ಚಪ್ಪಟೆ ಹುಳುಗಳ ಜಾತಿಗೆ ಸೇರಿರುವ ಈ ಹುಳು ತೇವಾಂಶ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಪ್ಲಾಟಿಹೆಲ್ಮೇಂಥಿಸ್ ವಂಶಕ್ಕೆ ಸೇರಿದ್ದು. ವೈಜ್ಞಾನಿಕವಾಗಿ ಇವುಗಳನ್ನು ಬೈಪ್ಯಾಲಿಯಂ ಎನ್ನುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಬೈ-ಎಂದರೆ ಎರಡು, ಪ್ಯಾಲಿಯಾ-ಪಿಕಾಸಿ ಆಕಾರ ಅಥವಾ ಸುತ್ತಿಗೆ ಆಕಾರ ಎಂದು ಅರ್ಥೈಸಿಕೊಳ್ಳಲಾಗುತ್ತದೆ.
ಬಹಳ ವಿಷಕಾರಿಯಾಗಿರುವ ಇದು ತನ್ನ ನುಣುಪಾದ ದೇಹದ ಮೇಲೆ ಸಿಂಬಳದಂತ ವಿಷಯುಕ್ತ ಲೋಳೆಯನ್ನು ಸ್ರವಿಸಿ ವೈರಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತವೆ. ಇದು ಬಸವನ ಹುಳು, ಎರೆಹುಳುಗಳನ್ನು ಆಹಾರವಾಗಿ ಸೇವಿಸುತ್ತದೆ.
ಈ ಹುಳುವಿನ ವಿಶೇಷತೆ ಏನೆಂದರೆ ಇದರ ದೇಹವನ್ನು ಬೇರ್ಪಡಿಸಿದರೆ ತುಂಡಾದ ಭಾಗ ಮತ್ತೆ ಬೆಳೆಯುತ್ತಾ ಸ್ವತಂತ್ರ ಜೀವನವನ್ನು ನಡೆಸುತ್ತದೆಯೇ ಹೊರತು ಸಾಯುವುದಿಲ್ಲ.
ವಿಷಕಾರಿ ಲೋಳೆಯನ್ನು ಸ್ರವಿಸುವುದರಿಂದ ಹೆಚ್ಚಿನ ಜೀವಿಗಳ ಇದರ ಸಹವಾಸಕ್ಕೆ ಹಿಂಜರಿಯುತ್ತವೆ. ಬಹಳ ಚಿಕ್ಕದಾಗಿರುವ ಇವುಗಳು ಮೆಲ್ಲಗೆ ಚಲಿಸುತ್ತವೆ. ಚಲಿಸುವಾಗ ಸಾಗಿದ ದಾರಿಯಲ್ಲಿ ಬೆಳ್ಳಿಯ ಬಣ್ಣದ ಅಚ್ಚೊತ್ತುತ್ತವೆ. ಮಳೆಗಾಲದಲ್ಲಿ ಪಾತ್ರೆಗಳನ್ನು ಬಳಸುವಾಗ ಇವುಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ.
ಇವುಗಳ ದೇಹದಲ್ಲಿ ಯಾವುದೇ ರೀತಿಯ ರಕ್ತಪರಿಚಲನೆ, ಅಸ್ಥಿಪಂಜರ, ಹಾಗು ಉಸಿರಾಟದ ವ್ಯವಸ್ಥೆಗಳು ಇರುವುದಿಲ್ಲ. ಉಪ್ಪು, ವಿನೆಗರ್ ಇವುಗಳಿಗೆ ಅಪಾಯವನ್ನೊಡ್ಡುತ್ತವೆ. ಆದರೆ ಈ ಹುಳು ಕಂಡರೆ ನೋಡಿ ಅದರ ಸೌಂದರ್ಯವನ್ನು ಆನಂದಿಸಿ ತೊಂದರೆ ನೀಡಬೇಡಿ.
ಚಂದನ್ ನಂದರಬೆಟ್ಟು