Advertisement

ದಶಕಗಳಿಂದ ಮಳಿಗೆಗಳ ದರ ಪರಿಷ್ಕರಣೆ ಆಗಿಲ್ಲ..!

04:19 PM Sep 19, 2021 | Team Udayavani |

ಕನಕಪುರ: ಪ್ರಸ್ತುತ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿರುವ ಹಾರೋಹಳ್ಳಿ ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರದ ಬೊಕ್ಕಸ ಸೇರಬೇಕಿದ್ದ ತೆರಿಗೆ ಹಣ ಮಧ್ಯವರ್ತಿಗಳ ಖಜಾನೆ ಸೇರಿದ್ದು ಇದರಿಂದ ಹಾರೋಹಳ್ಳಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾಣದಂತಾಗಿದೆ.

Advertisement

ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ:ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುವ ಹೊಸ್ತಿಲಲ್ಲಿರುವ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಗ್ರಾಪಂ ಕಚೇರಿಯಲ್ಲಿ ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಇಚ್ಛಾಶಕ್ತಿ ಕೊರತೆಯಿಂದ ನಗರ ಮತ್ತು ಜನರ ಅಭಿವೃದ್ಧಿಗೆ ವಿನಿಯೋಗವಾಗಬೇಕಿದ್ದ ಅಂಗಡಿ ಮಳಿಗೆಗಳ ಕೋಟಿ ಕೋಟಿ ತೆರಿಗೆ ಹಣ ಸರ್ಕಾರದ ಖಜಾನೆ ಸೇರಿಲ್ಲ.

2003ರಿಂದಲೂ 600-800 ರೂ.ಬಾಡಿಗೆ:
ಮಹಾನಗರ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಹಾರೋಹಳ್ಳಿ ಹೋಬಳಿ ಕೇಂದ್ರವಾದರೂ ವ್ಯಾಪಾರ ವಹಿವಾಟಿನಲ್ಲಿ ಮುಂಚೂಣಿ ಯಲ್ಲಿತ್ತು. ಗ್ರಾಪಂಗೆ ಸೇರಿದ ಸುಮಾರು ಇನ್ನೂರಕ್ಕೂ ಹೆಚ್ಚು ಅಂಗಡಿ ಮಳಿಗೆಗಳಲ್ಲಿ ಬಹುತೇಕ ಅಂಗಡಿ ಮಳಿಗೆಗಳು 2003ರಲ್ಲಿ ನಿಯಮಾ ನುಸಾರ ಹರಾಜು ಪ್ರಕ್ರಿಯೆ ನಡೆಸಿ ಪ್ರತಿ ಮಳಿಗೆಗೆ 600-800ರವರೆಗೂ ಬಾಡಿಗೆ ನಿಗದಿಯಾಗಿತ್ತು. ಆದರೆ 2ದಶಕಗಳು ಕಳೆಯುತ್ತಾ ಬಂದರೂ ಅಂಗಡಿ ಮಳಿಗೆಗಳ ಬಾಡಿಗೆ ದರ ಪರಿಷ್ಕರಣೆ ನಡೆದಿಲ್ಲ ಇದರಿಂದ ಗ್ರಾಪಂಗೆ ನಿರೀಕ್ಷಿತ ಆದಾಯವೇ ಹರಿದು ಬಂದಿಲ್ಲ.

2 ವರ್ಷಕ್ಕೊಮ್ಮೆ ದರ ಪರಿಷ್ಕರಣೆ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಸ್ವಾಮ್ಯದಲ್ಲಿರುವ ಸುಮಾರು 262 ಮಳಿಗೆಗಳಲ್ಲಿ 120ಕ್ಕೂ ಹೆಚ್ಚು ಮಳಿಗೆಗಳ ಕಟ್ಟಡ ಸುಸ್ಥಿತಿಯಲ್ಲಿದೆ. ಕಳೆದ 2003ರಲ್ಲಿ ಹರಾಜು ಮೂಲಕ ನಿಗದಿಪಡಿಸಿದ 800ರೂ.ಹಳೆ ಬಾಡಿಗೆಯನ್ನೆ ಇಂದಿಗೂ ನೀಡುತ್ತಾ ಬಂದಿದ್ದಾ ರೆ. ನಿಯಮಗಳ ಪ್ರಕಾರ ಪ್ರತಿ 2 ವರ್ಷಕ್ಕೊಮ್ಮೆ ನಗರಾಭಿವೃದ್ಧಿ ಮತ್ತು ವ್ಯಾಪಾರ-ವಹಿವಾಟು ಗಮನದಲ್ಲಿಟ್ಟುಕೊಂಡು ಮಳಿಗೆಗಳ ಸ್ಥಿತಿಗತಿಗಳಿಗೆ ತಕ್ಕಂತೆ ಬಾಡಿಗೆದರ ಪರಿಷ್ಕರಣೆ ಮಾಡಿ ಬಾಡಿಗೆ ದರ ಏರಿಕೆ ಮಾಡಬೇಕು. ಇದರಿಂದ ಸಂಗ್ರಹವಾಗುವ ತೆರಿಗೆ ಹಣ ಸದ್ಬಳಕೆ ಮಾಡಿಕೊಂಡು ನಗರದ ಅಭಿವೃದ್ಧಿ ಮಾಡುವ ಹೊಣೆ ಹೊತ್ತಿದ್ದ ಗ್ರಾಪಂ ಈವರೆಗೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಇಚ್ಛಾಶಕ್ತಿ ಕೊರತೆಯಿಂದ ಎರಡು ದಶಕಗಳು ಕಳೆಯುತ್ತಾ ಬಂದಿದ್ದರೂ ಅಂಗಡಿ ಮಳಿಗೆಗಳ ದರ ಪರಿಷ್ಕರಣೆ ಮಾಡುವ ಗೋಜಿಗೆ ಹೋಗಿಲ್ಲ.

ಇದನ್ನೂ ಓದಿ:ವಿಡಿಯೋ: ಯುವರಾಜ್ ಸಿಂಗ್’ ಐತಿಹಾಸಿಕ ಸಿಕ್ಸರ್’ ಸಾಧನೆಗೆ ಇಂದಿಗೆ 14 ವರ್ಷ

Advertisement

ಸಾವಿರಾರು ರೂ.ಬಾಡಿಗೆ ವಸೂಲಿ: ಹರಾಜು ಪ್ರಕ್ರಿಯೆ ಮೂಲಕ ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡ ವ್ಯಾಪಾರಿಗಳೇ ವಹಿವಾಟು ನಡೆಸಬೇಕು. ಆದರೆ ಹರಾಜು ಮೂಲಕ ಬಾಡಿಗೆ ಪಡೆದ ಕೆಲವರು ಮತ್ತೂಬ್ಬರಿಗೆ, ಮಗದೊಬ್ಬರಿಗೆ ಹೀಗೆ ಮೂರನೇ ವ್ಯಕ್ತಿಗಳು ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಹರಾಜು ಮೂಲಕ ಬಾಡಿಗೆ ಪಡೆದ ಮಧ್ಯವರ್ತಿಗಳು ವ್ಯಾಪಾರಿಗಳಿಂದ ಸಾವಿರಾರು ರೂ.ಬಾಡಿಗೆ ವಸೂಲಿ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬಂದ ಆರೋಪ.

ವ್ಯಾಪಾರ-ವಹಿವಾಟು ದುಪ್ಪಟ್ಟು: ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತು ಜನಸಂಖ್ಯೆ ವ್ಯಾಪಾರ-ವಹಿವಾಟು ಇಮ್ಮಡಿಯಾಗಿದೆ. ಜೊತೆಗೆ ಹಾರೋಹಳ್ಳಿ ಗ್ರಾಪಂ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಇನ್ನು ಕೆಲವೇ ದಿನಗಳಲ್ಲಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಆಡಳಿತಾತ್ಮಕ ಚಟುವಟಿಕೆಗಳು ಗರಿಗೆದರಲಿವೆ. ತಾಲೂಕು ಕೇಂದ್ರವಾಗಿ ರಚನೆಯಾದ ನಂತರ ನಗರದ ಮೂಲಭೂತ ಸೌಲಭ್ಯ ಸೇರಿದಂತೆ ಬಹಳಷ್ಟು ಅಭಿವೃದ್ಧಿ ಕಾಣಬೇಕಿದೆ. ಇದೆಲ್ಲದಕ್ಕೂ ಆರ್ಥಿಕ ಸಂಪನ್ಮೂಲ ಅಗತ್ಯವಿದೆ.

ನಿರುದ್ಯೋಗಿಗಳಿಗೆ
ಆದ್ಯತೆ ನೀಡಿ
ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಮ್ಮ ಸ್ವಾಮ್ಯದಲ್ಲಿರುವ ಅಂಗಡಿ ಮಳಿಗೆಗಳ ಸ್ಥಿತಿಗತಿಗಳನ್ನು ತಕ್ಕಂತೆ ನಗರದ ಅಭಿವೃದ್ಧಿ ಮತ್ತು ವ್ಯಾಪಾರ ವಹಿವಾಟಿಗೆ ಅನುಗುಣವಾಗಿ ಮಳಿಗೆಗಳ ದರ ಪರಿಷ್ಕರಣೆ ಮಾಡಿ ಮರು ಹರಾಜು ಮೂಲಕ ಆಸಕ್ತಿ ಇರುವ ನಿರುದ್ಯೋಗಿಗಳಿಗೆ ಹರಾಜು ಮೂಲಕ ಪಡೆಯಲು ಮೊದಲ ಆದ್ಯತೆ ಕೊಡಬೇಕು. ಇದರಿಂದ ಮಳಿಗೆಗಳಿಂದ ಹೆಚ್ಚಿನ ಬಾಡಿಗೆಯೂ ಹರಿದು ಬರಲಿದ್ದು ತಾಲೂಕು ಕೇಂದ್ರವಾಗಿ ರೂಪಗೊಂಡ ನಂತರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಈಗಷ್ಟೇ ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ಆಡಳಿತಾತ್ಮಕ ಚಟುವಟಿಕೆಗಳು ಆರಂಭವಾಗಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಗಡಿ ಮಳಿಗೆಗಳನ್ನು ಮರು ಹರಾಜು ನಡೆಸಲಾಗುವುದು. ನೆಲ ಸುಂಕ ವಸೂಲಿ, ಸಂತೆ ವಸೂಲಿಗೂ ದರ ನಿಗದಿ ಮಾಡಿ ಪಟ್ಟಣ ಪಂಚಾಯ್ತಿ ಆದಾಯ ಸೋರಿಕೆ ಆಗದಂತೆ ಕ್ರಮ ವಹಿಸುತ್ತೇವೆ.
– ನವೀನ್‌ ಕುಮಾರ್‌, ಮುಖ್ಯಾಧಿಕಾರಿ,
ಹಾರೋಹಳ್ಳಿ ಪಟ್ಟಣ ಪಂಚಾಯ್ತಿ

Advertisement

Udayavani is now on Telegram. Click here to join our channel and stay updated with the latest news.

Next