Advertisement

ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ

08:45 PM May 01, 2019 | Team Udayavani |

ಹನೂರು: ಫ‌ನಿ ಚಂಡಮಾರುತದ ಪ್ರಭಾವಕ್ಕೆ ಗಡಿ ಭಾಗದ ಹನೂರು ತಾಲೂಕು ತತ್ತರಿಸಿದ್ದು ಮಂಗಳವಾರ ರಾತ್ರಿ ಸುರಿದ ಬಿರುಗಾಳಿಯುಕ್ತ ಮಳೆಗೆ ಹಲವೆಡೆ ಫ‌ಸಲು ನೆಲ ಕಚ್ಚಿದ್ದು, ಮನೆಗಳು ಹಾನಿಗೀಡಾಗಿದ್ದು, ಮರಗಳು ಧರೆಗುರುಳಿವೆ.

Advertisement

ಧರೆಗುರುಳಿದ ಮರಗಳು: ಮಂಗಳವಾರ ರಾತ್ರಿ ಹನೂರು ಪಟ್ಟಣದಲ್ಲಿ ಪ್ರಾರಂಭವಾದ ಬಿರುಗಾಳಿಯಕ್ತ ಮಳೆಗೆ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದ ಬೇವಿನ ಮರ ಮುರಿದು ಬಿದ್ದಿದೆ. ಅಲ್ಲದೆ ಹನೂರು – ಬಂಡಳ್ಳಿ ಮಾರ್ಗಮಧ್ಯದಲ್ಲಿ ಚಾಮುಂಡೇಶ್ವರಿ ದೇವಾಲಯದ ಸಮೀಪ ಗೊಬ್ಬಳಿ ಮರ ಮುರಿದು ಬಿದ್ದಿದೆ.

ಹನೂರು ರಾಮಾಪುರ ಮಾರ್ಗದಲ್ಲಿ ಮಲೆ ಮಹದೇಶ್ವರ ಕ್ರೀಡಾಂಗಣದ ಸಮೀಪದ ರಾಜಶೇಖರ್‌ಮೂರ್ತಿ ಅವರ ಜಮೀನಿನಲ್ಲಿದ್ದ ತೆಂಗಿನಮರಗಳು ನೆಲಕಚ್ಚಿವೆ. ಅಲ್ಲದೆ ಜಮೀನಿನಲ್ಲಿದ್ದ ತೇಗದ ಸಸಿಕೂಡ ಮುರಿದು ಬಿದ್ದಿದೆ.

ಪಟ್ಟಣದ ಶಂಕರೇಗೌಡರ ಜಮೀನಿನಲ್ಲಿದ್ದ ಬೇವಿನ ಮರವೂ ಕೂಡ ಧರೆಗುರುಳಿದೆ. ಪರಿಣಾಮ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಪರಿಣಾಮ 1 ಗಂಟೆಗೂ ಹೆಚ್ಚು ಕಾಲ ಮ.ಬೆಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬಂಡಳ್ಳಿ ಮಾರ್ಗದಲ್ಲಿ ಗೊಬ್ಬಳಿ ಮರ ಬಿದ್ದಿದ್ದರಿಂದ ಸಂಚಾರ ಸಾಧ್ಯವಾಗದೆ ವಾಹನಗಳೆಲ್ಲಾ ವೈಶಂಪಾಳ್ಯ, ಗೂಳ್ಯ ಮಾರ್ಗವಾಗಿ ತೆರಳುತ್ತಿದ್ದವು. ಅಲ್ಲದೆ ಬರಹಳ್ಳವು ಮೈದುಂಬಿ ಹರಿಯುತ್ತಿದ್ದುದರಿಂದ ಹಳ್ಳದ ಎರಡು ಬದಿಯಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

ಗಾಳಿಗೆ ಹಾರಿದ ಮನೆಯ ಛಾವಣಿ: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಚಂದ್ರಮ್ಮ ಎಂಬುವವರು ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಮಂಗಳವಾರ ರಾತ್ರಿ ಚಂದ್ರಮ್ಮ ಮತ್ತು ಆಕೆಯ ಮಗ ಮಲ್ಲೇಶ್‌, ಸೊಸೆ ರಾಜಮ್ಮ ಎಂಬುವವರು ಮನೆಯಲ್ಲಿ ವಾಸವಿದ್ದರು.

ಈ ವೇಳೆಗೆ ಬೀಸಿದ ಭಾರೀ ಗಾಳಿಗೆ ಇತ್ತೀಚೆಗಷ್ಟೇ ನಿರ್ಮಿಸಿದ್ದ ಮನೆಯ ಮೇಲ್ಛಾವಣಿಯ ಶೀಟುಗಳು ಹಾರಿಹೋಗಿದೆ. ಘಟನೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲವಾದೂ ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಗೃಹ ಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಭಾರೀ ಗಾಳಿ ಮತ್ತು ಮಳೆ ತೀವ್ರತೆಯನ್ನು ಅರಿತ ಚಂದ್ರಮ್ಮ ಮತ್ತು ಕುಟುಂಬಸ್ಥರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಚಂದ್ರಮ್ಮ, ವಾಸಕ್ಕಾಗಿ ನಿರ್ಮಿಸಿದ್ದ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಿಂದ ಕುಟುಂಬ ಕಂಗಾಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಮುರಿದುಬಿದ್ದ ಸಾವಿರಾರು ಬಾಳೆಗಿಡಗಳು: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ನೆಲಕ್ಕುರುಳಿವೆ. ಬಾಳೆ ಬೆಳೆದು ಇನ್ನೇನು ಫ‌ಸಲು ಕೈ ಸೇರುವ ಖುಷಿಯಲ್ಲಿದ್ದ ರೈತರಿಗೆ ಫ‌ನಿ ಚಂಡಮಾರುತ ಬರ ಸಿಡಿಲಿನಂತೆ ಬಡಿದಿದೆ.

ಬಾಳೆ ಫ‌ಸಲು ನೆಲಕಚ್ಚಿರುವುದರಿಂದ ಸರಿ ಸುಮಾರು ತಾಲೂಕು ವ್ಯಾಪ್ತಿಯ ರೈತರಿಗೆ ಸರಿ ಸುಮಾರು 50ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹನೂರು ಪಟ್ಟಣದ ಒಂದರಲ್ಲಿಯೇ ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗಿಡಗಳು ನೆಲಕ್ಕುರುಳಿವೆ.

ಕಗ್ಗತ್ತಲಿನಲ್ಲಿ ಹನೂರು ಪಟ್ಟಣ: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ಹನೂರು ಪಟ್ಟಣದ ಹಲವೆಡೆ ವಿದ್ಯುತ್‌ ಕಂಬಗಳೂ ಧರೆಗುರುಳಿದ ಪರಿಣಾಮವಾಗಿ ಪಟ್ಟಣದ ಆಶ್ರಯ ಬಡಾವಣೆ, ದೇವಾಂಗಪೇಟೆ, ಆರ್‌.ಎಸ್‌.ದೊಡ್ಡಿ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ನಿಲುಗಡೆಗೊಂಡ ವಿದ್ಯುತ್‌ ಬುಧವಾರ ಮಧ್ಯಾಹ್ನ 6 ಗಂಟೆಯಾದರೂ ಬಂದಿರಲಿಲ್ಲ.

ಅಲ್ಲದೆ ಹನೂರು ಪಟ್ಟಣದಲ್ಲಿ ಮಹಿಷಾಸುರ ಮರ್ಧಿನಿ ಅಮ್ಮನವರ ಜಾತ್ರಾ ಮಹೋತ್ಸವವಿದ್ದ ಹಿನ್ನೆಲೆ ಬಂಧು ಬಳಗದವರನ್ನು ಹಬ್ಬಕ್ಕೆ ಆಹ್ವಾನಿಸಿದ್ದ ಹಿನ್ನೆಲೆ ವಿದ್ಯುತ್‌ ಸಮಸ್ಯೆಯಿಂದಾಗಿ ಮಾಂಸಾಹಾರ ಭೋಜನವನ್ನೂ ವ್ಯವಸ್ಥೆ ಮಾಡಲಾಗದೆ ತೊಂದರೆ ಅನುಭವಿಸಿದ್ದರಿಂದ ಸೆಸ್ಕ್ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.

ತಾಲೂಕು ವ್ಯಾಪ್ತಿಯಲ್ಲಿ ಬಾಳೆ ಫ‌ಸಲು ನೆಲಕಚ್ಚಿರುವುದು ತಿಳಿದಿದ್ದು ಈ ಸಂಬಂಧ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆ ಹಾನಿಗೀಡಾಗಿರುವ ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು.
-ನರೇಂದ್ರ ರಾಜುಗೌಡ, ಶಾಸಕರು, ಹನೂರು ಕ್ಷೇತ್ರ.

Advertisement

Udayavani is now on Telegram. Click here to join our channel and stay updated with the latest news.

Next