Advertisement

ರಾಕೇಶ್ ಜುಂಜುನ್ ವಾಲಾ: ಸಿಎ ಆಗಬೇಕೆಂದಿದ್ದ ಹುಡುಗ ದಲಾಲ್ ಸ್ಟ್ರೀಟ್ ಅಧಿಪತಿಯಾಗಿದ್ದು ಹೇಗೆ?

11:36 AM Aug 14, 2022 | Team Udayavani |

ಮಣಿಪಾಲ: ಬಿಗ್ ಬುಲ್ ಆಫ್ ಇಂಡಿಯಾ ಎಂದೇ ಹೆಸರುವಾಸಿಯಾದ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ಅವರು ಇಂದು (ಆ.14) ಮುಂಬೈನಲ್ಲಿ ನಿಧನರಾದರು. 62 ವರ್ಷದ ಜುಂಜುನ್‌ವಾಲಾ ಅವರಿಗೆ ಹೃದಯಾಘಾತವಾಗಿತ್ತು ಎಂದು ವರದಿಯಾಗಿದೆ.

Advertisement

ಭಾರತದ ಸ್ವಂತ ವಾರೆನ್ ಬಫೆಟ್ ಎಂದೇ ಹೆಸರುವಾಸಿಯಾಗಿದ್ದ ರಾಕೇಶ್ ಜುಂಜುನ್ ವಾಲಾ ಹೈದರಾಬಾದ್ ನಲ್ಲಿ ಜನಿಸಿದವರು. ರಾಜಸ್ಥಾನಿ ಕುಟುಂಬದವರಾದ ರಾಕೇಶ್ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು.

ರಾಕೇಶ್ ಜುಂಜುನ್‌ವಾಲಾ ಅವರು ಕಾಲೇಜಿನಲ್ಲಿದ್ದಾಗ ಶೇರುಪೇಟೆಯಲ್ಲಿ ತೊಡಗಿಸಿಕೊಂಡರು. ಸಿಡೆನ್‌ಹ್ಯಾಮ್ ಕಾಲೇಜಿನಿಂದ ಪದವಿ ಪಡೆದ ನಂತರ, ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು. ಆದರೆ ಪದವಿಯನ್ನು ಪಡೆದ ನಂತರ ಅವರು ದಲಾಲ್ ಸ್ಟ್ರೀಟ್ ಕಡೆ ತೆರಳಲು ನಿರ್ಧರಿಸಿದರು. 1985 ರಲ್ಲಿ 5,000 ರೂಪಾಯಿಗಳನ್ನು ಬಂಡವಾಳವಾಗಿ ಹೂಡಿಕೆ ಮಾಡಿದ್ದ ರಾಕೇಶ್ ಸೆಪ್ಟೆಂಬರ್ 2018 ರ ಹೊತ್ತಿಗೆ, ಆ ಬಂಡವಾಳವು 11,000 ಕೋಟಿ ರೂ. ಗೆ ತಲುಪಿತ್ತು.

ಜುಂಜುನ್‌ವಾಲಾ ಅವರ ತಂದೆ ತನ್ನ ಸ್ನೇಹಿತರೊಂದಿಗೆ ಚರ್ಚಿಸುವುದನ್ನು ಕೇಳಿದ ನಂತರ ಶೇರು ಮಾರುಕಟ್ಟೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ತಂದೆ ತನಗೆ ಪತ್ರಿಕೆಗಳನ್ನು ನಿರಂತರವಾಗಿ ಓದುವಂತೆ ಹೇಳಿದ್ದರು, ಆದರೆ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ತಂದೆ ರಾಕೇಶ್ ಗೆ ಹಣಕಾಸಿನ ನೆರವು ನೀಡಲು ನಿರಾಕರಿಸಿದ್ದರು. ಅಲ್ಲದೆ ಸ್ನೇಹಿತರಿಂದಲೂ ಹಣ ಕೇಳಬಾರದು ಎಂದು ಸೂಚಿಸಿದ್ದರು.

ತನ್ನ ಸಹೋದರನ ಕ್ಲೈಂಟ್ ಗಳಿಂದ ಹಣ ಪಡೆದ ರಾಕೇಶ್, ಅವರಿಗೆ ಬ್ಯಾಂಕ್ ಬಡ್ಡಿಗಿಂತ ಹೆಚ್ಚಿನ ಆದಾಯದೊಂದಿಗೆ ಬಂಡವಾಳವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಅವರು 1986 ರಲ್ಲಿ ಟಾಟಾ ಟೀಯ 5,000 ಶೇರುಗಳನ್ನು ಪ್ರತಿ ಶೇರಿಗೆ 43 ರೂ. ನಂತೆ ಖರೀದಿಸಿದ್ದರು. ಕೇವಲ ಮೂರು ತಿಂಗಳೊಳಗೆ ಇದರ ಬೆಲೆ 143 ರೂ. ಗೆ ಏರಿತು. ಇದರಿಂದ ಅವರು ಮೂರು ಪಟ್ಟು ಹೆಚ್ಚು ಲಾಭ ಗಳಿಸಿದರು. ಇದು ಅವರ ಮೊದಲ ದೊಡ್ಡ ಮೂರು ವರ್ಷಗಳಲ್ಲಿ ಅವರು 20-25 ಲಕ್ಷ ಲಾಭ ಗಳಿಸಿದರು.

Advertisement

ಮುಂದಿನ ವರ್ಷಗಳಲ್ಲಿ ಜುಂಜುನ್ ವಾಲಾ ಅವರು ಟೈಟಾನ್, ಕ್ರಿಸಿಲ್, ಸೆಸಾ ಗೋವಾ, ಪ್ರಜ್ ಇಂಡಸ್ಟ್ರೀಸ್, ಅರಬಿಂದೋ ಫಾರ್ಮಾ ಮತ್ತು ಎನ್‌ಸಿಸಿಯಲ್ಲಿ ಯಶಸ್ವಿಯಾಗಿ ಹೂಡಿಕೆ ಮಾಡಿದರು. 2008 ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ, ಅವರ ಸ್ಟಾಕ್ ಬೆಲೆಗಳು 30% ರಷ್ಟು ಕುಸಿದವು, 2012 ರ ಹೊತ್ತಿಗೆ ನಷ್ಟದಿಂದ ಚೇತರಿಸಿಕೊಂಡರು.

ರಾಕೇಶ್ ಜುಂಜುನ್‌ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ ನ ಅಧ್ಯಕ್ಷರಾಗಿದ್ದಾರೆ. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೊಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಕಂಪನಿ ಲಿಮಿಟೆಡ್, ನಾಗಾರ್ಜುನಾ ಕಂಪನಿ ಲಿಮಿಟೆಡ್‌, ವೈಸರಾಯ್ ಹೋಟೆಲ್ಸ್ ಲಿಮಿಟೆಡ್ ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.

ಶೇರು ಮಾರುಕಟ್ಟೆಯ ತನ್ನ ಹಿಡಿತದ ಕಾರಣದಿಂದ ರಾಕೇಶ್ ಜುಂಜುನ್ ವಾಲಾ ಅವರನ್ನು “ಬಿಗ್ ಬುಲ್ ಆಫ್ ಇಂಡಿಯಾ” ಮತ್ತು “ಕಿಂಗ್ ಆಫ್ ಬುಲ್ ಮಾರ್ಕೆಟ್” ಎಂದು ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಅವರು ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ್ದರು. ಆಗಸ್ಟ್ 7ರಂದು ಇದರ ಮೊದಲ ಹಾರಾಟ ನಡೆದಿತ್ತು.

ಇದನ್ನೂ ಓದಿ:“ಕಿಂಗ್ ಆಫ್ ಬುಲ್ ಮಾರ್ಕೆಟ್” ಶೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ 5.8 ಶತಕೋಟಿ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ರಾಕೇಶ್ ಜುಂಜುನ್ ವಾಲಾ ಭಾರತದ 36 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

2020 ರಲ್ಲಿ, ರಾಕೇಶ್ ಅವರು ತಮ್ಮ ಸಂಪತ್ತಿನ 25 ಪ್ರತಿಶತವನ್ನು ದಾನಕ್ಕೆ ನೀಡಲು ಮುಂದಾದರು. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಆಶ್ರಯ, ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಮತ್ತು ಲೈಂಗಿಕ ಶೋಷಣೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಸಹಾಯ ಮಾಡುವ ಘಟಕ ಅರ್ಪಣ್ ಗೆ ಅವರು ಸಹಾಯ ಮಾಡುತ್ತಾರೆ. ಅಶೋಕ ವಿಶ್ವವಿದ್ಯಾಲಯ, ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ ಮತ್ತು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಗೆ ಬೆಂಬಲವಾಗಿದ್ದಾರೆ. ಅವರು ನವಿ ಮುಂಬೈನಲ್ಲಿ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದ್ದರು. ಇದರ ಮುಖಾಂತರ 15,000 ನೇತ್ರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡುವ ಉದ್ದೇಶ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next