Advertisement

ಸವಿರುಚಿ ಕ್ಯಾಂಟೀನ್‌: ಸಂಚಾರದ ಬದಲು ಸ್ಥಿರ ವಹಿವಾಟು

10:26 AM Oct 15, 2022 | Team Udayavani |

ಮಹಾನಗರ: ರಾಜ್ಯ ಸರಕಾರದ 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದಿಂದ ಆರಂಭಿಸಲಾಗಿರುವ ಸವಿರುಚಿ ಸಂಚಾರ ಕ್ಯಾಂಟೀನ್‌ ಯೋಜನೆ ಹಲವು ಕಾರಣಗಳಿಗಾಗಿ ತನ್ನ ಮೂಲ ಸ್ವರೂಪದಿಂದ ವಿಮುಖವಾಗಿದ್ದು, ಸದ್ಯ ಸಂಚಾರದ ಬದಲು ಒಂದೇ ಕಡೆ ಸ್ಥಿರವಾಗಿದೆ.

Advertisement

ಮಹಿಳೆಯರಿಗೆ ಸ್ವೋದ್ಯೋಗ ಕೈಗೊಳ್ಳುವ ಉದ್ದೇಶದಿಂದ ಆರಂಭಿಸಿರುವ ಯೋಜನೆ ಇದಾಗಿದ್ದು, ಮಹಿಳೆಯರಿಂದಲೇ ತಯಾರಿಸಲ್ಪಟ್ಟ ಉತ್ತಮ ಗುಣಮಟ್ಟದ ಆಹಾರ ವನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುವುದು ಉದ್ದೇಶವಾಗಿದೆ. ಆರಂಭಿಕ ದಿನಗಳಲ್ಲಿ ಯೋಜನೆಯ ಮೂಲ ಆಶಯಕ್ಕೆ ತಕ್ಕಂತೆ ಕಾರ್ಯಾಚರಿಸಿತ್ತಾದರೂ ಕೊರೊನಾ ಲಾಕ್‌ಡೌನ್‌ ಬಳಿಕ ಇತರ ಹೊಟೇಲ್‌, ಕ್ಯಾಂಟೀನ್‌ಗಳಂತೆ ಸವಿರುಚಿ ಕ್ಯಾಂಟೀನ್‌ ಕೂಡ ನಷ್ಟ ಅನುಭವಿಸಬೇಕಾಗಿ ಬಂತು.

ಜಿಲ್ಲೆಗೆ ಒಂದೇ ಕ್ಯಾಂಟೀನ್‌

ಯೋಜನೆಯಲ್ಲಿ ಪ್ರತೀ ಜಿಲ್ಲೆಗೆ ಒಂದು ಕ್ಯಾಂಟೀನ್‌ ಲಭ್ಯವಾಗಿದೆ. ಜಿಲ್ಲೆಯ ವಿವಿಧೆಡೆ ಸರಕಾರಿ ಕಾರ್ಯಕ್ರಮಗಳು ನಡೆಯುವ ಸ್ಥಳ, ಸರಕಾರಿ ಕಚೇರಿ ಸಂಕೀರ್ಣಗಳು ಇರುವಲ್ಲಿಗೆ ಹೋಗಿ ವ್ಯಾಪಾರ ನಡೆಸಬೇಕು ಎನ್ನುವುದು ಯೋಜನೆಯ ಉದ್ದೇಶ. ಅದರಂತೆ ಆರಂಭಿಕ ದಿನಗಳಲ್ಲಿ ಜಿ.ಪಂ. ಆವರಣದಲ್ಲಿ ಕ್ಯಾಂಟೀನ್‌ ಕಾರ್ಯಾಚರಿಸುತ್ತಿತ್ತು. ಆದರೆ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಅಲ್ಲಿಂದ ಸ್ಥಳಾಂತರಗೊಂಡಿತ್ತು. ಬರಬರುತ್ತ ವಾಹನಕ್ಕೆ ಹಾಕುವ ಇಂಧನ ದರದಲ್ಲಿ ಏರಿಕೆ, ನಿರ್ವಹಣ ವೆಚ್ಚ ಹೆಚ್ಚಳ, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಮೊದಲಾದ ಕಾರಣದಿಂದಾಗಿ ಬಿಜೈಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸ್ತ್ರೀಶಕ್ತಿ ಭವನ ಬಳಿಯೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.

ವ್ಯಾಪಾರದಲ್ಲಿ ಪೈಪೋಟಿ

Advertisement

ಪ್ರಸ್ತುತ ಕ್ಯಾಂಟೀನ್‌ ಕಾರ್ಯಾಚರಿಸು ತ್ತಿರುವ ಸ್ಥಳದ ಪರಿಸರದಲ್ಲಿ ನಾಲ್ಕೈದು ಫಾಸ್ಟ್‌ಫುಡ್‌ ಕ್ಯಾಂಟೀನ್‌ಗಳಿದ್ದು, ಅವುಗಳ ಜತೆ ಪೈಪೋಟಿಯಲ್ಲಿ ವ್ಯಾಪಾರ ನಡೆಸಬೇಕಿದೆ. ಸದ್ಯ ಸವಿರುಚಿ ಕ್ಯಾಂಟೀನನ್ನು ಒಕ್ಕೂಟದ ಸದಸ್ಯೆ ಸುಜಾತಾ ಅವರು ನಡೆಸುತ್ತಿದ್ದಾರೆ. ಬೆಳಗ್ಗೆ 7.30ರಿಂದ ರಾತ್ರಿ 10 ಗಂಟೆ ವರೆಗೆ ಕಾರ್ಯಾಚರಿಸುತ್ತದೆ. ಬೆಳಗ್ಗೆ ಪೂರಿ, ಬನ್ಸ್‌, ಪಲಾವ್‌, ಪರೋಟ, ಇಡ್ಲಿ-ದೋಸೆ ಮಧ್ಯಾಹ್ನಕ್ಕೆ ವೆಜ್‌-ನಾನ್‌ ವೆಜ್‌ ಊಟ, ಸಂಜೆ ಬಳಿಕ ಫಾಸ್ಟ್‌ಫುಡ್‌ ದೊರೆಯುತ್ತದೆ. ಪೈಪೋಟಿಯ ನಡುವೆಯೂ 5 ಸಾವಿರದಿಂದ 8 ಸಾವಿರದವರೆಗೆ ವ್ಯಾಪರವಾಗುತ್ತದೆ ಎನ್ನುತಾರೆ ಸುಜಾತಾ.

4.75 ಲಕ್ಷ ರೂ.ಸಾಲ ಬಾಕಿ

ಸವಿರುಚಿ ಸಂಚಾರಿ ಕ್ಯಾಂಟೀನ್‌ ವಾಹನ ಮತ್ತು ಇತರ ವಸ್ತುಗಳ ಖರೀದಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗಿತ್ತು. ಇದರಲ್ಲಿ ಈಗಾಗಲೇ 5.25 ಲಕ್ಷ ರೂ. ಸಾಲ ಮರುಪಾವತಿಯಾಗಿದ್ದು, 4.75 ಲಕ್ಷ ರೂ. ಬಾಕಿ ಇದೆ. ತಿಂಗಳಿಗೆ 15 ಸಾವಿರ ರೂ. ಪಾವತಿಸಬೇಕಾದ ಅಗತ್ಯವಿದ್ದು, ಸದ್ಯ ಪಾವತಿ ಸರಿಯಾಗಿ ಮಾಡುತ್ತಿದ್ದಾರೆ ಎನ್ನುತ್ತಾರೆ ನಿಗಮದ ಅಧಿಕಾರಿ.

ಉತ್ತಮ ವ್ಯವಹಾರ: ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದಿಂದ ಸವಿರುಚಿ ಕ್ಯಾಂಟೀನ್‌ ನಿರ್ವಹಿಸಲಾಗುತ್ತಿದ್ದು, ಪ್ರಸ್ತುತ ಬಿಜೈನಲ್ಲಿರುವ ಒಕ್ಕೂಟದ ಕಚೇರಿ ಬಳಿ ಕಾರ್ಯಾಚರಿಸುತ್ತಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಕ್ಯಾಂಟೀನ್‌ನಲ್ಲಿ ವ್ಯವಹಾರ ಉತ್ತಮವಾಗಿದೆ. ಪ್ರತಿ ಜಿಲ್ಲೆಗೆ ಇನ್ನೊಂದು ಕ್ಯಾಂಟೀನ್‌ ಒದಗಿಸಲು ಸರಕಾರ ಮುಂದಾಗಿದೆ. – ಟಿ. ಪಾಪಾ ಬೋವಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

„ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next