Advertisement
ಬಾಗಲಕೋಟೆ: ರಾಜ್ಯದಲ್ಲಿ ಪ್ರಭಲ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಜಿಲ್ಲೆಯ ನಾಯಕರಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದ್ದು, ಇದು ಪಕ್ಷ ಸಂಘಟನೆಗೆ ಹಿನ್ನಡೆಯಾಗಲು ಕಾರಣವಾಗುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.
Related Articles
Advertisement
ನಾಯಕರಲ್ಲಿಲ್ಲ ಸಮನ್ವಯತೆ: ಕಳೆದ 2018ರ ವಿಧಾನಸಭೆ ಚುನಾವಣೆ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸ್ಥಾನ, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಗಳು, ಕಾಂಗ್ರೆಸ್ ಪಕ್ಷದ ಜಿಲ್ಲೆಯ ನಾಯಕರಲ್ಲಿ ಸಮನ್ವಯತೆ-ಒಗ್ಗಟ್ಟು ಒಡಕಾಗಲು ಕಾರಣವಾಗಿದೆ ಎನ್ನಲಾಗಿದೆ. ಇವರೆಲ್ಲರ ಮಧ್ಯೆ ಸಿಲುಕಿರುವ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ತಮ್ಮದೇ ಶೈಲಿ-ಸಂಘಟನೆಯ ಚಾಣಾಕ್ಷತೆ ಹಾಗೂ ಅನುಭವದ ಆಧಾರದ ಮೇಲೆ ಪಕ್ಷ ಸಂಘಟನೆ, ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಚೇರಿ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ಜಿಲ್ಲೆಯ ನಾಯಕರಲ್ಲಿ ಒಮ್ಮತದ ಒಗ್ಗಟ್ಟು ಮೂಡಿದಲ್ಲಿ, ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಮಟ್ಟಿಗೆ ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಆದರೆ, ಒಂದು ಕ್ಷೇತ್ರಕ್ಕೆ ಹೋದರೆ, ಇನ್ನೊಂದು ಕ್ಷೇತ್ರದ ನಾಯಕರು ಸಿಡಿಮಿಡಿಗೊಳ್ಳುತ್ತಾರೆ. ಸಾಹೇಬ್ರ, ಅಲ್ಲಿಗೆ ಹೋಗ ಬ್ಯಾಡ್ರಿ ಅಂತಾರೆ. ಹೀಗಾಗಿ ಸಿದ್ದರಾಮಯ್ಯ ಅವರು, ಯಾರಿಗೂ ನಿಷ್ಠುರವಾಗದೇ ತಮ್ಮ ಕ್ಷೇತ್ರವಾಯಿತು, ರಾಜ್ಯದ ವಿವಿಧೆಡೆ ಪ್ರವಾಸವಾಯಿತು ಎಂಬಂತಿದ್ದಾರೆ ಎನ್ನಲಾಗಿದೆ.
ಜಿಪಂ-ತಾಪಂ ಇಲ್ಲ ತಯಾರಿ: ಜಿಲ್ಲೆಯ ಜಿ.ಪಂ ಮತ್ತು ತಾಪಂಗೆ ಚುನಾವಣೆ ನಿಗದಿಯಾಗಿವೆ. 6 ತಾಲೂಕುಗಳು 9ಕ್ಕೆ ಏರಿಕೆಯಾದರೂ, ಕ್ಷೇತ್ರಗಳು ಮಾತ್ರ 130ರಿಂದ 110ಕ್ಕೆ ಇಳಿಕೆಯಾಗಿವೆ. 36 ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. ಆಡಳಿತ ಪಕ್ಷದವರು ತಮಗೆ ಬೇಕಾದ ರೀತಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿಸಿಕೊಂಡಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಎಲ್ಲರಿಗೂ ತೀವ್ರ ಅಸಮಾಧಾನವಿದೆ. ಆದರೂ, ನಮ್ಮ ಪಕ್ಷದ ನಾಯಕರು, ಜಿಪಂ, ತಾಪಂ ಚುನಾವಣೆಗೆ ತಯಾರಿ ಮಾಡುತ್ತಿಲ್ಲ. ಅದೇ ಬಿಜೆಪಿಯಲ್ಲಿ ಸರಣಿ ಸಭೆಗಳನ್ನು ನಡೆಸಿ, ಕಾರ್ಯಕರ್ತರನ್ನು ಚುನಾವಣೆಗೆ ಅಣಿ ಮಾಡುತ್ತಿದ್ದಾರೆ. ನಮ್ಮ ನಾಯಕರು, ಚುನಾವಣೆ ಘೋಷಣೆಯಾದ ಬಳಿಕ ಮೈಕೊಡವಿ ಏಳುತ್ತಾರೆಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಹಿಡಿತ ಸಾಧಿಸಲು ಡಿಕೆಶಿ ಆಗಮನ?: ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲೇ ಕೆಲವು ಗುಂಪುಗಳಿದ್ದು, ರಾಜ್ಯ ನಾಯಕರಲ್ಲಿ ಇರುವಂತೆ ಇಲ್ಲೂ ಹಲವರಲ್ಲಿ ಭಿನ್ನ ಮಾತುಗಳಿವೆ. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು, ಅವರನ್ನೇ ಆರಾಧಿಸುವ ಕೆಲವರಿದ್ದರೆ, ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರ ನಾಯಕತ್ವ ಒಪ್ಪಿಕೊಳ್ಳುವ ಕೆಲವರಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆಯ ಮೇಲೆ ಡಿ.ಕೆ. ಶಿವಕುಮಾರ ಕಣ್ಣು ಕೂಡ ಬಿದ್ದಿದ್ದು, ಇಲ್ಲಿನ ಪಕ್ಷದ ಕೆಲ ನಾಯಕರ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅವರು ಜು.18ರಂದು ಇಡೀ ದಿನ ಜಿಲ್ಲೆಯಲ್ಲಿದ್ದು, ಪಕ್ಷದ ಪ್ರಮುಖರ ಸರಣಿ ಸಭೆಯ ಜತೆಗೆ ನೇಕಾರ ಸಮುದಾಯ ಸೆಳೆಯಲು ಸಂವಾದದ ಕಾರ್ಯಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆ ಪ್ರಭಲ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕರಲ್ಲಿ ಸಮನ್ವಯತೆ ಹಾಗೂ ಒಗ್ಗಟ್ಟು ಪ್ರದರ್ಶನ ಇಲ್ಲವೆಂಬವೆಂಬ ಕಾರ್ಯಕರ್ತರ ಬೇಸರವನ್ನು ನಾಯಕರು ಕಳೆಯುತ್ತಾರಾ ಕಾದು ನೋಡಬೇಕಿದೆ.