Advertisement
ಇದು ಬಂಟ್ವಾಳದ ವೀರಯೋಧ ಚಂದ್ರಶೇಖರ ಎ. ಅವರು ಶ್ರೀಲಂಕಾದ ಯುದ್ಧ ಭೂಮಿಯಲ್ಲಿ ವೀರ ಮರಣವನ್ನೈದಿದ ಕಥೆ.
Related Articles
Advertisement
ಆಗ ಮಿಲಿಟರಿ ಸೆಲೆಕ್ಷನ್‌ನವರು ಬಂಟ್ವಾಳ (ಖಚಿತವಾಗಿ ಮಾಹಿತಿ ಸಿಕ್ಕಿಲ್ಲ) ಭಾಗಕ್ಕೆ ಆಗಮಿಸಿದ್ದರು. ಯಾವುದಾದರೂ ಉದ್ಯೋಗ ಬೇಕು ಎಂಬ ನಿರೀಕ್ಷೆಯಲ್ಲಿದ್ದ ಚಂದ್ರಶೇಖರ ಸ್ವಇಚ್ಛೆಯಿಂದ ಆಯ್ಕೆ ಶಿಬಿರಕ್ಕೆ ಹೋಗಿದ್ದರು. ದೈಹಿಕವಾಗಿ ಸದೃಢರಾಗಿದ್ದ ಕಾರಣಕ್ಕೆ ಆಯ್ಕೆಯಾದರು. ಮನೆಯವರು ಕೂಡ ಆಕ್ಷೇಪ ವ್ಯಕ್ತಪಡಿಸದೆ ದೇಶ ಸೇವೆಗೆ ಕಳುಹಿದರು. ಈ ಹಿಂದೆ ಅವರ ಕುಟುಂಬದ ಯಾರೂ ಮಿಲಿಟರಿಯಲ್ಲಿರಲಿಲ್ಲ. ಆದರೆ ಅವರ ಚಿಕ್ಕಪ್ಪನೊಬ್ಬ ಬ್ರಿಟಿಷ್ ಸರಕಾರದಲ್ಲಿ ಪೊಲೀಸ್ ಆಗಿದ್ದರು.
ಟೆಲಿಗ್ರಾಮ್ ಮೂಲಕ ಸುದ್ದಿ
ವೀರ ಮರಣವನ್ನಪ್ಪುವ ಸಂದರ್ಭ ಚಂದ್ರಶೇಖರಗೆ 33-34ರ ಹರೆಯ. ಯೌವನಾವಸ್ಥೆಯಲ್ಲಿದ್ದ ಅವರು ಬದುಕಿನಲ್ಲಿ ಸಾಧಿಸುವುದು ನೂರಾರಿತ್ತು. ದೇಶ ಸೇವೆಗೆ ಹೋಗಿದ್ದ ಮನೆ ಮಗ ಈ ರೀತಿ ವೀರ ಮರಣವನ್ನಪ್ಪಿದ ಸುದ್ದಿ ಟೆಲಿಗ್ರಾಮ್ ಮೂಲಕ ಬಂದಿತ್ತು. ಅದು ಬಿಟ್ಟರೆ ಅಂತಿಮವಾಗಿ ಅವರ ಮುಖವನ್ನು ನೋಡುವ ಅವಕಾಶವೂ ಸಿಕ್ಕಿಲ್ಲ ಎಂದು ಅಂದಿನ ಘಟನೆಗಳನ್ನು ನೆನೆಯುವಾಗ ಮನೆಮಂದಿಯ ಕಣ್ಣುಗಳು ತೇವಗೊಳ್ಳುತ್ತವೆ.
ಪತಿಯ ನಿಧನಾನಂತರ ಪತ್ನಿ ಇಂದಿರಾ ಇಬ್ಬರು ಹೆಣ್ಣು ಮಕ್ಕಳ ಜತೆ ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ನೆಲೆಸಿದ್ದಾರೆ. ಚಂದ್ರಶೇಖರ ಜತೆ ಕಳೆದ ಕೆಲವೇ ವರ್ಷಗಳ ನೆನಪುಗಳೊಂದಿಗೆ ಪತ್ನಿ ಇಂದಿರಾ ಜೀವನವನ್ನು ಸಾಗಿಸುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಿ ಸ್ವಾಭಿಮಾನದ ಬದುಕನ್ನೂ ನೀಡಿದ್ದಾರೆ.
ಕೊನೆಯ ಕ್ಷಣ ಶ್ರೀಲಂಕಾಕ್ಕೆ ತೆರಳಬೇಕಾಯಿತು
ದೇಶ ಸೇವೆಗೆ ಹೊರಟ 20ರ ಹರೆಯದ ತರುಣ ಚಂದ್ರಶೇಖರ ಪ್ರಾರಂಭದಲ್ಲಿ ರಾಂಚಿಯ ಭಾರತೀಯ ಸೇನಾ ಶಿಬಿರದಲ್ಲಿ ಸೇವೆಯನ್ನು ಪ್ರಾರಂಭಿಸಿ ಬಳಿಕ ಹೊಸದಿಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೇವೆಯ ಕೊನೆಯ ವರ್ಷಗಳಲ್ಲಿ ಹೈದರಾಬಾದ್ ಗೆ ವರ್ಗಾವಣೆಗೊಂಡಿದ್ದರು.
ಆಗ ವಿವಾಹವಾಗಿದ್ದ ಅವರು ಪತ್ನಿ ಇಂದಿರಾ ಚಂದ್ರಶೇಖರ ಅವರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ಸುಮಾರು 4 ವರ್ಷಗಳ ಕಾಲ ಹೈದರಾಬಾದ್‌ನಲ್ಲೇ ಇದ್ದು, ಬಳಿಕ ತುರ್ತು ಆದೇಶದ ಮೇರೆಗೆ ಚಂದ್ರಶೇಖರ ಶ್ರೀಲಂಕಾಕ್ಕೆ ಹೋಗುವಂತೆ ಸೇನೆಯ ಆದೇಶವಾಯಿತು. ಹೀಗಾಗಿ ಪತ್ನಿ, ಮಕ್ಕಳನ್ನು ಊರಿಗೆ ಕಳುಹಿಸಿ ಲಂಕೆಗೆ ತೆರಳಿದ್ದರು.
ಲಂಕೆಗೆ ಹೋದ ಕೆಲವೇ ದಿನಗಳಲ್ಲಿ ಅಘಾತಕಾರಿ ಸುದ್ದಿಯೊಂದು ಬಂತು. ಘಟನೆ ನಡೆದು 36 ವರ್ಷಗಳೇ ಕಳೆದಿವೆ. ಭಾರತೀಯ ಸೇನೆಯ ಕೆಲವು ಯೋಧರು ಕರ್ತವ್ಯ ಮುಗಿಸಿ ಸೇನಾ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೋರಾದ ಶಬ್ದ ಕೇಳಿಸಿತು. ಆಗ ನಮ್ಮ ಯೋಧರು ಜೀಪು ನಿಲ್ಲಿಸಿ ಕೆಳಗೆ ಧುಮುಕು ತ್ತಿದ್ದಂತೆ ಅಲ್ಲೇ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲೇ ವೀರ ಮರಣವನ್ನಪ್ಪಿದ್ದಾರೆ ಎಂಬ ಮಾಹಿತಿ ಸೇನೆಯಿಂದ ಬಂದುದಾಗಿ ಕುಟುಂಬದ ಮಂದಿ ತಿಳಿಸುತ್ತಾರೆ.
ಪತಿ ಹೈದರಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಾನು ಕೂಡ ನಾಲ್ಕು ವರ್ಷಗಳ ಕಾಲ ಅವರ ಜತೆಗಿದ್ದೆ. ಮುಂದೆ ಅವರು ಶ್ರೀಲಂಕಾಕ್ಕೆ ತೆರಳಬೇಕು ಎಂಬ ಸೂಚನೆ ಬಂದಾಗ ನಾನು ಊರಿಗೆ ಬರಬೇಕಾಯಿತು. ಅಂದಿನ ವಿಚಾರಗಳನ್ನು ವಿವರಿಸುವಷ್ಟು ಮಾಹಿತಿ ನನಗೆ ತಿಳಿದಿಲ್ಲ. –ಇಂದಿರಾ ಚಂದ್ರಶೇಖರ ಚಂದ್ರಶೇಖರ ಅವರ ಪತ್ನಿ
ಕಿರಣ್ ಸರಪಾಡಿ