಗರಿಸಿ ಬಿದ್ದಿದೆ. ಮಂಗಳನ ಅಂಗಳದಲ್ಲೊಂದು ಸೈಟ್ ಖರೀದಿಸುವ ಸಾಹಸಕ್ಕೆ ಮುಂದಾಗಿದ್ದ ನಾವಿಂದು ನಮ್ಮ ಮನೆಯ ಅಂಗಳಕ್ಕೆ ಕಾಲಿಡುವುದಕ್ಕೂ ಭಯಪಡುವಂತಾಗಿದೆ. ಎಲ್ಲೆಡೆಯೂ ನೀರವ ಮೌನ. ಲಂಗು-ಲಗಾಮಿಲ್ಲದೆ ಅಲೆಯುತ್ತಿದ್ದ ಮನಸು ಇಂದು ತನ್ನೆಲ್ಲಾ ಆಡಂಬರದ ಜೀವನವನ್ನು ಮರೆತು ಮಕಾಡೆ ಮಲಗಿದೆ. ಅದೆಲ್ಲೋ ದೂರ ದೇಶದಲ್ಲಿ ಕಣ್ಣಿಗೆ ಕಾಣದ ವೈರಸ್ ಒಂದು ನಮ್ಮೆಲ್ಲ ಮೂರ್ತ ಕಾರ್ಯಗಳನ್ನು ಬುಡಮೇಲು ಮಾಡಿ, ಮಾನವ ಕುಲಕ್ಕೆ ವೈರಿಯಾಗಿ ನಿಂತಿದೆ. ಮನುಜಕುಲದ ಉಳಿವಿಗೆ ಮಾನ ವೀಯತೆಯೇ, ಮನುಷ್ಯತ್ವವೇ ಹೋರಾಡುವಂತಾಗಿದೆ. ವಿಶ್ವಾದ್ಯಂತ ಸಾವಿನ ರಣಕೇಕೆ ಬಾರಿಸುತ್ತಾ ದಿನದಿಂದ ದಿನಕ್ಕೆ ತನ್ನ ರಾಕ್ಷಸತನದ ರುದ್ರ ನರ್ತನವಾಡುತ್ತಿರುವ ಕೋವಿಡ್ ನಮಗೆ ನಿಜಕ್ಕೂ ಬದುಕೆಂದರೆ ಇಷ್ಟೇನಾ ಎಂಬ ಪಾಠ ಕಲಿಸುತ್ತಿದೆ.
ಕೊರೊನಾ ಜೀವಜಗತ್ತಿಗೆ ಸವಾ ಲೊಡ್ಡುವ ಜತೆಗೆ ಬದುಕಿನ ನೈಜ ಚಿತ್ರಣ ವನ್ನು ನಮ್ಮ ಕಣ್ಮುಂದೆ ತರುತ್ತಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ನಾವಿಂದು ನಮ್ಮದೇ ಪ್ರಕೃತಿಯೊಂದಿಗೆ ಬದುಕುವ ಯಾವ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ. ನಮ್ಮ ಒತ್ತಡದ ಜೀವನಕ್ಕೆ ಪ್ರಕೃತಿಯೇ ಬ್ರೇಕ್ ಹಾಕಿ ಶಿಕ್ಷೆ ನೀಡಿದೆ. ಅದುವೇ ಈ ಲಾಕ್‌ಡೌನ್. ಈ ಗೃಹಬಂಧನ ನಮ್ಮನ್ನು ಭೌತಿಕವಾಗಿ ಬಂಧಿಸಿಟ್ಟಿರಬಹುದು, ಆದರೆ ಮಾನಸಿಕ ವಾಗಿ ಭಾವನಾತ್ಮಕವಾಗಿ ಅಲ್ಲ. ಮನೆ ಯಿಂದ ಹೊರ ಹೋಗಲಾಗುತ್ತಿಲ್ಲ. ಆದರೆ ಮನದೊಳಗೆ ಇಳಿಯೋಣ ಆತ್ಮವಿಮರ್ಶೆ ಮಾಡಿಕೊಳ್ಳೋಣ. ವೇಗದ
ಬದುಕಿನ ಓಟದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳುವ ಭರದಲ್ಲಿ ನಾವು ಎಗ್ಗಿಲ್ಲದೆ ಎಸಗಿರುವ ಪಾಪಕೃತ್ಯಗಳೆಷ್ಟು ಎನ್ನುವು ದನ್ನು ಲೆಕ್ಕ ಹಾಕೋಣ. ಪ್ರಕೃತಿಗೆ ನಮ್ಮ ಆಸೆಗಳನ್ನು ಪೂರೈಸುವ ಶಕ್ತಿ ಇದೆಯೇ ವಿನಃ ಮನುಷ್ಯನ ದುರಾಸೆಗಳನ್ನಲ್ಲ. ಮನುಷ್ಯ ಪ್ರಾಣಿ ಪ್ರಕೃತಿಯ ಒಂದು ಭಾಗವಷ್ಟೇ. ನಮಗೆ ಪ್ರಕೃತಿಯ ಅನಿ ವಾರ್ಯತೆ ಇದೆಯೇ ವಿನಃ ಪ್ರಕೃತಿಗೆ ನಮ್ಮ ಅಗತ್ಯವಿಲ್ಲ. ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವು ದನ್ನು ಕೋವಿಡ್ ಸಾಬೀತುಪಡಿಸಿದೆ.
ಲಾಕ್‌ಡೌನ್‌ನಿಂದಾಗಿ 3 ತಿಂಗಳು ಮನೆಯಲ್ಲಿದ್ದ ನಾವು ಸದ್ಯ ಈಗ ಮಾಸ್ಕ್ ಹಾಕಿಕೊಂಡೇ ರಸ್ತೆಗಿಳಿದಿದ್ದೇವೆ. ಕಣ್ಣಿಗೆ ಕಾಣದ ಈ ವೈರಸ್‌ನ್ನು ಸಂಹರಿಸಲು ಕಣ್ಣಗೆ ಕಾಣುವ ಅದೆಷ್ಟೋ ದೇವರುಗಳು ಪ್ರತಿನಿತ್ಯ ಹೋರಾಡುತ್ತಲೇ ಇದ್ದಾರೆ. ಅದೇನೆ ಇರಲಿ ಪ್ರಕೃತಿಯ ಮುಂದೆ ನಾವು ಯಾರೂ ಕೆಮ್ಮಂಗಿಲ್ಲ ಬಿಡಿ.
ಮಹೇಶ್ ಎಂ.ಸಿ. ದಾವಣಗೆರೆ