Advertisement
“”ಅತ್ತೆ, ನನಗೆ ತೊನ್ನು ಬಂದಿದೆ. ಯಾವ ಪ್ರಾರಬ್ಧ ಇದು. ನಾನು ಯಾರಿಗೆ ಏನು ಮಾಡಿದ್ದೆ. ಯೌವನದ ಈ ದಿನಗಳಲ್ಲಿ ನನಗಿಂತಹ ಕೆಟ್ಟ ತೊನ್ನು ಬರಬಹುದೆ? ಜಯರಾಮನಿಗೆ ನಾನಿನ್ನೂ ಹೇಳಿಲ್ಲ. ಅದು ಬೆನ್ನಿನ ಬಲಭಾಗದಲ್ಲಿ ಕಾಣದ ಜಾಗದಲ್ಲಿ ಅಡಗಿ ಕುಳಿತಿದೆ. ನಾನು ತೋರಿಸಿದ್ದಲ್ಲದೆ ಅವನಿಗೆ ತಿಳಿಯುವ ಹಾಗಿಲ್ಲ, ಆದರೆ, ಅದು ಹರಡಿಕೊಂಡರೆ ನಾನೇನು ಮಾಡಲಿ?” ಎಂದಾಗ ಚಂದ್ರಮತಿ ಒಂದು ಕ್ಷಣ ವಿಚಲಿತಳಾಗಿದ್ದಳು. ಸದ್ಯಕ್ಕೇನೋ ಯಾರಿಗೂ ಕಾಣದ ದೇಹದ ಒಳಭಾಗಕ್ಕಿದೆ. ಮುಂದೆ ಅದು ಹರಡಿ ಮುಖವನ್ನು ಕೆಡಿಸಬಹುದು. ಅವಳ ರೂಪ-ಯೌವನವನ್ನು ವಿರೂಪಗೊಳಿಸುತ್ತದೆ. ಆಮೇಲೆ ಅವಳು ಜಯರಾಮನಿಗೆ ಬೇಡವಾದರೆ, ಅದೇನು ಸೋಂಕು ಕಾಯಿಲೆ ಅಲ್ಲ ಎನ್ನುವುದು ಅವನಿಗೂ ಗೊತ್ತು, ನನಗೂ ಗೊತ್ತು. ಆದರೆ, ಆ ವಿರೂಪ ಮುಖವನ್ನು ತನ್ನಿಂದಲೂ ನೋಡಲು ಸಾಧ್ಯವಿಲ್ಲ, ಜಯರಾಮನಿಂದಲೂ ನೋಡಲು ಸಾಧ್ಯವಿಲ್ಲ. ಇದುವರೆಗೆ ಸಂಪಾದಿಸಿದ ಗೌರವವೆಲ್ಲ ಮಣ್ಣುಪಾಲಾಗುತ್ತದೆ. ಬಿಂದೂವಿಗೆ ಜನ ತೊನ್ನು ಇರುವ ಹುಡುಗಿ ಎಂದೇ ಗುರುತ್ತಿಸುತ್ತಾರೆ. ಏನು ಮಾಡಲಿ, ಏನು ಹೇಳಲಿ ಬಿಂದುವಿಗೆ, ನೃತ್ಯದ ಮುಂದೆ ಮುಖಲಕ್ಷಣ ಕಟ್ಟಿಕೊಂಡು ಏನಾಗಬೇಕಾಗಿದೆ ಜಯು ಎಂದು ನಾನವನನ್ನು ಸಂತೈಸಬಲ್ಲೆ. ಆದರೆ, ಬಿಂದುವಿನ ಮಾವ ಒಪ್ಪುವುದಿಲ್ಲ. ಜಯರಾಮನ ಸುಂದರ ಬಣ್ಣಕ್ಕೆ, ಅವನ ಸೌಂದರ್ಯಕ್ಕೆ ಮಾರುಹೋಗಿದ್ದ ಅವನಪ್ಪ, ಹುಡುಕಿ ಹುಡುಕಿ ಬಿಂದೂವನ್ನು ಮನೆಸೊಸೆಯಾಗಿ ತಂದುಕೊಂಡಿದ್ದಾರೆ. ಈಗವಳಿಗೆ ತೊನ್ನು ಎಂದರೆ ಇದುವರೆಗೆ ನಾವಿಬ್ಬರೂ ಸಂಪಾದಿಸಿದ ಗೌರವಕ್ಕೆ ಏನಾಗುತ್ತದೆ ಚಂದು, ನೀನು ಸುಮ್ಮನಿರು. ಅವನಿಗೆ ಬೇರೆ ಹೆಣ್ಣು ನೋಡಿ ಮದುವೆ ಮಾಡೋಣ ಎನ್ನುತ್ತಾರೆಂದು ಚಂದ್ರಮತಿಗೆ ಗೊತ್ತಿದೆ. ಅವಳ ಯೋಚನೆ ಸಾಗುತ್ತಿರುವಾಗಲೇ ಬಿಂದು ಅಂದಳು,
Related Articles
ಕೇಳಿದಳು
“”ಯಾಕತ್ತೆ ಕರೆದಿರಲ್ಲ” ಎಂದಳು.
“”ಬಿಂದು ಜಯರಾಮನಿಗೆ ನಿನಗೆ ತೊನ್ನು ಬಂದಿರುವ ವಿಷಯ ಹೇಳಿದೆಯಾ?”
“”ಇಲ್ಲತ್ತೆ ನಾನಿನ್ನೂ ಹೇಳಿಲ್ಲ. ದಿನಾ ಕನ್ನಡಿಯಲ್ಲಿ ಬೆನ್ನು ನೋಡಿಕೊಳ್ಳುತ್ತಿದ್ದೇನೆ. ಬೆನ್ನಿನ ಭಾಗದಲ್ಲಿರುವುದರಿಂದ ಜಯ ಇನ್ನೂ ನೋಡಿಲ್ಲ. ಅದನ್ನು ನೋಡುತ್ತಿದ್ದರೆ ನನಗೆ ದಿಗಿಲಾಗುತ್ತದೆ. ನೀವು ನೋಡಿದರೆ ಏನು ಹೇಳುತ್ತಿರೋ ಸದ್ಯಕ್ಕಂತು ಅದಿನ್ನೂ ಹರಡಿಲ್ಲ. ಹರಡಿದಾಗ ನೋಡಿಕೊಳ್ಳೋಣ. ಇಲ್ಲಿರುವಷ್ಟು ದಿನ ನೆಮ್ಮದಿಯಾಗಿರೋಣ ಎಂದುಕೊಂಡಿದ್ದೇನೆ”.
“”ಯಾವತ್ತಾದರೂ ಒಂದು ದಿನ ಇರುವ ಸತ್ಯ ಜಯರಾಮನಿಗೆ ಗೊತ್ತಾಗಲೇ ಬೇಕಲ್ಲವೆ?”
“”ಗೊತ್ತಾಗ ಬೇಕು ಅತ್ತೆ ಅದು ಈಗಲೇ ಯಾಕೆ ಬೇಕು” ಎಂದು ಸುಮ್ಮನಾದಳು ಬಿಂದೂ. ಮತ್ತೆ ಸೊಸೆಯ ನೋವನ್ನು ಅರ್ಥಮಾಡಿಕೊಂಡಿದ್ದ ಚಂದ್ರಮತಿ ಅವಳನ್ನು ಕೆದಕಿ ಮತ್ತಷ್ಟು ನೋವು ಯಾಕೆ ಕೊಡಬೇಕು ಎಂದುಕೊಂಡು ಸುಮ್ಮನಾದಳು.
Advertisement
“”ಏನತ್ತೆ? ಯಾಕೆ ಸುಮ್ಮನಾದಿರಿ?”“”ನೋಡಮ್ಮ ಬಿಂದು, ನಿನ್ನ ಗಂಡ ಜಯರಾಮ ಸಿಂಧೂವಿನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದಾನೆ. ನಾನು ಮಾತ್ರ ಏನು. ನಾವು ಬದುಕಿರಬೇಕು ಎಂದು ನಿನಗಿದ್ದರೆ ಸಿಂಧೂವನ್ನು ನಮಗೆ ಬಿಟ್ಟುಕೊಡು”. ಗೆಜ್ಜೆಯ ನಿನಾದಕ್ಕೆ ಕತ್ತರಿ ಬಿತ್ತು. ತಾಳ ದಿಕ್ಕು ತಪ್ಪಿತು. ಸಿಂಧೂ ಎಲ್ಲಿತ್ತೋ ಓಡಿಬಂತು. ಎದೆಗವಚಿಕೊಂಡು ಮುದ್ದಿನ ಮಳೆಗರೆದಳು ಬಿಂದು. ಉಕ್ಕಿಬರುತ್ತಿದ್ದ ದುಃಖವನ್ನು ತಡೆಯಲು ಹೋಗಿ ಬಿಕ್ಕಳಿಕೆಯ ರೂಪದಲ್ಲಿ ಹೊರಬಿತ್ತು. ಪುಟ್ಟ ಮಗು ಸಿಂಧೂ ತನ್ನ ಅಮೃತಹಸ್ತದಿಂದ ಬಿಕ್ಕುತ್ತಿದ್ದ ಅಮ್ಮನ ಕಣ್ಣೊರೆಸಿದಳು. ಯಾಕೆ ಏನು ಎಂದು ಕೇಳುವ ವಯಸ್ಸಲ್ಲ ಕಿಶೋರಿಯದ್ದು. ಇನ್ನು ಎರಡುವರ್ಷ ಪೂರ್ತಿ ತುಂಬಿಲ್ಲದ ಚಿಕ್ಕಮಗು. ಏನು ಹೇಳಬಹುದು ಏನು ಕೇಳಬಹುದು. ಬಂದಂತೆ ಮತ್ತೆ ಆಟಕ್ಕೆ ಎದ್ದು ಹೋಯಿತು. ನೋಡುತ್ತಲೇ ಇದ್ದಳು ಚಂದ್ರಮತಿ. ಏನಾದರೂ ಹೇಳಬೇಕು, ಸಂತೈಸಬೇಕು ಎಂದರೆ ಪದಗಳೇ ಹೊರಡಲಿಲ್ಲ. ಬಿಂದುಗೆ ಮದುವೆಯಾಗಿ ಎರಡು ವರ್ಷವಾಗಿದೆ. ಆಗಲೇ ಅವಳು ಮನೆಮನಕ್ಕೆ ಎಷ್ಟೊಂದು ಹೊಂದಿಕೊಂಡು ಬಿಟ್ಟಿದ್ದಾಳೆ. ಎಷ್ಟು ಆಪ್ತವಾಗಿದ್ದಾಳೆ. ಜಯರಾಮನ ಮುದ್ದಿನ ಮಡದಿ. ಈಗಲೇ ಚಿಂತಿಸುವುದ್ಯಾಕೆ. ಅವಳು ಮನೆಬಿಟ್ಟು ಹೋಗುವ ಕಾಲಕ್ಕೆ ಜಯರಾಮನ ಮುಖನೋಡಿ ಸಿಂಧೂವನ್ನು ಬಿಟ್ಟು ಹೋಗುವ ಸಾಧ್ಯತೆಗಳಿವೆ. ಈಗಲೇ ಚಿಂತಿಸುತ್ತ ಕೂಡುವುದರಿಂದ ಏನು ಫಲ, ಕಾಯೋಣ ಮುಂದೇನು ನಡೆಯುತ್ತದೆ ಎನ್ನುವುದರ ಬಗ್ಗೆ ಚಿಂತಿಸೋಣ ಎಂದುಕೊಂಡು ಚಂದ್ರಮತಿ ಒಳಗೆ ಬಂದಳು. ಒಂದೆರಡು ತಿಂಗಳ ಮೇಲಾಗಿತ್ತು. ಬಿಂದೂ ಅತ್ತೆಯ ಬಳಿಗೆ ಬಂದು ಹೇಳಿದಳು, ಈಗವಳು ತುಂಬಾ ದಣಿದಂತೆ ಕಾಣುತ್ತಿದ್ದಳು. ಅವಳು ವಿಷಯವನ್ನು ಜಯರಾಮನಿಗೆ ಹೇಳಿರಬಹುದೇ ಎಂದು ಯೋಚನೆ ಬಂತು ಚಂದ್ರಮತಿಗೆ. “”ಅತ್ತೆ ತೊನ್ನು ಕಿವಿಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಇಷ್ಟರಲ್ಲೇ ಜಯ ನೋಡಿ ಬಿಡುತ್ತಾನೆ. ಅವನು ನೋಡುವುದರ ಮೊದಲೆ ತಿಳಿಸಿಬಿಡುತ್ತೇನೆ. ಆಮೇಲಿನ ಕಥೆ ನನಗೆ ತಿಳಿದೇ ಇದೆ. ನೀವು ಮಾತ್ರ ಧೈರ್ಯವಾಗಿರಬೇಕು” ಎಂದಳು. ಹಾಗಾದರೆ ಅವಳಿನ್ನೂ ಜಯರಾಮನಿಗೆ ಹೇಳಿಲ್ಲ. ಒಳ್ಳೆಯದೇ ಆಯಿತು. ಅವನ ಕಣ್ಣಿಗೆ ಬಿದ್ದಾಗ ಏನು ಹೇಳುತ್ತಾಳ್ಳೋ ಹೇಳಲಿ ಸದ್ಯಕ್ಕೆ ತಿಳಿಸುವುದು ಬೇಡ. ಅವಳೊಂದಿಷ್ಟು ದಿವಸ ನೆಮ್ಮದಿಯಾಗಿ ಈ ಮನೆಯಲ್ಲೇ ಇರಲಿ, ಮಗು ಸಿಂಧೂಗೆ ತಾಯಿಯಾಗಿ ಎಂದುಕೊಂಡ ಚಂದ್ರಮತಿ ಅಂದಳು, “”ಬಿಂದೂ ಈಗೇನು ಹೇಳುವುದು ಬೇಡ. ನನ್ನ ಮುಂದೆ ನೀನು ಬಂದು ನಿಂತಾಗ, ನೀನು ಜಯರಾಮನಿಗೆ ಹೇಳಿಬಿಟ್ಟಿರಬಹುದು, ಅದಕ್ಕಾಗೆ ದಣಿದಿದ್ದೀಯ ಎಂದುಕೊಂಡಿದ್ದೆ. ನೀನಿನ್ನೂ ಹೇಳಿಲ್ಲ. ಬಿಡು ಹೇಳುವುದು ಬೇಡ. ಒಂದಿಷ್ಟು ದಿನ ಮಗುವಿನ ಜೊತೆ ನೆಮ್ಮದಿಯಾಗಿರು. ನೃತ್ಯ ಮಾಡುತ್ತ ನಿನ್ನ ಆಲೋಚನೆಗಳನ್ನೆಲ್ಲ ಅದರಲ್ಲಿ ಹೂತು ಬಿಡು, ಮುಂದೇನಾಗುತ್ತದೋ ನೋಡೋಣ. ನನಗೇನು ನಿನ್ನನ್ನು ಈ ಮನೆಯಿಂದ ದಾಟಿಸಲು ಇಷ್ಟವಿಲ್ಲ. ಜಯರಾಮ ತೊನ್ನು ಬಂದಿರುವ ನಿನ್ನನ್ನು ಒಪ್ಪಿಕೊಂಡರೆ ನಾನು ಒಪ್ಪಿಕೊಂಡಂತೆ ಎಂದು ತಿಳಿ. ಜೀವನದಲ್ಲಿ ಏನೇನೋ ಅನುಭವಿಸಿಬೇಕಾಗಿ ಬರುತ್ತದೆ. ಅವು ನಮಗೇನೂ ಮುನ್ಸೂಚನೆ ಕೊಡುವುದಿಲ್ಲ. ಇವತ್ತು ನಿನಗೆ ತೊನ್ನು ಬಂದಿರಬಹುದು. ನಾಳೆ ನನಗೋ ಜಯರಾಮನಿಗೋ ಇಲ್ಲ , ನನ್ನ ಪತಿಗೋ ಇನ್ನೇನೋ ಕಾದಿರಬಹುದು ಯಾರಿಗೆ ಗೊತ್ತು. ನೀನು ನಮ್ಮ ಮನೆಗೆ ಬಂದ ಸೊಸೆ. ಮುದ್ದಾದ ಮಗು ಸಿಂಧೂವನ್ನು ಕೊಟ್ಟಿದ್ದೀಯ. ಜಯರಾಮ ನಿನ್ನನ್ನು ಬಿಟ್ಟರೆ ಮಗು ತಾಯಿಯಿಂದ ವಂಚಿತವಾಗುತ್ತದೆ. ಇದನ್ನು ನಾನು ಹೆಣ್ಣಾಗಿ ಸಹಿಸಬಹುದೇ ಹೇಳು. ಸದ್ಯಕ್ಕಂತು ಬಿಟ್ಟು ಬಿಡು ಆ ಯೋಚನೆಯನ್ನು”. ಛೆ! ಅತ್ತೆ ಧರ್ಮಬೀರು ಅವರ ಮನಸ್ಸು ನನ್ನನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಆದರೆ ಜಯರಾಮ ಒಪ್ಪುತ್ತಾನೆ ಎಂದು ಹೇಳುವ ಹಾಗಿಲ್ಲ. ಎಷ್ಟು ದಿವಸಗಳಿಂದ ಅವನ ಮುಂದೆ ನಿಂತು ಹೇಳಬೇಕು ಎಂದುಕೊಂಡಿದ್ದೆ. ಆದರೆ ಅವನ ಮುಂದೆ ನಿಂತು ಮಾತನಾಡಲು ಹೆದರಿಕೆಯಾಗುತ್ತಿತ್ತು. ಈಗ ಬೇಡ, ಆಗ ಬೇಡ ಎಂದು ಸುಮ್ಮನೆ ಹಿಂದಕ್ಕೆ ಬರುತ್ತಿದ್ದೆ. ಪಾಪ! ಜಯನಿಗೆ ಮೋಸಮಾಡುತ್ತಿದ್ದೇನೆ. ಮುಗ್ಧ ಅವನು ಇನ್ನೂ ತನ್ನ ತೊನ್ನಿನ ಕಡೆಗೆ ಗಮನ ಹರಿಸಿಲ್ಲ. ಅತ್ತೆ ಏನೋ ಹೇಳುತ್ತಾರೆ ಜಯನಿಗೆ ಹೇಳಬೇಡ ಎಂದು ನನ್ನ ಮನಸ್ಸು ಕುದಿಯುತ್ತಿದೆ. ಹೇಳಿಬಿಟ್ಟರೆ ಅಲ್ಲಿಗೆ ಸಮಾಧಾನ, ಆಮೇಲೆ ಏನಾಗುತ್ತದೋ ಆಗಲಿ ಎಂದುಕೊಂಡು ಅತ್ತೆಯಿಂದ ಬೀಳ್ಕೊಂಡು ಬಂದ ಬಿಂದೂ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಳು. ಅತ್ತೆ ಎಂದಂತೆ ಅದೆಂಥದ್ದೋ ಸಮಾಧಾನ, ನೆಮ್ಮದಿ. ಸಿಂಧೂ ಬಂದಳು ಹತ್ತಿರಕ್ಕೆ, ಅವಳನ್ನು ಬಾಚಿ ತಬ್ಬಿಕೊಳ್ಳುತ್ತಿದ್ದಂತೆ ದುಃಖ ಮಾಯವಾಗಿ ದಣಿವು ಪರಿಹಾರವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಳು ಬಿಂದು. ಸಿಂಧೂವನ್ನು ಒಯ್ಯಲು ಶಾಲೆಯ ವ್ಯಾನ್ ಬಂತು. ಎಲ್ಲಿಗೋ ಹೋಗಿದ್ದ ಜಯರಾಮನ ಕಾರು ಅಂಗಳಕ್ಕೆ ಬಂದು ನಿಂತುಕೊಂಡಿತು. ಅವನು ಸರಸರನೆ ಮನೆಯೊಳಗೆ ನಡೆದು ಸೋಫಾದ ಮೇಲೆ ದೊಪ್ಪನೆ ಕುಳಿತುಕೊಂಡ. ಒಳಗೆ ಬಂದ ಬಿಂದೂ ಅವನ ಹತ್ತಿರಕ್ಕೆ ಕುಳಿತುಕೊಂಡಳು. ಅವನು ಮೌನವಾಗಿದ್ದ. ಯಾವತ್ತೂ ತನ್ನ ನೃತ್ಯದ ಉಡುಗೆ ಯನ್ನು ನೋಡಿ ಖುಶಿ ಪಡುತ್ತಿದ್ದವನು ಇವತ್ತು ಬಿಂದೂವಿನತ್ತ ತಿರುಗಿ ನೋಡಲಿಲ್ಲ. ಅವಳು, “”ಜಯ” ಎಂದು ಕೂಗಿದಳು, ಹೇಳಿಯೇ ಬಿಡುತ್ತೇನೆ ಎಂದುಕೊಂಡಳು. ನಾಲಿಗೆ ಅಲುಗಾಡಿತೇ ಹೊರತು ಧ್ವನಿ ಹೊರಬರಲಿಲ್ಲ. ಶತಪ್ರಯತ್ನ ಮಾಡಿದಳು, ನಾಲಿಗೆ ತಣ್ಣಗೆ ಕುಳಿತಿತ್ತು. ಛೇ ಏನಾಗಿದೆ ನನಗೆ ನನ್ನ ಗಂಡ ಜಯ ಅವನು, ಅವನ ಮುಂದೆ ಹೇಳಿಕೊಳ್ಳುವುದಕ್ಕೆ ಇಷ್ಟು ಚಡಪಡಿಕೆ ಏಕೆ? ನೊಂದು ಕೊಂಡಳು ಬಿಂದೂ. ಕಣ್ಣಲ್ಲಿ ನೀರು ಹರಿಯಿತು. ಜಯರಾಮನ ಮುಖದಲ್ಲಿ ದುಗುಡ ತುಂಬಿಕೊಂಡಿತ್ತು, ಅವನೂ ಏನನ್ನೋ ಹೇಳಲು ತವಕಿಸುತ್ತಿರುವಂತೆ ಕಂಡಿತು ಬಿಂದೂಗೆ, ಏನಿರಬಹುದು ಎಂದು ಯೋಚಿಸಿದಳು, ಅವನು ಏನು ಹೇಳುತ್ತಾನೋ ಕೇಳ್ಳೋಣ, ಮುಂದೆ ತನ್ನ ಮಾತು ಇದ್ದೇ ಇದೆ ಎಂದುಕೊಂಡಳು. ಅಷ್ಟರಲ್ಲಿ ಜಯರಾಮ, “”ಈಗ ಬರುತ್ತೇನೆ” ಎಂದು ಎದ್ದು ಹೋದ. ಏಕೆ ಏನೆಂದು ಗೊತ್ತಾಗಲಿಲ್ಲ ಬಿಂದೂಗೆ. ಅವಳು ತೆಪ್ಪಗೆ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂದು ಯೋಚಿಸುತ್ತ ಕುಳಿತುಕೊಂಡಳು. ಅತ್ತೆ ಬಂದು “”ಜಯರಾಮ ಬಂದಿದ್ದನಲ್ಲ ಎಲ್ಲಿ ಹೋದ” ಎಂದು ಕೇಳಿದರು. “”ಗೊತ್ತಿಲ್ಲ” ಎಂದಳು ಬಿಂದೂ, ಮನಸ್ಸಿನ ಸಮಾಧಾನಕ್ಕಾಗಿ ಬಿಚ್ಚಿಟ್ಟಿದ್ದ ಗೆಜ್ಜೆಯನ್ನು ಕಟ್ಟಿಕೊಂಡಳು. ಎದ್ದು ಹೋಗುವ ಮೊದಲು ಬಿಂದೂಗೆ ಎದುರಿಗೆ ಒಂದು ಸೀಸೆ ಬಿದ್ದಿರುವುದು ಕಂಡಿತು. ಏನೆಂದು ನೋಡಲು ಕೈಗೆತ್ತಿಕೊಂಡಳು, ಅದರಲ್ಲಿ “ತೊನ್ನು ನಿವಾರಣಾ ಔಷಧಿ’ ಎಂದು ಬರೆದಿತ್ತು. “”ಅರೆ! ಜಯರಾಮನಿಗೆ ತನಗೆ ತೊನ್ನು ಇದೆ ಎಂದು ಹೇಗೆ ಗೊತ್ತಾಯಿತು. ಅವನು ಕಿವಿಯ ಸಂಧಿಯಲ್ಲಿ ಇಣುಕುತ್ತಿರುವ ತೊನ್ನನ್ನು ನೋಡಿದನೆ?” ಎಂದು ಯೋಚಿಸಿದಳು, ಅಲ್ಲೆ ನಿಂತಿದ್ದ ಅತ್ತೆ ಎಂದರು, “”ಜಯರಾಮನಿಗೆ ನಾನೇ ನಿನ್ನೆ ದಿನ ರಾತ್ರಿಹೊತ್ತಿನಲ್ಲಿ ಹೇಳಿದ್ದೆ. ಮೌನವಾಗಿ ಕೇಳಿಸಿಕೊಂಡ. ಉತ್ತರ ಕೊಡಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ನಾನೇ ಕೇಳಿದೆ, ತೊನ್ನು ಹುಡುಗಿಯ ಜೊತೆಯಲ್ಲಿ ಬಾಳ್ವೆ ಮಾಡ್ತೀಯಾ ಎಂದೆ. ನಿನ್ನ ಅಭಿಪ್ರಾಯ ತಿಳಿಸಿಬಿಡು ನಾಳೆ ಅದು ಮುಖದ ತುಂಬ ಹರಡ ಬಹುದು, ನಿನಗೆ ಜಿಗುಪ್ಸೆ ಬರಿಸಬಹುದು, ಏನಿದ್ದರೂ ನಿರ್ದಾಕ್ಷಿಣ್ಯವಾಗಿ ಹೇಳಿಬಿಡು ಎಂದೆ. ಬಹಳ ಹೊತ್ತಿನ ನೀರವದ ನಂತರ ಅವನು ಮಾತನಾಡಿದ”. “”ಅಮ್ಮ ಬಿಂದೂ ಪ್ರತಿಭಾವಂತೆ, ನನ್ನ ಹೆಂಡತಿ ಅವಳು ಸೌಖ್ಯವಾಗಿದ್ದಾಗ ಅವಳಿಂದ ಒಂದು ಮಗು ಪಡೆದಿದ್ದೇನೆ. ಜೀವನ ಮಾಡದಿದ್ದರೆ ಅಷ್ಟೆ ಹೋಯ್ತು, ಒಂದು ಮಗುವನ್ನು ಕೊಟ್ಟಿದ್ದಾಳಲ್ಲ. ತೊನ್ನಿಗೂ ಈಗ ಔಷಧಿ ಇದೆಯಂತಲ್ಲ, ಅದು ಚರ್ಮವ್ಯಾಧಿ ಕಾಯಿಲೆಯಲ್ಲ. ಕಿಣ್ವದ ಬದಲಾವಣೆ ಅಷ್ಟೆ ಎಂದು ಹೇಳಿದ್ದ . ಈಗ ನೋಡಿದರೆ ಔಷಧಿ ತಂದೇ ಬಿಟ್ಟಿದ್ದಾನೆ. ನಿನ್ನನ್ನು ಬಿಟ್ಟು ಬಿಡುವುದು ಅಷ್ಟು ಸುಲಭವಲ್ಲ ಬಿಂದೂ, ಅವನಿಗಿರಲಿ ನನಗೂ ಅಷ್ಟೆ. ನೀನು ಎಲ್ಲೆಲ್ಲಿ ತೊನ್ನಿನ ಕಲೆಗಳು ಕಾಣುತ್ತಿವೆಯೋ ಅಲ್ಲಿಗೆ ಔಷಧಿ ಹಚ್ಚಿಕೋ, ಅವನು ಬರುತ್ತಿದ್ದಂತೆ ತಿಂಡಿಕೊಡುತ್ತೇನೆ” ಎಂದರು. ಗೆಜ್ಜೆ ಕಟ್ಟಿಕೊಂಡಿದ್ದ ಬಿಂದೂ ಭರತನಾಟ್ಯ ಮಾಡೋಣವೆಂದು ಎದ್ದುನಿಂತಳು. ಮೈಮನಸ್ಸಿಗೆ ಅದೆಂತಹ ಲವಲವಿಕೆ ಅತ್ತೆಯ ಮಾತು ಕೇಳಿ, ಜಯ ತಂದುಕೊಟ್ಟ ಔಷಧ ನೋಡಿ, ಅದೇ ಲವಲವಿಕೆಯಲ್ಲಿ ಗೆಜ್ಜೆ ಕಟ್ಟಿಕೊಂಡ ಬಿಂದೂ ನೃತ್ಯ ಕೊಠಡಿಗೆ ನಡೆದು, “ಧಿಮಿಕಿಟ ದಿತ್ತೂಂ ಧಿತ್ತೋಂ ತದಿಕಿಟ ತೋಂ ದಿತ್ತೋಂ’ ಎಂದು ಕುಣಿಯತೊಡಗಿದಳು. ಅಂಗಳದಲ್ಲಿ ಅರಳಿ ನಿಂತ ಹೂಗಳು ಬಿರಿದಂತೆ ಕಂಡಿತು. ಹಸುರೆಲೆಗಳು ಕುಣಿಯುತ್ತಿರುವಂತೆನಿಸಿತು. ಹಕ್ಕಿಗಳು ರೆಕ್ಕೆ ಬಡಿಯುತ್ತ ಇದ್ದಲ್ಲೇ ಮತ್ತೆ ಮತ್ತೆ ಸುತ್ತ ತೊಡಗಿದವು. ನೋಡುತ್ತ ಚಂದ್ರಮತಿ ಅಂದುಕೊಂಡಳು. ಬಿಂದೂಗೆ ತೊನ್ನು ಬಂದರೇನಂತೆ ಅವಳ ನೃತ್ಯಕ್ಕೆ ಅದು ತಟ್ಟುವುದಿಲ್ಲ. ಬಿಂದೂ ಸಿಂಧೂವಿನ ಜೊತೆಗೆ ಇಲ್ಲೇ ಇರುತ್ತಾಳೆ, ಇರಲಿ ಎಂದುಕೊಂಡಳು. ಬಿಂದೂವಿನ ಮನಸ್ಸು ಮಲ್ಲಿಗೆಯಾಯ್ತು, ಗೆಜ್ಜೆ ಕುಣಿತದಲ್ಲಿ ತನ್ನನ್ನೇ ತಾನು ಮರೆತಳು. ಭಾವ ಶೂನ್ಯವಾಯ್ತು. ಎಲ್ಲೆಲ್ಲೂ ನಗು ಉಕ್ಕಿ ಹರಿಯುವಂತೆ ಕಂಡಿತು. ಆತ್ತೆಯೂ ನೋಡುತ್ತಿದ್ದಾಳೆ. ಪ್ರೇಮಾ ಭಟ್